ADVERTISEMENT

ಶಾಂತಿನಿಕೇತನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 19:30 IST
Last Updated 28 ಅಕ್ಟೋಬರ್ 2017, 19:30 IST
ರವೀಂದ್ರನಾಥ ಟ್ಯಾಗೋರ
ರವೀಂದ್ರನಾಥ ಟ್ಯಾಗೋರ   

*ಶಾಂತಿ ನಿಕೇತನ ಎಲ್ಲಿದೆ?
ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ಬೋಲ್‌ಪುರ್‌ ಬಳಿಯಲ್ಲಿನ ಸಣ್ಣ ವಿಶ್ವವಿದ್ಯಾಲಯ ಶಾಂತಿನಿಕೇತನ. ಕೋಲ್ಕತ್ತದಿಂದ ಉತ್ತರಕ್ಕೆ 180 ಕಿ.ಮೀ. ದೂರದಲ್ಲಿದೆ.

*ಅದನ್ನು ಸ್ಥಾಪಿಸಿದ್ದು ಯಾವಾಗ?
ರವೀಂದ್ರನಾಥ ಟ್ಯಾಗೋರರ ತಂದೆ ದೇವೇಂದ್ರನಾಥ್ ಶಾಂತಿನಿಕೇತನ ಎಂದು ಹೆಸರು ಇಟ್ಟಿದ್ದು. ಧ್ಯಾನಕ್ಕೆ ಇದು ಹೇಳಿಮಾಡಿಸಿದ ಸ್ಥಳ ಎಂದು 1863ರಲ್ಲಿ ಇಲ್ಲಿ ಒಂದು ಆಶ್ರಮವನ್ನು ಅವರು ಸ್ಥಾಪಿಸಿದರು. ಅಲ್ಲಿ ಟ್ಯಾಗೋರರು ಪಾಠ ಭವನ ಎಂಬ ಶಾಲೆ ಪ್ರಾರಂಭಿಸಿದರು. 1901ರಲ್ಲಿ ಅವರು ಐದೇ ವಿದ್ಯಾರ್ಥಿಗಳೊಡನೆ ಶುರುಮಾಡಿದ ಶಾಲೆ ಅದು. 1913ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಮೇಲೆ, ಶಾಲೆಯನ್ನು ಕಾಲೇಜಾಗಿ ವಿಸ್ತರಿಸಲು 1921ರಲ್ಲಿ ಬಹುಮಾನದ ಮೊತ್ತವನ್ನು ವಿನಿಯೋಗಿಸಿದರು. ಅದಕ್ಕೆ ‘ವಿಶ್ವ–ಭಾರತಿ’ ಎಂದು ಹೆಸರಿಟ್ಟರು. ಅದಕ್ಕೆ 1951ರಲ್ಲಿ ವಿಶ್ವವಿದ್ಯಾಲಯದ ಮಾನ್ಯತೆ ಸಿಕ್ಕಿತು.

*ಶಾಲೆ ಹೇಗಿರಬೇಕು ಎಂದು ಟ್ಯಾಗೋರ್ ಬಯಸಿದ್ದರು?
ಭಾರತ ಹಾಗೂ ವಿಶ್ವಕ್ಕೆ ಕೊಂಡಿಯಾಗಬಲ್ಲ ಶಿಕ್ಷಣ ಕ್ರಮವನ್ನು ಟ್ಯಾಗೋರ್ ಬಯಸಿದ್ದರು. ಪೂರ್ವ ಹಾಗೂ ಪಶ್ಚಿಮದ ಭಿನ್ನ ಸಂಸ್ಕೃತಿಗಳನ್ನು ವಿದ್ಯಾರ್ಥಿಗಳು ಭಾರತೀಯ ನೆಲೆಗಟ್ಟಿನಲ್ಲಿ ಅಭ್ಯಾಸ ಮಾಡಬೇಕು ಎಂಬ ಉದ್ದೇಶವಿತ್ತು. ಅದಕ್ಕೇ ಗುರುಕುಲ ಪದ್ಧತಿಯನ್ನು ಜಾರಿಗೆ ತಂದರು. ವಿದ್ಯಾರ್ಥಿಗಳಿಗೆ ಭಾವನಾತ್ಮಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣವನ್ನು ಶಿಕ್ಷಕರು ನಿಸರ್ಗದ ಮಡಿಲಿನಲ್ಲಿ ಬೋಧಿಸುವಂತೆ ಮಾಡಿದರು.

ADVERTISEMENT

*ಅಲ್ಲಿ ಕಲಿತವರಲ್ಲಿ ಹೆಸರುವಾಸಿಯಾದವರು ಯಾರು ಯಾರು?
ಗಾಯತ್ರಿ ದೇವಿ, ಇಂದಿರಾ ಗಾಂಧಿ, ಸತ್ಯಜಿತ್ ರೇ, ಅಬ್ದುಲ್ ಘನಿ ಖಾನ್ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಅಮರ್ತ್ಯ ಸೆನ್ ಅಲ್ಲಿ ಕಲಿತ ಹೆಸರಾಂತ ವ್ಯಕ್ತಿಗಳು.

*ಅಲ್ಲಿನ ಪ್ರಮುಖ ಆಕರ್ಷಣೆಗಳೇನು?
ಕಲೆ, ಸಂಗೀತ ಹಾಗೂ ನೃತ್ಯಗಳ ಆಗರ ಶಾಂತಿನಿಕೇತನ. ಬಸಂತ ಉತ್ಸವ ಹಾಗೂ ರವೀಂದ್ರ ಜಯಂತಿ ಅಲ್ಲದೆ ವರ್ಷವಿಡೀ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಬಸಂತ ಉತ್ಸವ ಮೂರು ದಿನ ಅದ್ದೂರಿಯಾಗಿ ನಡೆಯುತ್ತದೆ. ವಿವಿಧ ರಾಜ್ಯಗಳ ಕಲಾವಿದರು, ಸಂಗೀತಗಾರರು ಈ ಸಂದರ್ಭಕ್ಕೆ ಸಾಕ್ಷಿಯಾಗುತ್ತಾರೆ.

ಉಪಾಸನಾ ಗೃಹ ಎಂಬ ದೊಡ್ಡ ಪ್ರಾರ್ಥನಾ ಮಂದಿರ ಇಲ್ಲಿದೆ. ಅದನ್ನು ಟ್ಯಾಗೋರ್ ತಂದೆ ನಿರ್ಮಿಸಿದರು. ಬಣ್ಣದ ಬೆಲ್ಜಿಯಂ ಗಾಜಿನಿಂದ ಅದನ್ನು ನಿರ್ಮಿಸಲಾಗಿದೆ. ಕಲಾಭವನವು ದೃಶ್ಯ ಕಲೆಗಳನ್ನು ಕಲಿಸುವ ಪ್ರಮುಖ ಸಂಸ್ಥೆ. ಕವಿ ಜೀವಿತದ ಅವಧಿಯಲ್ಲಿ ಕಾಲ ಕಳೆದಿದ್ದ ರೀತಿಯನ್ನು ಉತ್ತರಾಯಣ ಸಂಕೀರ್ಣ ನೆನಪಿಸುತ್ತದೆ.

*

ಚೆಕ್ಕಿನ ಸುತ್ತ ಟರ್ಕಿ ಕೋಳಿ
ಟರ್ಕಿ ಕೋಳಿಗಳು ವೃತ್ತಾಕಾರದಲ್ಲಿ ಮೃತ ಬೆಕ್ಕಿನ ಸುತ್ತ ಠಳಾಯಿಸುವ ವಿಡಿಯೊ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಬೋಸ್ಟನ್‌ನಲ್ಲಿ ನಡೆದ ಘಟನೆ ಇದು. ತನ್ನ ಕಡುವೈರಿ ಬೆಕ್ಕು ನಿಜಕ್ಕೂ ಮೃತಪಟ್ಟಿದೆಯೇ ಎಂದು ಖಚಿತಪಡಿಸಿಕೊಳ್ಳಲು ಹಕ್ಕಿಗಳು ಈ ರೀತಿ ಮಾಡುತ್ತವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟರು.

*
 


ಚೆಂಡುಹೂವು ವಿಶ್ವದ ಹಲವೆಡೆ ಸೂರ್ಯನ ಜೊತೆಗೆ ತಳಕು ಹಾಕಿಕೊಂಡಿದೆ. ಕಾಲ್ತಾ ಎಂಬುವಳು ಸೂರ್ಯದೇವ ಅಪೊಲೊ ಪ್ರೇಮಪಾಶದಲ್ಲಿ ಬಿದ್ದಳು. ಹೊಲದಲ್ಲಿ ರಾತ್ರಿಯಿಡೀ ಇದ್ದು, ಬೆಳಿಗ್ಗೆ ದೇವರ ದರ್ಶನ ಮಾಡಬೇಕು ಎನ್ನುವುದು ಅವಳ ಮಹತ್ವಾಕಾಂಕ್ಷೆಯಾಗಿತ್ತು. ಕಾದು ಕಾದು ಸುಸ್ತಾಗಿ ಒಮ್ಮೆ ಅವಳು ಅಸುನೀಗಿದಳು. ಆ ಜಾಗದಲ್ಲಿ ಸೂರ್ಯನ ಬಣ್ಣದ ಹೂ ಬಿಡುವ ಗಿಡ ಹುಟ್ಟಿತು ಎಂದು ಗ್ರೀಕ್ ಕಥೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.