ADVERTISEMENT

ಶ್ರೀಮಂತಿಕೆಯ ಭಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST

ನಿರಂಜನನಿಗೆ ತನ್ನ ಬಡತನದ ಬಗ್ಗೆ ಜಿಗುಪ್ಸೆ. ಅವನ ತಂದೆ ತರಕಾರಿ ವ್ಯಾಪಾರಿ. ಅವರು ಅವನನ್ನು ಒಳ್ಳೆಯ ಶಾಲೆಯಲ್ಲಿ ಓದಿಸುತ್ತಿದ್ದರೂ ಅವನಿಗೆ ದೊಡ್ಡ ಮನೆ ಮತ್ತು ಕಾರುಗಳಿಲ್ಲ ಎಂಬ ನೋವು. ಅವನು ಯಾವಾಗಲೂ ‘ಅಪ್ಪಾ ನನ್ನ ಗೆಳೆಯ ಸುನೀಲ ದಿನಾ ಕಾರಿನಲ್ಲಿ ಸ್ಕೂಲಿಗೆ ಬರುತ್ತಾನೆ. ಅವನದು ದೊಡ್ಡ ಮನೆ. ಅವನ ಮನೆಗೆ ಸಿನಿಮಾದವರು, ದೊಡ್ಡ ದೊಡ್ಡ ಶ್ರೀಮಂತರು ಬರುತ್ತಾರಂತೆ. ಅವನ ಮನೆಯಲ್ಲಿ ಎಲ್ಲದಕ್ಕೂ ಆಳುಗಳಿದ್ದಾರಂತೆ. ನಾವು ಅಷ್ಟು ದೊಡ್ಡ ಶ್ರೀಮಂತರಾಗುವುದು ಯಾವಾಗ?’ ಎನ್ನುತ್ತಿದ್ದ.

ಒಂದು ದಿನ ನಿರಂಜನನ ಅಪ್ಪ ಅವನ ಕೈಗೆ ಹತ್ತು ಸಾವಿರ ರೂಪಾಯಿ ಕೊಟ್ಟು ಮನೆಗೆ ತೆಗೆದುಕೊಂಡು ಹೋಗಿ ಕೊಡಲು ಹೇಳಿದರು.

ಅವನು ಅದನ್ನು ಜೇಬಿನಲ್ಲಿಟ್ಟುಕೊಂಡು, ಪದೇ ಪದೇ ಜೇಬನ್ನು ಮುಟ್ಟಿ ಮುಟ್ಟಿ ನೋಡಿಕೊಂಡು ಮನೆಗೆ ತೆಗೆದುಕೊಂಡು ಹೋಗಿ ಕೊಟ್ಟು ನಿಟ್ಟುಸಿರುಬಿಟ್ಟ.

ಅಂದು ರಾತ್ರಿ ಅವರ ತಂದೆ, ‘ನೋಡು ಮಗು. ನಾನು ನಿನಗೆ ಸಾಮಾನ್ಯವಾಗಿ ಹತ್ತು ರೂಪಾಯಿ ನೀಡುತ್ತಿದ್ದೆ. ಆಗ ನೀನು ನಿರಾತಂಕವಾಗಿ ಮನೆಗೆ ಬಂದು ಸೇರುತ್ತಿದ್ದೆ. ನಿನ್ನಿಷ್ಟ ಬಂದದ್ದನ್ನು ಖರೀದಿಸಿ ತಿಂದು, ದಾರಿಯುದ್ದನ್ನೂ ಸಿಗುವ ಪರಿಚಿತರನ್ನು ಮಾತನಾಡಿಸಿಕೊಂಡು ಮನೆಗೆ ಬರುತ್ತಿದ್ದೆ. ಆದರೆ ಇಂದು ನಿನ್ನ ಮುಖದಲ್ಲಿ ಖುಷಿ ಇರಲಿಲ್ಲ.

ಯಾರಾದರೂ ಹಣ ಕದ್ದಾರು ಎಂಬ ಆತಂಕದಲ್ಲಿ ಇಷ್ಟವಾದರೂ ಏನನ್ನೂ ತಿನ್ನದೇ, ಯಾರನ್ನೂ ಮಾತನಾಡಿಸದೇ ಮನೆಗೆ ಬಂದು ಸೇರಿದೆ. ಈ ಸಂಜೆಯ ಖುಷಿಯನ್ನು ಕಳೆದುಕೊಂಡೆ. ಈ ಹಣ ನಿನ್ನ ಸ್ವಾತಂತ್ರ್ಯವನ್ನು, ನೆಮ್ಮದಿಯನ್ನು ಕಿತ್ತುಕೊಂಡಿತು. ಈಗ ಹೇಳು, ಶ್ರೀಮಂತರಾಗಿ ನಾವು ಭಯದಲ್ಲಿ ಬದುಕಬೇಕಾ? ಅಥವಾ ಅಗತ್ಯವಿದ್ದಷ್ಟು ಮಾತ್ರ ಗಳಿಸಿ ನೆಮ್ಮದಿಯಾಗಿರಬೇಕಾ?’ ಎಂದರು.

ಅಪ್ಪನ ಮಾತು ಕೇಳಿ ನಿರಂಜನನ ಮುಖ ಅರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.