ವ್ಯಾಖ್ಯೆಗಳು ಬದುಕಲ್ಲ
ಬದುಕೆಂಬುದೊಂದು ಕಲೆ
ದಿವ್ಯಕ್ಕೆ ಋಣ ಹೊತ್ತ ಕಾಲಪುರುಷ
ಗರ್ಭಗುಡಿ ಕತ್ತಲೊಳು
ತೈಲ ನೀಲಾಂಜನ
ಕೂಡಿ ಕಳಚುವ ಕೊಂಡಿ ನಿತ್ಯ ಹರುಷ
ಬ್ರಹ್ಮಾಂಡವೇ ಒಗಟು
ಪ್ರಶ್ನೆಗಳ ಗಂಟಲ್ಲಿ, ಬಿಟ್ಟು ಕೊಡದೇ ಉಳಿದ
ದಟ್ಟ ಮೌನ
ಎದುಬದುರು ಕನ್ನಡಿ ಜೋಡಿ
ಕರ್ಮದಲಿ ಬಸವಳಿದು
ಅನಂತ ಬಿಂಬಗಳ ಶೂನ್ಯಯಾನ
ದೇವರಿದ್ದರೆ ಎಲ್ಲಿ
ನಂಬಿಗೆಯ ಬುಡಖಾಲಿ
ಮನುಕುಲದ ಹಾಡಲ್ಲಿ ಹಾಲಾಹಲ
ಗುಬ್ಬಿ ಕಟ್ಟುವ ಗೂಡು
ಹಾರಾಟ ಚೀರಾಟ
ಮೈಥುನದ ಹೊರೆ ಭಾರ ಜೀವ ಗೋಲ
ಹೀಗೇ ಸಾಗುವ ದಾರಿ
ಬೀಜವೃಕ್ಷದ ನ್ಯಾಯ
ಇದು ಸತ್ಯ, ಇದು ಖಾತ್ರಿ ಎಂಬುದಿಲ್ಲ
ನಡೆಯುತ್ತಲೇ ಇರುವ
ಹೆಜ್ಜೆಗಳ ಜಾತ್ರೆಯಲಿ
ಸರ್‌ರ್ ಅಂತ ಗಡಿಯಾರ ನಿಂತಿತಲ್ಲ?
ಲಂಬಕದ ಬಿಸಿ ಚಿಲುಮೆ ಬತ್ತಿತಲ್ಲ
ಅಯ್ಯೋ, ಬತ್ತಿತಲ್ಲ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.