ADVERTISEMENT

ಸಿಂಗಪುರದ ಅಪೂರ್ವ ಪಕ್ಷಿಕಾಶಿ

ಮಂಜುಳಾ ರಾಜ್
Published 30 ಜನವರಿ 2016, 19:30 IST
Last Updated 30 ಜನವರಿ 2016, 19:30 IST
ಕೇಸರಿ ಬಣ್ಣದ ಬಳುಕುವ ಕಾಲುಗಳ ಮೇಲೆ ವಿಶ್ವ ಸುಂದರಿಯ ಪೋಸು ಕೊಡುವ ರಾಜಹಂಸಗಳು
ಕೇಸರಿ ಬಣ್ಣದ ಬಳುಕುವ ಕಾಲುಗಳ ಮೇಲೆ ವಿಶ್ವ ಸುಂದರಿಯ ಪೋಸು ಕೊಡುವ ರಾಜಹಂಸಗಳು   

ನಾವು ಸಿಂಗಪುರದಲ್ಲಿ ಟ್ಯಾಕ್ಸಿಗಳಲ್ಲಿ ಓಡಾಡುತ್ತಿದ್ದಾಗ ಅಲ್ಲಿನ ಡ್ರೈವರ್‌ಗಳು ‘ಬಪ್ಪಾ ಬಪ್ಪಾ’ ಎಂದು ಹೇಳುತ್ತಿದುದನ್ನು ನನ್ನ ಮೊಮ್ಮಕ್ಕಳು ತಮಾಷೆ ಮಾಡುತ್ತಿದ್ದರು. ಮೊದಲು ನನಗೆ ಅದೇನೆಂದು ಅರ್ಥವಾಗಲೇ ಇಲ್ಲ. ಪಕ್ಷಿಗಳ ಉದ್ಯಾನವನ್ನು (ಬರ್ಡ್ ಪಾರ್ಕ್‌) ಅವರು ‘ಬಪ್ಪಾ’ ಎಂದು ಉಚ್ಚರಿಸುತ್ತಿದ್ದಾರೆ ಎನ್ನುವುದು ನಂತರ ತಿಳಿಯಿತು. ಈ ‘ಬಪ್ಪಾ’ ಪಕ್ಷಿಜಗತ್ತಿನ ಒಂದು ಅಪೂರ್ವ ಸಂಕಲನ. ಪಕ್ಷಿಪ್ರಿಯರು ಸಿಂಗಪುರದ ಈ ‘ಬರ್ಡ್‌ ಪಾರ್ಕ್‌’ಗೆ ಜೀವಮಾನದಲ್ಲೊಮ್ಮೆ ಭೇಟಿ ಕೊಡಲೇಬೇಕು.

ಪಕ್ಷಿಗಳನ್ನು ಪಂಜರದೊಳಗೆ ಇಡದೆ, ನೈಸರ್ಗಿಕವಾಗಿ ಕಾಡನ್ನು ಸೃಷ್ಟಿ ಮಾಡಿ ಪಕ್ಷಿಗಳನ್ನು ಆಕರ್ಷಿಸಿರುವುದು ಈ ಉದ್ಯಾನದ ವಿಶೇಷ. ಎಷ್ಟೊಂದು ಜಾತಿಯ ಪಕ್ಷಿಗಳು! ಇವುಗಳ ಪಿಸುಗುಟ್ಟುವಿಕೆಯನ್ನು, ಕಲರವವನ್ನು ಕಿವಿತುಂಬಿಕೊಳ್ಳುವುದು ಒಂದು ಅದ್ಭುತ ಕಛೇರಿ ಕೇಳಿದ ಅನುಭವ ನೀಡಬಲ್ಲದು. ಅವುಗಳಿಗೆ ಆಹಾರ ನೀಡುವ ಅನುಭವವಂತೂ ಮತ್ತೂ ವಿಶಿಷ್ಟವಾದುದು.

ಐವತ್ತು ಎಕರೆಗಳಷ್ಟು ವಿಶಾಲವಾದ ತಾಣದಲ್ಲಿ ಸಿಂಗಪುರದ ಜುರಾಂಗೋ ಜಿಲ್ಲೆಯ ‘ಜುರಾಂಗೋ ಬೆಟ್ಟ’ದ ಇಳಿಜಾರಿನಲ್ಲಿ ಈ ಪಕ್ಷಿಧಾಮವನ್ನು ರೂಪಿಸಲಾಗಿದೆ. ಡಾಕ್ಟರ್ ಘೋ ಎನ್ನುವವರ ಕನಸಿನ ಕೂಸು ಈ ಪಕ್ಷಿಕಾಶಿ. ಕಾಂಕ್ರೀಟ್ ಕಟ್ಟಡಗಳಿಂದ ದೂರ ಇರುವ ನಿಸರ್ಗದ ಜೊತೆ ಹಕ್ಕಿಗಳ ಬದುಕನ್ನು ಸಮೀಕರಿಸುವ ಆಶಯ ಘೋ ಅವರದಾಗಿತ್ತು. ಅವರ ಆಸೆ ಈಗ ಸಾಕಾರಗೊಂಡಿದ್ದು, ವಿಶ್ವದ ಅತ್ಯದ್ಭುತ ಪಕ್ಷಿ ಪ್ರಭೇದಗಳು ಇಲ್ಲಿ ನೋಡಲು ದೊರಕುತ್ತವೆ. ಉದ್ದನೆಯ ಕೇಸರಿ ಬಣ್ಣದ ಕಾಲುಗಳನ್ನು ಬಳುಕಿಸುತ್ತಾ ತೆಳು ಗುಲಾಬಿ ಬಣ್ಣದ ದೇಹವನ್ನು ಹೊತ್ತು ವಿಶ್ವ ಸುಂದರಿಯರಂತೆ ನಡೆಯುವ ರಾಜಹಂಸಗಳ ದೊಡ್ಡ ಹಿಂಡನ್ನು ನೋಡಲೆರಡು ಕಣ್ಣು ಸಾಲದು.

ಮನುಷ್ಯ ನಿರ್ಮಿತ ಜಲಪಾತ!
ಸುಮಾರು ಎರಡು ಹೆಕ್ಟೇರ್‌ಗಳಷ್ಟು ವಿಶಾಲವಾದ ಈ ಕಾಡು ಬಲೆಗಳ ಬೇಲಿಗಳಿಂದ ಆವೃತ್ತವಾಗಿದೆ. ಪಕ್ಷಿಗಳು ಕಾಡಿನಿಂದ ಹೊರಗೆ ಹೋಗಬಾರದು ಎನ್ನುವುದು ಈ ಬಲೆಗಳ ಉದ್ದೇಶ. ಈ ಉದ್ಯಾನದಲ್ಲಿ ಐವತ್ತು ಜಾತಿಯ 600 ಪಕ್ಷಿಗಳು ಹಾರಾಡುತ್ತಿರುತ್ತವೆ. ಚಿನ್ನದ ಬಣ್ಣದ ಮೈಯನ್ನು ಹೊತ್ತ ಸ್ಟಾರ್ಲಿಂಗ್, ಟುರಕೊಸ್, ಹೂಫೋ– ಹೀಗೆ, ಉಚ್ಚರಿಸಲೇ ಕಷ್ಟವೆನಿಸುವ ಅಪರೂಪದ ಪಕ್ಷಿಗಳು ಅಲ್ಲಿ ಮನೆ ಮಾಡಿವೆ. ಎತ್ತರದ ಮರಗಳಿಂದ ಆವೃತವಾದ ಮಾನವ ನಿರ್ಮಿತ ಕಾಡನ್ನು ನೋಡಿದಾಗ ಯಾರಿಗಾದರೂ ಅಚ್ಚರಿಯಾಗದೇ ಇರದು. ಬರಿಯ ಕಾಡಷ್ಟೇ ಅಲ್ಲ– ಅಲ್ಲೊಂದು 98 ಅಡಿ ಎತ್ತರದ ಜಲಪಾತವೂ ನಿರ್ಮಾಣಗೊಂಡಿದೆ. ಇಡೀ ವಿಶ್ವದಲ್ಲೇ ಎತ್ತರದ ಮಾನವ ನಿರ್ಮಿತ ಜಲಪಾತ ಎನ್ನುವ ಹೆಗ್ಗಳಿಕೆ ಇದರದು.

ಹಾರಲು ಸಾಧ್ಯವಾಗದೆ ಇರುವ ಪಕ್ಷಿಗಳ ಒಂದು ವಿಭಾಗ ಪಕ್ಷಿಧಾಮದಲ್ಲಿದೆ. ಆಸ್ಟ್ರಿಚ್, ಎಮಸ್, ಥಿಯಾಸ್, ಕ್ಯಾಸೊವೇರಿಸ್ ರೀತಿಯ ಪಕ್ಷಿಗಳನ್ನು ಇಲ್ಲಿ ನೋಡಬಹುದು.

‘ದಕ್ಷಿಣ ಪೂರ್ವ ಈಶಾನ್ಯ ಏವಿಯರಿ’ಯಲ್ಲಿ ಏಷ್ಯಾದ 200 ಜಾತಿಯ ಪಕ್ಷಿಗಳು ನಲಿಡಾಡುತ್ತಿವೆ. ಈ ಏವಿಯರಿಗಳು ಬಹಳಷ್ಟು ಆಳವಾಗಿರುತ್ತವೆ. ಎತ್ತರದ ಮರಗಳಿದ್ದು ನಾವು ಅಲ್ಲಿ ನಡೆದಾಡಲು ತೂಗು ಸೇತುವೆಗಳಿರುತ್ತವೆ.

ಲೋರಿ ಲೋಫ಼ಟ್ ಎನ್ನುವ ಗಿಣಿಯಂತಿರುವ ಪಕ್ಷಿಗಳಿಗಾಗಿ 32 ಸಾವಿರ ಚದರ ಅಡಿಗಳಷ್ಟು ವಿಶಾಲವಾದ, ಒಂಬತ್ತು ಅಂತಸ್ತುಗಳ– ವಿಶ್ವದಲೇ ಅತಿ ದೊಡ್ಡದಾದ ಏವಿಯರಿಯನ್ನು ರೂಪಿಸಲಾಗಿದೆ. ಒಂದು ಸಾವಿರ ಲೋರಿ ಪಕ್ಷಿಗಳು ಅಲ್ಲಿವೆ. ನೋಡುಗರು ಇಷ್ಟವಿದ್ದರೆ ಆ ಪಕ್ಷಿಗಳಿಗೆ ಆಹಾರ ನೀಡಬಹುದು. ನೆಕ್ಟರ್ ಮಿಕ್ಸ್‌ಗಾಗಿ ಪಕ್ಷಿಗಳು ಪ್ರವಾಸಿಗರನ್ನು ಬಂದು ಮುತ್ತುತ್ತವೆ.

ಬಂದರು ಮನೆ
ಹದಿನೇಳು ಸಾವಿರ ಚದರ ಅಡಿಯಲ್ಲಿ ರೂಪಿಸಲಾಗಿರುವ ‘ಬಂದರು ಮನೆ’ಯೊಂದು ಪಕ್ಷಿಗಳ ಉದ್ಯಾನದಲ್ಲಿದೆ. ಇಲ್ಲಿ ಐದು ಜಾತಿಯ ಪೆಂಗ್ವಿನ್‌ಗಳಿವೆ. ಅರವತ್ತು ಅಡಿ ಎತ್ತರದ ಪೋರ್ಚುಗೀಸ್ ಶೈಲಿಯ ಹಡಗಿನಂತೆ ಈ ಮನೆಯ ಮುಂಭಾಗವನ್ನು ರೂಪಿಸಲಾಗಿದೆ. ಒಳ ಭಾಗವನ್ನು ಮರದ ದಿಮ್ಮಿಗಳಿಂದ ಅಲಂಕರಿಸಲಾಗಿದ್ದು, ಮರದ ನೆಲ ಹಾಸನ್ನೂ ಮೂಡಿಸಲಾಗಿದೆ. ಹಮ್ಬೋಲ್ಟ್, ರಾಕ್ ಹಾಪರ್, ಮ್ಯಾಕರೊನಿ ಮತ್ತು ಕಿಂಗ್ ಪೆಂಗ್ವಿನ್‌ಗಳು ಇಲ್ಲಿದ್ದು– ಅವಕ್ಕೆ ತಕ್ಕನಾದ ಹವಾಮಾನವನ್ನು ನಿಯಂತ್ರಿಸಲಾದ ಒಳಾಂಗಣದಲ್ಲಿ ಕಾಯ್ದುಕೊಳ್ಳಲಾಗುತ್ತದೆ. ಅಪರೂಪದ ಜಾತಿಯ ಆಫ್ರಿಕನ್ ಪೆಂಗ್ವಿನ್, ಕೇಪ್ ಶೆಲ್ಡಕ್ಸ್ ಮತ್ತು ಗಲ್ಸ್ ಪಕ್ಷಿಗಳು ಬಂದರು ಮನೆಯ ಹೊರಾಂಗಣದಲ್ಲಿವೆ.

ಹಗಲಿನಲ್ಲಿ ರಾತ್ರಿ ಮತ್ತು ರಾತ್ರಿಯಲ್ಲಿ ಹಗಲಿನ ವಾತಾವರಣವನ್ನು ಈ ಪಕ್ಷಿಧಾಮದಲ್ಲಿ ನೋಡಬಹುದು. ಕತ್ತಲಲ್ಲಿ ನಿಶಾಚರ ಪಕ್ಷಿಗಳು ನಡೆದಾಡುವುದನ್ನು ಮತ್ತು ಅವುಗಳ ಚಿಲಿಪಿಲಿಗುಟ್ಟಿವಿಕೆಯನ್ನು ಅನುಭವಿಸಬಹುದು. ಅಂತೆಯೇ– ಅಪಾಯಕಾರಿಯಾದ ದಾಲ್ಮೇಷಿಯನ್ ಪೆಲಿಕಾನ್ (ನೀರ ಹಕ್ಕಿ) ಕೂಡ ಇಲ್ಲಿ ನೋಡಲಿಕ್ಕೆ ಲಭ್ಯ. ಮೀನು ಹಿಡಿಯಲಿಕ್ಕಾಗಿ ಪಕ್ಷಿಗಳು ನೀರಿನಲ್ಲಿ ಮುಳುಗುವುದನ್ನು, ಸಾಲಾಗಿ ಗಾಂಭೀರ್ಯದಿಂದ ನಡೆಯುವ ಸಾಲು ಹಕ್ಕಿಗಳ ದೃಶ್ಯಗಳನ್ನು ಉದ್ಯಾನದಲ್ಲಿ ನೋಡಬಹುದು. ಹದ್ದು, ಗಿಡುಗ, ಡೇಗೆ ಇವುಗಳ ಹಾರಾಟದ ಬೆರಗು ಹುಟ್ಟಿಸುವ ಪ್ರದರ್ಶನವೂ ಉದ್ಯಾನದಲ್ಲಿ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.