ADVERTISEMENT

ಸೂಚಿಪರಾ ಸೂಜಿಗಲ್ಲು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 19:30 IST
Last Updated 20 ಅಕ್ಟೋಬರ್ 2012, 19:30 IST

ರಸ್ತೆ ಕಾಣದಂಥ ಮಂಜು ಮುಸುಕು. ಸಾವರಿಸಿಕೊಂಡು ನಿಧಾನವಾಗಿ ಹೊರಟರೆ ಪಶ್ಚಿಮ ಘಟ್ಟದ ಹಸಿರು ಪೊದೆಗಳ ಕಾಡಿನ ಮೇಲೂ ತೆಳ್ಳನೆ ಮಂಜು. ಅದು ಸೂಚಿಪರಾ ಜಲಪಾತಕ್ಕೆ ತೆರಳುವ ಮಾರ್ಗ.

ಕೇರಳ ರಾಜ್ಯದ ವಯನಾಡು ಜಿಲ್ಲೆಯ ಮೆಪ್ಪಡಿಯಿಂದ 13 ಕಿಮೀ ದೂರದಲ್ಲಿದೆ ಸೂಚಿಪರಾ. ವರ್ಷವಿಡೀ ತುಂಬಿ ಹರಿಯುವ ಪಶ್ಚಿಮ ಘಟ್ಟದ ನದಿಗಳ ಸಾಲಿಗೆ ಸೇರುವ ಚಲಿಯಾರ್ ನದಿ ಈ ಜಲಪಾತದ ಸೃಷ್ಟಿಗೆ ಕಾರಣ.

ಚಲಿಸುವ ರಸ್ತೆಯ ಅಕ್ಕ ಪಕ್ಕ ಚಹಾ, ಕಾಫಿ, ಮೆಣಸು, ಏಲಕ್ಕಿ ತೋಟಗಳನ್ನು ನೋಡುತ್ತಾ ಮನಸ್ಸನ್ನು ಉಲ್ಲಾಸಗೊಳಿಸುವ ಈ ಹಾದಿಯಲ್ಲಿ ಸಾಗುವಾಗ ಆಯಾಸದ ಅನುಭವ ಆಗುವುದೇ ಇಲ್ಲ.

ಇನ್ನು ಸೂಚಿಪರಾ ಜಲಪಾತ ತಲುಪಿದಾಗ ಸುರಿಯುವ ಜಲಧಾರೆ ದರ್ಶನವಾಗುತ್ತಿದ್ದಂತೆಯೇ ಮೈಮನ ಪುಳಕಗೊಳ್ಳುತ್ತದೆ. ಅಂದಹಾಗೆ ಅದು ಪ್ಲಾಸ್ಟಿಕ್ ನಿಷೇಧ ವಲಯ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿ, ಕಾಗದ ಎಸೆಯುವ ಪ್ರವಾಸಿಗರನ್ನು ಕಟ್ಟುನಿಟ್ಟಿನಿಂದ ನಿಭಾಯಿಸುತ್ತಿರುವ ರಾಜ್ಯ ಸರ್ಕಾರದ ಕಾಳಜಿ ಗಮನಸೆಳೆಯುತ್ತದೆ.

ಚಲಿಯಾರ್ ನದಿ 200 ಅಡಿ ಎತ್ತರದಿಂದ ಇಲ್ಲಿ ಧುಮ್ಮಿಕ್ಕುತ್ತದೆ. ಇದಕ್ಕೆ ಸೆಂಟಿನೆಲ್ ರಾಕ್ ಜಲಪಾತ ಎಂಬ ಹೆಸರೂ ಇದೆ. ಕಣ್ತುಂಬ ಈ ಜಲಪಾತವನ್ನು ವೀಕ್ಷಿಸಿದ ನಂತರ ನೀರನ್ನು ಮುಟ್ಟಬೇಕೆಂಬ ಆಸೆಯಾಗುವುದು ಸಹಜ. ಆದರೆ ಕೈ ಮರಗಟ್ಟುವಷ್ಟು ನೀರು ತಣ್ಣಗಿರುತ್ತದೆ. ಆದರೆ, ಗದಗುಡಿಸುವ ನೀರಿನ ಸ್ನಾನದ ಅನುಭವ

ಪಡೆಯುವುದಕ್ಕಾಗಿಯೇ ಪ್ರವಾಸಿಗರು ಅಲ್ಲಿಗೆ ಬರುತ್ತಾರೆ. ಅಭ್ಯಾಸ ಇಲ್ಲದವರು ನೀರಿಗೆ ಇಳಿದರೆ ಜ್ವರ, ನೆಗಡಿ ಕಾಡುವ ಸಾಧ್ಯತೆಗಳಿವೆ. ಸೂಚಿಪರಾದ ಫೋಟೋ ಕ್ಲಿಕ್ಕಿಸುವುದು ಕಷ್ಟ. ಮಂಜು ಮುಸುಕಿನ ಮರೆ ಕ್ಯಾಮೆರಾ ಪರದೆ ಆವರಿಸಿಕೊಂಡು ಜಲಪಾತದ ಚಿತ್ರ ಮಸುಕಾಗಿ ಮೂಡುವುದು ಸಹಜ. ಆದರೆ ಕಣ್ಣ ಕ್ಯಾಮೆರಾದಲ್ಲಿ ದಾಖಲಾಗುವ ಜಲಪಾತದ ಚಿತ್ರವನ್ನು ಮರೆಯಲು ಸಾಧ್ಯವೇ ಇಲ್ಲ.

ಅಂದಹಾಗೆ ಈ ಜಲಪಾತದ ಬಳಿಯಲ್ಲಿಯೇ ಸಾಕಷ್ಟು ರೆಸ್ಟೋರೆಂಟ್ ಇವೆ. ಅವುಗಳಲ್ಲಿ ಟ್ರೀ ಟಾಪ್ ಹಟ್ಸ್‌ಗಳಿಗೆ ಹೆಚ್ಚು ಬೇಡಿಕೆ. ಅಲ್ಲಿಂದ ಜಲಪಾತ ನೋಡಲು ಬಯಸಿ ಬರುವವರ ಸಂಖ್ಯೆಯೇ ಜಾಸ್ತಿ. ಹಾಗೆಯೇ ಇಲ್ಲಿ ನೀರಿನಲ್ಲಿ ರ‌್ಯಾಫ್ಟಿಂಗ್ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.