ಪದ್ಯಕ್ಕೆ ನಾಚುಗೆ
ಸಾಯುವಷ್ಟು ನಾಚುಗೆ
ಕದ ಮುಚ್ಚಿಕೊಂಡು ತನ್ನ ಹೆಣದ ಮೊಖ ಕೂಡ ಗುರುತಿಗೆ ದಕ್ಕಬಾರದು
ಅಂಥ ಸಾವ ಸತ್ತುಬಿಡುವಷ್ಟು ನಾಚುಗೆ
ಕೇಳುತ್ತಿದೆ ಪದ್ಯ;
ಇಂಥದ್ದೂ ಬರೆದಿದ್ದೆಯೇನೋ
ಲೋ ಪಾಪಿಷ್ಟ ಪ್ರಭುವೆ ನನ್ನಣೆಬರಾವಿನಲ್ಲಿ ಇಂಥದ್ದೂ ಬರೆದಿದ್ದೆಯೇನೋ
ಹೆಂಗೆ ಪದ್ಯವಾಗಲೋ ಪ್ರಭುವೆ, ಅಂಗಸಂಗದ ಹೂಗಂಧ ಸಂಬಂಧ
ಗಳ ಹಾಡಿ ಭೂಲೋಕದಯ್ಯಗಳ ಅಮ್ಮಗಳ ಮನವನಾಡಿಸಿದ ನಾನು
ಕಂದಮ್ಮನಂಗ ಛೇದಿಸುವಾಗ ಹೆಂಗೆ ಪದ್ಯವಾಗಲೋ ಪ್ರಭುವೆ
ನಾನೆಂಗೆ ಪದ್ಯವಾಗಲೋ, ಅದು ನೋವಿಂಗೆ ಕೂಗಲು ಹೆದರಿ ಕಂಗಾಲಾಗಲು
ಬಿಕ್ಕಳಿಸಿ ಅಳುವಾಗಲು ಸುಮ್ಮನಿದ್ದವಳಾನು ಪದ್ಯಗಂಭೀರೆ
ಈಗ
ಯಾವೆಂಜಲು ಶಬ್ದಗಳ ತರಲಿ
ಅದಾವ ಹುಳ ಕೊಳೆತ ಛಂದೋನೇಮದ ತಿಪ್ಪೆ ಕೆದಕಲಿ
ಯಾವ ಘನ ಪೂರ್ವಸೂರಿಯನನುಸರಿಸಿ
ಮತ್ತದಾವ ಅಷ್ಟಾದಶ ವರ್ಣನೆಯ ಕೆರವ ಬಳಸಿ ಬರೆಯಲೊ
ಲೋ ಪ್ರಭುವೆ, ನಿನ್ನ ಪಾವನ ಭೂಮಿಯಲಾದ ಹಸುಕಂದ ಕಾಮೇಷ್ಠಿಯಾಗ
ಸಹಸ್ರ ಸ್ತ್ರೀಮೇಧ ಪುಣ್ಯಫಲವ
ನಿನಗೆ ನಾಚುಗೆಯಿಲ್ಲವೆಂದರು ನನಗಿದೆಯೋ ಪದ್ಯಮರ್ಯಾದೆ
ಮೀರಲಾರ, ಮೀರಿ ಕ್ರಮಿಸಲಾರ, ಕ್ರಮಿಸಿ ವಿಜೃಂಭಿಸಲಾರ ಪದ್ಯಪುರುಷ
ತನ್ನ ಹೆಗಲ ಮಗುವಿನೊಳಗೆ
ನಮ್ಮವೆ ಕೂಸುಗಳಿವು, ಈ ಬೆಣ್ಣೆಮನದ ಮೇಲೆಳೆದ ಬರೆಗಳ ಹುಣ್ಣು
ಮಾಗಿಸುವೆರಡು ಸಾಲುಗಳ ಹೇಳಿಸೊ ಪ್ರಭುವೆ ನನ್ನ ನಾಲಿಗೆಯಿಂದ
ಪದ್ಯವಾಗಿದ್ದಕ್ಕೆ ಅಷ್ಟಾದರು ಮಾನವುಳಿಯಲಿ
ಕಂದಮ್ಮನೆವೆ ಜೊಂಪು ಹತ್ತಲಿ
ನಮ್ಮದೇ ಈ ಲೋಕ, ಇಲ್ಲಿಹ ಗಂಡುಕುಲವೆಲ್ಲವು ಇಂತೆ ಇರದೆಂಬ ಕನಸಾದರೂ ಬಿದ್ದು
ಅದು ಸಣ್ಣ ನಗು ನಗಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.