ADVERTISEMENT

‘ಕಲಾಹಬ್ಬ’ದ ಕಾಸೆಲ್‌

ಮರೆಯಲಿ ಹ್ಯಾಂಗ

ಪ್ರಜಾವಾಣಿ ವಿಶೇಷ
Published 24 ಮೇ 2014, 19:30 IST
Last Updated 24 ಮೇ 2014, 19:30 IST
‘ಕಲಾಹಬ್ಬ’ದ ಕಾಸೆಲ್‌
‘ಕಲಾಹಬ್ಬ’ದ ಕಾಸೆಲ್‌   

ಪ್ರವಾಸಿ ಸ್ಥಳಗಳು ಆಕರ್ಷಕವಾಗಿರಬೇಕು. ಮನಸ್ಸನ್ನು ಮುದಗೊಳಿಸುವ ಅಂಶಗಳು ಅಲ್ಲಿರಬೇಕು ಎನ್ನುವುದು ‘ಪ್ರವಾಸಿ ಭಾಷೆ’ಯ ಜನಪ್ರಿಯ ಮಾತು. ಆದರೆ ಇದು ನನಗೆ ಒಪ್ಪಿಗೆಯಿಲ್ಲದ ಮಾತು. ಯಾರೋ ಗ್ರಾಹಕ ಬರುತ್ತಾನೆ, ಅವನಿಗಾಗಿ ತಯಾರು ಮಾಡಬೇಕು ಎನ್ನುವ ವ್ಯಾಪಾರಿ ಮನಸ್ಥಿತಿ ಅಲ್ಲಿ ರೂಪುಗೊಂಡಿರುತ್ತದೆ. ಇಂಥ ಹಣೆಪಟ್ಟಿ ಇಲ್ಲದ ಸ್ಥಳಗಳಲ್ಲೇ ನಾನು ಹೆಚ್ಚು ಖುಷಿಪಟ್ಟಿದ್ದೇನೆ. ಹೀಗೆ ಪ್ರವಾಸಿತಾಣದ ಚೌಕಟ್ಟನ್ನು ಮೀರಿದ ಅನುಭೂತಿಯನ್ನು ನನಗೆ ನೀಡಿದ ತಾಣ ‘ಕಾಸೆಲ್’.

ಜರ್ಮನಿಯ ಒಂದು ಐತಿಹಾಸಿಕವಾದ ಪುಟ್ಟ ಪಟ್ಟಣ ಈ ಕಾಸೆಲ್. ಇದರ ಇತಿಹಾಸ ನನಗೆ ಗೊತ್ತಿಲ್ಲ. ದೊಡ್ಡ ಅರಮನೆ, ಕೋಟೆಗಳು, ಮ್ಯೂಸಿಯಂಗಳು, ಮನಮೋಹಕ ಪಾರ್ಕುಗಳನ್ನು ಹುದುಗಿಸಿಕೊಂಡಿರುವ ಈ ಊರನ್ನು ನೈಸರ್ಗಿಕವಾಗಿ ಗುರ್ತಿಸುವುದಾದರೆ, ನಮ್ಮ ಮಲೆನಾಡಿನ ಪೇಟೆಯ ಗುಣವುಳ್ಳದ್ದು. ಈ ಚಹರೆಯಿಂದಲೇ ‘ಕಾಸೆಲ್’ ಪ್ರಸಿದ್ಧಿ ಪಡೆದಿರುವುದು. ‘ಕಾಸೆಲ್’ ನನ್ನ ಅರಿವನ್ನು ವಿಸ್ತರಿಸಿದ, ಮಿತಿಗಳಿಗೆ ಹರವು ಕೊಟ್ಟ ನೆಲ. ಅರಮನೆಗಳು, ಮ್ಯೂಸಿಯಂ, ಪಾರ್ಕುಗಳಿಗಿಂತ ಇಲ್ಲಿ ನನ್ನ ಸೆಳೆದಿದ್ದು ‘ಡಾಕ್ಯುಮೆಂಟ’. ಸಮಕಾಲೀನ ಮತ್ತು ಆಧುನಿಕ ಕಲಾಕೃತಿಗಳ ಪ್ರದರ್ಶನದ ಹಬ್ಬ ಈ ‘ಡಾಕ್ಯುಮೆಂಟ’. ಜಗತ್ತಿನ ವಿವಿಧ ಭಾಗಗಳ ಕಲಾವಿದರ ಕುಂಚದ ಅಭಿವ್ಯಕ್ತಿ ಈ ಹಬ್ಬದಲ್ಲಿ ಕಾಣಸಿಗುತ್ತದೆ. ವಿಶ್ವದ ಅತ್ಯಂತ ದೊಡ್ಡ ಕಲಾಪ್ರದರ್ಶನಗಳಲ್ಲಿ ಇದೂ ಒಂದು.

ಈ ಕಲಾಹಬ್ಬದ ಗಮ್ಮತ್ತುಗಳನ್ನು ಹೇಳುವ ಮುನ್ನ ಜರ್ಮನಿ ಭೇಟಿಯ ಬಗ್ಗೆ ಹೇಳುವೆ. 2012ರಲ್ಲಿ ಜರ್ಮನ್‌ ತಂಡವೊಂದರಲ್ಲಿ ನಾಟಕ

ಜರ್ಮನಿಯ ಕಾಸೆಲ್‌ ನಮ್ಮ ಮಲೆನಾಡಿನ
ಪೇಟೆಯೊಂದನ್ನು ನೆನಪಿಸುವ ರೀತಿಯ ನಗರ. ಕಾಡನ್ನೂ ಒಳಗೊಂಡಿರುವ ಈ ಊರು ಪ್ರಸಿದ್ಧವಾಗಿರುವುದು ಐದು ವರ್ಷಗಳಿಗೊಮ್ಮೆ ನಡೆಸುವ ‘ಡಾಕ್ಯುಮೆಂಟ’ ಎನ್ನುವ ವಿಶ್ವಪ್ರಸಿದ್ಧ ಕಲಾಹಬ್ಬದ ಮೂಲಕ. ಪ್ರಸಿದ್ಧ ಕನ್ನಡ ಗಾಯಕಿ ಎಂ.ಡಿ. ಪಲ್ಲವಿ ತಾವು ಕಂಡ ಕಲಾಹಬ್ಬದ ಚಿತ್ರಗಳನ್ನು ‘ಮರೆಯಲಿ ಹ್ಯಾಂಗ’ ಎಂದು ಇಲ್ಲಿ ನೆನಪಿಸಿಕೊಂಡಿದ್ದಾರೆ.

ಪ್ರದರ್ಶಿಸಲು ಬರ್ಲಿನ್‌ಗೆ ಎರಡು ತಿಂಗಳ ಪ್ರವಾಸ ಹೋಗಿದ್ದೆ. ಕಾರ್ಯಕ್ರಮದ ಅವಧಿ ಮುಗಿದು ಭಾರತಕ್ಕೆ ಮರಳಬೇಕು ಎನ್ನುವ ಸಂದರ್ಭದಲ್ಲಿ ಗೆಳತಿ ಸೋಫಿಯಾ ‘ಕಾಸೆಲ್’ ಮತ್ತು ಅಲ್ಲಿ ನಡೆಯುವ ‘ಡಾಕ್ಯುಮೆಂಟ ಆರ್ಟ್‌ ಫೆಸ್ಟಿವಲ್‌’ ಬಗ್ಗೆ ವಿವರಿಸಿದರು. ಆ ಹಬ್ಬ ಜುಲೈ 9ರಿಂದ ಸೆಪ್ಟೆಂಬರ್ 16ರವರೆಗೆ ನಿಗದಿಯಾಗಿತ್ತು. ಪ್ರತಿ ಐದು ವರುಷಗಳಲ್ಲೂ ಈ ಅವಧಿಯಲ್ಲೇ ಹಬ್ಬವನ್ನು ಸಂಘಟಿಸಲಾಗುತ್ತದೆ. ‘ಡಾಕ್ಯುಮೆಂಟ’ ನೋಡಲಿಕ್ಕೆಂದೇ ನಾನು ನನ್ನ ವೀಸಾ ಅವಧಿಯನ್ನು ವಿಸ್ತರಿಸಿಕೊಂಡೆ. ಕಾಸೆಲ್, ಸೋಫಿಯಾಳ ತಾಯಿ ರೆನಾಟಾ ಅವರ ತವರು.

ಐದು ವರ್ಷಗಳಿಗೊಮ್ಮೆ ವಸಂತ
ಕಾಸೆಲ್‌ನಲ್ಲಿ ಐದು ವರುಷಗಳಿಗೆ ಒಮ್ಮೆ ಮೂರು ತಿಂಗಳ ಕಾಲ ಈ ಕಲಾಹಬ್ಬ ನಡೆಯುತ್ತದೆ. ಆಗ ಈ ನಗರ ಜಗತ್ತಿನ ಪ್ರಸಿದ್ಧ ಕಲಾವಿದರೆಲ್ಲ ಒಂದೆಡೆ ಸೇರುವ ವೇದಿಕೆಯಾಗುತ್ತದೆ. ವಾಹ್‌! ಅದ್ಭುತ. ಇಡೀ ಪೇಟೆಯೇ ಕಲಾಕೃತಿಗಳನ್ನು ಮೈತುಂಬಾ ತೊಟ್ಟಂತಿರುತ್ತದೆ. ನಾನು ಆ ಪ್ರದರ್ಶನವನ್ನು ವೀಕ್ಷಿಸಿದ್ದು ಕೇವಲ ಒಂದು ವಾರ.

ಎಲ್ಲವನ್ನೂ ನೋಡಲು ಸಾಧ್ಯವಾಗಲಿಲ್ಲ. ಶೇ 60ರಷ್ಟು ಮಾತ್ರ ಕಣ್ತುಂಬಿಕೊಂಡೆ. ನನ್ನ ವೈಯಕ್ತಿಕ ಕಲಾ ಬದುಕಿನ ಮೇಲೆ ಅಪಾರ ಪ್ರಭಾವ ಬೀರಿದ್ದರಿಂದ ಈ ಹಬ್ಬಕ್ಕೆ ನನ್ನ ಮನದಲ್ಲಿ ಶಾಶ್ವತ ನೆಲೆ ಇದೆ. ನನ್ನ ಆಂತರಿಕ ಬದಲಾವಣೆಗೆ ‘ಡಾಕ್ಯುಮೆಂಟ’ ಬಹಳ ಪ್ರಭಾವ ಬೀರಿತು. ಕಲಾವಿದರ ಕುಟುಂಬದ ಕುಡಿಯಾದ ನನಗೆ ಬಾಲ್ಯದಿಂದಲೂ ಕಲಾಕೃತಿಗಳ ಬಗ್ಗೆ ಆಸಕ್ತಿ. ಬೆಂಗಳೂರಿನಲ್ಲಿ ‘ಕಲಾಶಾಲೆ’ ಸ್ಥಾಪಿಸಿದ ಅ.ನ. ಸುಬ್ಬರಾಯರು ನನ್ನ ಅಜ್ಜ. ಪ್ರವಾಸಕ್ಕೆ ಹೋಗುವ ಪ್ರತಿ ಪ್ರದೇಶಗಳಲ್ಲೂ ಕಲಾ ಗ್ಯಾಲರಿಗಳನ್ನು ಹುಡುಕುವೆ. ಫ್ರಾನ್ಸ್‌ಗೆ ಭೇಟಿ ನೀಡಿದ ಮೂರು ಬಾರಿಯೂ ಅಲ್ಲಿನ ಪ್ರಸಿದ್ಧ ಆರ್ಟ್‌ಗ್ಯಾಲರಿಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ಗ್ಯಾಲರಿಗಳಲ್ಲಿ ಲಿಯಾನಾರ್ಡೋ ಡಾ ವಿಂಚಿ ಮತ್ತಿತರ ಪ್ರಸಿದ್ಧ ಕಲಾಕಾರರ ಕೋಟ್ಯಂತರ ಡಾಲರ್ ಮೌಲ್ಯದ ಕಲಾಕೃತಿಗಳನ್ನು ನೋಡಿರುವೆ. ಆದರೆ, ಕಾಸೆಲ್‌ ಪೇಟೆಯ ಹಬ್ಬದಲ್ಲಿನ ಕಲಾಕೃತಿಗಳು ನೀಡಿದ ಅನುಭೂತಿಯನ್ನು ನನಗೆ ಯಾವ ಮ್ಯೂಸಿಯಂಗಳೂ ನೀಡಿಲ್ಲ.

ನನ್ನ ಯೋಚನಾ ವಿಧಾನ, ನಮ್ಮ ಮಿತಿಗಳು ಹಾಗೂ ಅವುಗಳನ್ನು ಮೀರುವ ಬಗೆ– ಹೀಗೆ, ಹೀಗೆ ನನ್ನ ಪರಿಕಲ್ಪನೆಗಳನ್ನು ‘ಡಾಕ್ಯುಮೆಂಟ’ ವಿಸ್ತರಿಸಿತು. ಒಂದು ವಿಷಯವನ್ನು ಯೋಚಿಸಿ, ಚೌಕಟ್ಟುಗಳಿಲ್ಲದೆ ಹೇಗೆ ಅಭಿವ್ಯಕ್ತಿಸಬಹುದು; ಚಿಂತನೆಯನ್ನು ಯಾವ ರೀತಿ ಬೆಳೆಸಬಹುದು ಎನ್ನುವುದನ್ನು ಈ ಪ್ರದರ್ಶನ ತೋರಿಸಿಕೊಟ್ಟಿತು. ಪ್ರತಿ ಪ್ರದರ್ಶನದಲ್ಲೂ ಥೀಮ್‌ಗಳು ಬದಲಾಗುತ್ತವೆ. ನಾನು ನೋಡಿದ ಪ್ರದರ್ಶನದಲ್ಲಿನ ಕಲಾಕೃತಿಗಳಲ್ಲಿ ಪ್ರಕೃತಿ–ಪರಿಸರದ ಬಗ್ಗೆ ಹೆಚ್ಚು ಕಳಕಳಿಯನ್ನು ಕಲಾವಿದರು ಅಭಿವ್ಯಕ್ತಿಸಿದ್ದರು. ಕಾಸೆಲ್‌ನಲ್ಲಿ ಕೋಟೆ–ಕೊತ್ತಲ ಅರಮನೆಗಳಿದ್ದರೂ ವಸತಿಗಾಗಿ ನೆಲೆಗಳೇನೂ ಇಲ್ಲ. ‘ಡಾಕ್ಯುಮೆಂಟ ಆರ್ಟ್‌ ಫೆಸ್ಟಿವಲ್‌’ ವೇಳೆ ಅಲ್ಲಿನ ಜನರೇ ಪ್ರವಾಸಿಗರ ಆತಿಥ್ಯ ವಹಿಸಿಕೊಳ್ಳುತ್ತಾರೆ. ನಾನು ಸೋಫಿಯಾರ ತಾಯಿ ರೆನಟಾ ಅವರ ಮನೆಯಲ್ಲಿ ಉಳಿದುಕೊಂಡಿದ್ದೆ. ಒಮ್ಮೆ ಹಬ್ಬ ಮುಗಿಯುತ್ತಿದ್ದಂತೆ ಮುಂದಿನ ಕಲಾಸಡಗರಕ್ಕೆ ತಯಾರಿ ನಡೆದಿರುತ್ತದೆ. ಮೂರು ತಿಂಗಳ ಕಾಲ ಪಾರ್ಕು, ಕೋಟೆ, ಹಾದಿ ಬೀದಿಗಳೆಲ್ಲಾ ಗ್ಯಾಲರಿಯಾಗಿ ಪರಿವರ್ತಿತವಾಗಿರುತ್ತದೆ.

ADVERTISEMENT

ಅರಮನೆ, ಕೋಟೆ–ಕೊತ್ತಲಗಳು
ಕಾಸೆಲ್‌ನಲ್ಲಿ ವೈಭವೋಪೇತ ಬೃಹತ್ ಅರಮನೆ ಇದೆ. ಈ ಕಣ್ಣುಕೋರೈಸುವ ಅರಮನೆಯ ಕಾರಣದಿಂದಲೇ ಹೆಚ್ಚಿನ ಜನರಿಗೆ ಈ ಪೇಟೆ ಪರಿಚಿತ. ಕೋಟೆ ಕೊತ್ತಲ, ಮ್ಯೂಸಿಯಂ, ಪಾರ್ಕುಗಳೂ ಪೇಟೆಯ ಅಂದಚೆಂದಕ್ಕೆ ಪುಟವಿಟ್ಟಂತಿದೆ. ಅರಮನೆ ಗತವೈಭವ ಸಾರುತ್ತದೆ. ಸಾಮಾನ್ಯವಾಗಿ ನಮ್ಮ ಅರಸರ ಮನೆಗಳಂತೆಯೇ ದರ್ಬಾರು, ಪ್ರಜೆಗಳೊಂದಿಗೆ ಮಾತನಾಡುವ ಸ್ಥಳ– ಹೀಗೆ ಆಳರಸರ ವೈಭವಕ್ಕೆ ಕಟ್ಟಡಗಳು ಸಾಕ್ಷಿಯಾಗಿವೆ. ಇಷ್ಟೆಲ್ಲ ಕಲ್ಲುಮಣ್ಣಿನ ಕಟ್ಟಡಗಳನ್ನು ಹೊಂದಿರುವ ಪಟ್ಟಣದ ಸುತ್ತ ಪ್ರಾಕೃತಿಕ ಸಿರಿವಂತಿಕೆಯೂ ಹೇರಳವಾಗಿದೆ. ಸುತ್ತಲೂ ಬೆಟ್ಟಗುಡ್ಡ, ಕಾಡನ್ನು ಹೊದ್ದುಕೊಂಡಿರುವ ಇಲ್ಲಿನ ಮತ್ತೊಂದು ವಿಶೇಷವೆಂದರೆ ಪಟ್ಟಣದೊಳಗೂ ಕಾಡಿದೆ.

ಪೇಟೆಯೊಳಗಿನ ಕಾಡಿನಲ್ಲಿ ಸಾಧು ಪ್ರಾಣಿಗಳಿವೆ. ಸುತ್ತಲಿನ ಪರಿಸರವೂ ಮನಮೋಹಕ. ಕೃತಕತೆಯ ಸ್ಪರ್ಶವಿಲ್ಲದ ಕಾಡು–ಮೇಡು, ಬೆಟ್ಟ ಗುಡ್ಡವನ್ನು ಸುತ್ತಿದೆ, ಉಲ್ಲಸಿತಳಾದೆ. ಇಲ್ಲಿನ ಜನರ ಬಳಿ ಕಾರುಗಳಿದ್ದರೂ ಅವರು ಸೈಕಲ್‌ ಬಳಸುತ್ತಾರೆ. ಮತ್ತೊಮ್ಮೆ ಅವಕಾಶ ಸಿಕ್ಕರೆ ಆ ಪುಟ್ಟ ಪೇಟೆಯಲ್ಲಿ ತಿರುಗುವ, ಕಲಾಹಬ್ಬಕ್ಕೆ ಹೋಗುವ, ಮತ್ತಷ್ಟು ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುವ ಹಂಬಲ ನನ್ನದು.


ಜರ್ಮನಿಯ ವಾಸ್ತುಶಿಲ್ಪಿ ಮತ್ತು ಕಲಾಕಾರ ಅರ್ನಾಲ್ಡ್‌ ಬೋಡ್ (1990–1977) ‘ಡಾಕ್ಯುಮೆಂಟ’ ಕಲಾಹಬ್ಬದ ರೂವಾರಿ. 1955ರಲ್ಲಿ 

ಮೊದಲ ಬಾರಿಗೆ ಈ ಕಲಾ ಪ್ರದರ್ಶನ ಆರಂಭವಾಯಿತು. ಕಾಸೆಲ್‌ನಲ್ಲಿ ಜನಿಸಿದ ಬೋಡ್, ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ಮತ್ತು ಕಲಾಕಾರರಾಗಿ ಕೆಲಸ ನಿರ್ವಹಿಸಿದವರು. ಹಿಟ್ಲರ್‌ನ ನಾಜಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಇವರ ಕಲಾಬದುಕು ನಿಷೇಧಕ್ಕೊಳಗಾಯಿತು. ಅಂದಹಾಗೆ, ಈ ಕಲಾಹಬ್ಬದಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತದೆಯೇ ಹೊರತು ಮಾರಾಟ ಮಾಡುವುದಿಲ್ಲ. ಮುಂದಿನ 2017ರಲ್ಲಿ ‘ಡಾಕ್ಯುಮೆಂಟ’ ಜುಲೈ 10ರಿಂದ ಸೆಪ್ಟೆಂಬರ್ 17ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.