ADVERTISEMENT

ನಾಸ್ತಿಕತೆಯ ಹಾದಿಯಲ್ಲಿ..

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 19:31 IST
Last Updated 17 ಅಕ್ಟೋಬರ್ 2018, 19:31 IST

ಯಪ್ಪಾ ಈ ನಾಸ್ತಿಕ ಅಗೋದು ಎಷ್ಟು ಕಷ್ಟ ಗೊತ್ತಾ? ಪದೇ ಪದೇ ‘ದೇವ್ರೇ ದೇವ್ರೇ’ ಅನ್ನಂಗಿಲ್ಲ. ಏನಾದ್ರು ಕಷ್ಟ ಬಂದ ಕೂಡ್ಲೇ ‘ದೇವ್ರೇ ಕಾಪಾಡಪ್ಪ’ ಅಂತ ದೇವ್ರ ಕೋಣೆಗೆ ಹೋಗಿ ಒಂದ್ರೂಪಾಯ್ ಕಾಣಿಕೆ ಕಟ್ಟಿ, ‘ಇನ್ಮೇಲೆ ಆ ದೇವ್ರು ನೋಡ್ಕೋತಾನೆ ಬಿಡು’ ಅಂತ ನೆಮ್ಮದಿಯಾಗಿ ಇರಂಗಿಲ್ಲ. ನಮ್ಮ ಕಷ್ಟ ನಾವೇ ಹೇಗೆ ಸಾಲ್ವ್ ಮಾಡಬೇಕು ಅಂತ ಯೋಚಿಸಬೇಕು.

ದೇವ್ರೆ ನಿಂಗೆ ತೆಂಗಿನಕಾಯಿ ಒಡಿತೀನಿ, ಖರ್ಜಿಕಾಯಿ ಸರ ಹಾಕಿಸ್ತೀನಿ, ಬೆಳ್ಳಿ ಗದೆ ಮಾಡಿಸ್ತೀನಿ, ಕೂದ್ಲು ಕೊಡ್ತೀನಿ, ಮದುವೆ ಮಾಡಿಸ್ತೀನಿ, ಮೆರವಣಿಗೆ ಮಾಡಿಸ್ತೀನಿ.. ಇಂಥ ಹರಕೆ ಹೊತ್ತುಕೊಂಡು ನೆಮ್ಮದಿಯಾಗಿ ನನ್ ಕೆಲ್ಸ ಆತ್ ಬಿಡು ಅನ್ಕಣಂಗಿಲ್ಲ. ನೂರಕ್ಕೆ ನೂರು ನಾವೇ ಎಫರ್ಟ್ ಹಾಕಬೇಕು. ಕೆಲ್ಸ ಸಕ್ಸಸ್ ಆದ್ರೂ, ಫೆಲ್ಯೂರ್ ಆದ್ರೂ ನಾವೇ ಹೊಣೆಗಾರರೇ ಹೊರತು ದೇವರಲ್ಲ.

ಎಲ್ಲವನ್ನೂ ಮೀರಿ ದೇವರನ್ನು ಊರುಗೋಲಾಗಿ ಬಳಸದೇ ಮುಂದೆ ಸಾಗೋದು ತುಂಬಾ ಕಷ್ಟ. ‘ನಮಗಿಂತ ದೊಡ್ಡೋನು ದೇವ್ರಿದ್ದಾನೆ. ಕೆಟ್ಟದ್ದು ಮಾಡಿದರೆ ಕಷ್ಟ ಕೊಡ್ತಾನೆ’ ಅಂತ ಹೆದರಿಕೆಯೇ ಇಲ್ಲದ ಮೇಲೆ ವಿನಯವಂತಿಕೆ ಮಾನವೀಯತೆ ಉಳಿಯುತ್ತದೆಯೇ? ದೇವರ ಹೆದರಿಕೆಯೇ ಇಲ್ಲದೇ ಅವೆರಡನ್ನೂ ಬೆಳೆಸಿಕೊಳ್ಳುವುದೇ ಗ್ರೇಟ್.

ADVERTISEMENT

ನಾಸ್ತಿಕನಾಗೋಕೆ ದೇವ್ರು ಖಂಡಿತಾ ಅಬ್ಜೆಕ್ಷನ್ ಹಾಕಲ್ಲ; ಆದ್ರೆ ಅಕ್ಕಪಕ್ಕದ ಮನುಷ್ಯರೆಂಬೋ ಮನುಷ್ಯರು ನಿಮ್ಮ ನಾಸ್ತಿಕತೆಯನ್ನು ಹಂಗಿಸದೇ ಬಿಟ್ಟಾರೆಯೇ? ಸಿಕ್ಕಾಪಟ್ಟೆ ಸಲಹೆ, ಹೀಯಾಳಿಕೆ, ಹಂಗಿಸುವಿಕೆ ಎಲ್ಲವೂ ಶುರು. ಅದಕ್ಕೂ ನೀವ್ ಬಗ್ಗಿಲ್ಲ ಅನ್ನಿ, ನಿಮ್ಗೆ ಏನಾದ್ರೂ ಸಮಸ್ಯೆ ಬರ್ಬೇಕು.. ಆಗ ಎಷ್ಟು ಖುಷಿಪಡ್ತಾರೆ ಗೊತ್ತಾ?‌ ‘ಬಡ್ಡಿ ಮಗ ದೇವ್ರೇ ಇಲ್ಲ ಅಂತಿದ್ದ, ಈಗನೋಡು. ಅನುಭವಿಸು ಮಗನೆ’ ಅಂತ ಹಿಂಗೆಲ್ಲ ಬೈದು ಖುಷಿ ಪಡ್ತಾರೆ. ಒಮ್ಮೊಮ್ಮೆ ಸಂಬಂಧಗಳೇ ದೂರಾಗೋ ಛಾನ್ಸು ಇರತ್ತೆ. ಎಲ್ಲರಿಂದ ದೂರಾಗಿ ಒಬ್ಬರೇ ಸಮಸ್ಯೆ ಎದುರಿಸೋಕೆ ಧಮ್ ಬೇಕೇ ಬೇಕು. ಇಲ್ಲಂದ್ರೆ ಒಳಗೆ ನಾಸ್ತಿಕತೆ ಇದ್ರೂ ಹೊರಗೆ ಆಸ್ತಿಕತೆ ಸೋಗು ಹಾಕಲು ಮುಖವಾಡ ತಯಾರು ಮಾಡಿಕೊಂಡು ಕುಟುಂಬದೊಡನೆ ದೇವಸ್ಥಾನಕ್ಕೆ ಹೊರಟು ಬಿಡಿ.

ನಾಸ್ತಿಕರಾಗುವುದು ಸಾಮಾನ್ಯವೇ!! ಈ ದೀಕ್ಷೆ ತಗಳೋದಕ್ಕೆ ವಿರೋಧಿಸುವ ಮೊದಲನೇ ಶತ್ರು ಯಾರು ಗೊತ್ತಾ? ತಾಯಿಯ ಗರ್ಭದಲ್ಲಿರುವಾಗಲೇ ದೇವರ ನಾಮ ಕೇಳುತ್ತ, ಭುವಿಗೆ ಕಾಲಿಟ್ಟ ಕ್ಷಣದಿಂದಲೇ ಆ ದೇವ್ರ ಈ ದೇವ್ರ ಫ್ಯಾಂಟಸಿ ಕಥೆ ಆಲಿಸುತ್ತ, ದೇವ್ರು ಕಣ್ ಕಳೀತಾನೆ, ನಾಲಿಗೆ ಕಿತ್ಕೋತಾನೆ ಎಂಬಿತ್ಯಾದಿ ಭಯಗಳನ್ನು ಮನದಲ್ಲಿ ಬೆಳೆಸಿಕೊಳ್ಳುತ್ತಿರುವ ನಾವೇ ನಮಗೆ ಮೊದಲ ಶತ್ರುಗಳು. ಮನಸ್ಸಿನಾಳದಲ್ಲಿ ಬೇರೂರಿರುವ ದೇವರ ಕಲ್ಪನೆ ಕಿತ್ತೊಗೆಯಬೇಕಾದ್ರೆ ಯಮಸಾಹಸ ಬೇಕೇ ಬೇಕು. ಋತುಚಕ್ರವಿದ್ದಾಗ (ಅದೊಂದು ದೈಹಿಕ ಕ್ರಿಯೆ ಅಂತ ಗೊತ್ತಿದ್ರೂ) ದೇವಸ್ಥಾನಕ್ಕೆ ಜಪ್ಪಯ್ಯ ಅಂದ್ರು ಕಾಲಿಡದ ಅದೆಷ್ಟು ಹೆಣ್ಣು ಮಕ್ಕಳಿಲ್ಲ. ಸುಖವಿದ್ದಾಗ ಹೇ ದೇವರಿಲ್ಲ ಬಿಡು ಅಂದುಕೊಂಡರೂ, ಕಷ್ಟ ಬಂದಾಗ ಒಮ್ಮೆಯಾದ್ರೂ ದೇವ್ರೇ ಅಂದು ಬಿಡುತ್ತೇವೆ. ಆದರೆ ಎಂತಹ ಕಷ್ಟ ಬಂದರೂ ತನ್ನಂಬಿಕೆಯಿಂದ ಆ ಕಷ್ಟವನ್ನು ಪರಿಹರಿಸಿಕೊಳ್ಳುತ್ತಾನಲ್ಲ, ಅವನೇ ನಿಜವಾದ ನಾಸ್ತಿಕ.

ಬರೀ ಕಷ್ಟನೇ ಹೇಳುತ್ತಾಳೆ ಅಂದ್ಕೋಬೇಡಿ ಗುರು. ನೂರು ದೇವರನ್ನು ಕುವೆಂಪು ಅವರ ಅಣತಿಯಂತೆ ಆಚೆ ನೂಕಿ ಸ್ವಾಮಿ. ಜನಜಂಗುಳಿ ದೇವಸ್ಥಾನಗಳಿಂದ ಸಂಪೂರ್ಣ ಮುಕ್ತಿ, ಕಾಲು ಕಾಲಿಗೆ ಮೆತ್ತಿಕೊಳ್ಳೋ ತೆಂಗಿನಕಾಯಿ ನೀರು, ಪಚಡಿ ಎದ್ದೋದ ಬಾಳೆಹಣ್ಣು, ಎಲ್ಲಿ ನೋಡಿದರಲ್ಲಿ ಕೊಳೆತ ಹೂವುಗಳು, ಉರಿದುಹೋದ ಊದಿನ ಕಡ್ಡಿಗಳು, ಡಿಸೈನ್ ಡಿಸೈನ್ ಕುಂಕುಮಗಳು, ತರತರದಲ್ಲಿ ಭಕ್ತಿ ಪ್ರದರ್ಶಿಸುವ ಭಕ್ತರು ಎಲ್ಲದರಿಂದ ಒಮ್ಮೆಲೇ ಮುಕ್ತಿ ಸಿಕ್ಕಿ ಬಿಡುತ್ತದೆ. ಪೂಜಾರಿಯನ್ನು ಸಾಕುವ ಜವಬ್ದಾರಿ
ಯನ್ನೂ ಕಳೆದುಕೊಂಡು ಬಿಡುತ್ತೀರಿ. ಅದರ ಬದಲಿಗೆ ದೂರದೂರಿನ ನೆಮ್ಮದಿಯೂರುಗಳಿಗೆ ಪ್ರವಾಸ ಹೊರಟು ಬಿಡಿ. ನೀರವ ಮೌನದಲ್ಲಿ, ಪಕ್ಷಿಗಾನದಲ್ಲಿ, ಪಚ್ಚೆ ಹಸಿರಲ್ಲಿ ನೀವ್ ಬೇಡ ಅಂದ್ರು ಈ ಇಡೀ ವ್ಯೋಮವನ್ನು ನಿಯಂತ್ರಿಸುವ ಆ ದಿವ್ಯ ಶಕ್ತಿ ಗೋಚರವಾಗತೊಡಗುತ್ತದೆ. ಆ ಪೂಜೆ ಈ ಪೂಜೆ ಮಾಡಿಸಿಕೊಂಡು ಕೊಳೆತ ಹೂವು ಕುಂಕುಮವನ್ನು ಬಲವಂತವಾಗಿ ದತ್ತು ಪಡೆದು, ನದಿಯ ಬದಲು ಅದೇ ನದಿಯ ಮೂಲಸ್ಥಾನಕ್ಕೆ ಯಾತ್ರೆ ಹೊರಟು ಶುಭ್ರ ನದಿಯನ್ನು ದರ್ಶಿಸುವುದು ಬೆಟರ್.

ನಾಸ್ತಿಕತೆಯನ್ನು ಅನುಸರಿಸುತ್ತಾ, ಪ್ರಕೃತಿಯನ್ನು ಆರಾಧಿಸುತ್ತಾ ಮತ್ತೆ ಅಧ್ಯಾತ್ಮಕ್ಕೆ ಮರಳಿ ಬರುವ ಪ್ರಕ್ರಿಯೆ ಒಂದು ರೋಚಕ ಆವರ್ತ. ಇಂಥಾ ನಾಸ್ತಿಕತೆಯನ್ನು ಸಾಧಿಸಿಬಿಟ್ಟರೆ ಸಾವನ್ನು ಗೆದ್ದ ಮತ್ತು ಸಾವಿಗೆ ಹತ್ತಿರದ ಸುಂದರ ಮನುಷ್ಯರಾಗುವುದರಲ್ಲಿ ಸಂದೇಹವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.