ಒಳಗಣ್ಣಿನ ಹೊರನೋಟ
(ಡಾ. ಎಚ್.ಆರ್. ಪದ್ಮಿನಿ ಅವರನ್ನು ಕುರಿತ ಲೇಖನಗಳು)
ಸಂ: ಕಮಲಾ ಹೆಮ್ಮಿಗೆ
ಪು: 188; ಬೆ: ರೂ. 180
ಪ್ರ: ಚತುರ್ಮುಖ
ನಂ. 43, 1ನೇ ಮಹಡಿ,
5ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, ಹನುಮಂತನಗರ, ಬೆಂಗಳೂರು– 560019
ಕಣ್ಣಿನ ವೈದ್ಯೆ ಹಾಗೂ ಸಾಹಿತಿ ಡಾ. ಎಚ್.ಆರ್. ಪದ್ಮಿನಿ ಅವರು ಮಾಡಿದ ಕೆಲಸಗಳ ಕುರಿತಾಗಿ ಅನೇಕರು ಇಲ್ಲಿ ಬರೆದಿದ್ದಾರೆ. ಅವರೊಂದಿಗೆ ಒಡನಾಡಿದ ಸಾಹಿತಿಗಳು, ವೈದ್ಯರು, ವಿದ್ಯಾರ್ಥಿ, ಬಂಧುಮಿತ್ರರು ಅವರ ಬಗ್ಗೆ ಬರೆದಿದ್ದಾರೆ. ವೈದ್ಯೆ ಪದ್ಮಿನಿ ಅವರು ಕನ್ನಡ ಕವಿ ಪು.ತಿ. ನರಸಿಂಹಾಚಾರ್ ಅವರ ಸೊಸೆ. ಈ ಪುಸ್ತಕದ ಸಂಪಾದನೆ ಮಾಡಿದವರು ಸ್ವತಃ ಅವರ ಸೋದರಿ ಕಮಲಾ ಹೆಮ್ಮಿಗೆ.
ಸಾಹಿತಿಯಾಗಿ ಪದ್ಮಿನಿ ಹೆಚ್ಚೇನೂ ಬರೆದವರಲ್ಲ. ಹನಿಗವನಗಳ ಸಂಕಲನ ಹಾಗೂ ಪ್ರವಾಸಕಥನ ಅವರ ಸಾಹಿತ್ಯವಾಗಿದೆ. ಇದರ ಹೊರತಾಗಿ ಪಠ್ಯಪುಸ್ತಕಗಳನ್ನು ಬರೆದಿದ್ದಾರೆ. ಇವೆಲ್ಲದಕ್ಕಿಂತ ಮುಖ್ಯವಾಗಿ ಅವರು ಕಣ್ಣಿನ ವೈದ್ಯೆಯಾಗಿ, ತಜ್ಞೆಯಾಗಿ ಮಾಡಿದ ಕೆಲಸಗಳು, ತಮ್ಮ ವಿದ್ಯಾರ್ಥಿಗಳನ್ನು ಬೆಳೆಸಿದ್ದು ಇವೆಲ್ಲವೂ ವಿಶೇಷ ಮಹತ್ವವನ್ನು ಪಡೆದುಕೊಂಡಿವೆ.
ಈ ಪುಸ್ತಕದಲ್ಲಿ ಶಿಷ್ಯರು, ಅಭಿಮಾನಿಗಳು ಸೇರಿದಂತೆ ಅವರ ಸಹೋದ್ಯೋಗಿಗಳು ಅವರೊಂದಿಗಿನ ತಮ್ಮ ಒಡನಾಟದ ಕುರಿತಂತೆ ಬರೆದಿದ್ದಾರೆ. ಸ್ವತಃ ಪದ್ಮಿನಿ ಅವರು ತಮ್ಮ ಬದುಕು, ವೃತ್ತಿಯ ಬಗ್ಗೆ (ಸ್ವಗತ ಲಹರಿ) ಕೆಲವು ಪುಟಗಳಲ್ಲಿ ಬರೆದುಕೊಂಡಿರುವುದು ಇಲ್ಲಿದೆ. ತಮ್ಮ ಅಕ್ಕನ ಬಗ್ಗೆ ಕಮಲಾ ಹೆಮ್ಮಿಗೆ ಕೂಡ ಬರೆದಿದ್ದಾರೆ. ಇವು ಮತ್ತು ಇನ್ನಿತರ ಬರಹಗಳು ಕರ್ನಾಟಕದಲ್ಲೇ ಬಹುಕಾಲ ರೋಗಿಗಳ ಸೇವೆ ಮಾಡಿದ ವೈದ್ಯೆಯೊಬ್ಬಳ ಸಂವೇದನಾಶೀಲ ವ್ಯಕ್ತಿತ್ವವನ್ನು, ಕರ್ತವ್ಯಪರತೆಯನ್ನು ಆತ್ಮೀಯವಾಗಿ ಪರಿಚಯಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.