ADVERTISEMENT

ಒಳನೋಟ | ಆದಿಕಾವ್ಯ: ಎಲ್ಲರಿಗಾಗಿ ತ್ರಾಸಲ್ಲದ ಕ್ಲಾಸು

ಚ.ಹ.ರಘುನಾಥ
Published 14 ಮೇ 2022, 19:30 IST
Last Updated 14 ಮೇ 2022, 19:30 IST
ಓಡೋ ಪುಟ್ಟಾ ಓಡೋ
ಓಡೋ ಪುಟ್ಟಾ ಓಡೋ   

‘ಅಕ್ಷಯ ಕಾವ್ಯ’, ‘ಅವ್ಯಯ ಕಾವ್ಯ’ದ ಬೃಹತ್‌ ಕಾವ್ಯಸಂಪುಟಗಳ ನಂತರ ಕೆ.ವಿ. ತಿರುಮಲೇಶರ ಹೊಸ ಪ್ರಕಟಣೆ, ‘ಆದಿಕಾವ್ಯ’.

ಸಮಾಜದಲ್ಲಿ ‘ಎಲ್ಲಕೂ ಮೊದಲು’ ಮಕ್ಕಳೆನ್ನುವ ನಂಬಿಕೆಯಿಂದಾಗಿ ಮಕ್ಕಳ ಕಾವ್ಯಕ್ಕೆ ‘ಆದಿಕಾವ್ಯ’ವೆನ್ನುವ ಗರಿ ಒಪ್ಪುತ್ತದೆ. ತಿರುಮಲೇಶರ ‘ಆದಿಕಾವ್ಯ’ ಹತ್ತು ಸಂಕಲನಗಳಲ್ಲಿ ಪ್ರಕಟಗೊಂಡಿದೆ.

10 ಕೃತಿ, 1496 ಪುಟ, 925 ಪದ್ಯಗಳು. ಇದು ನಿಸ್ಸಂಶಯವಾಗಿಯೂ ಚಿಣ್ಣರ ಹಬ್ಬ.

ADVERTISEMENT

ಮಕ್ಕಳಿಗಾಗಿ ಪ್ರೀತಿ–ಕಾಳಜಿಯಿಂದ ಬರೆದವರು ಕನ್ನಡದಲ್ಲಿ ಕಡಿಮೆ. ಪಂಜೆ, ಕುವೆಂಪು, ಬೇಂದ್ರೆ, ರಾಜರತ್ನಂ, ಸುಮತೀಂದ್ರ ನಾಡಿಗ, ಎಚ್ಚೆಸ್ವಿ, ಶ್ರೀನಿವಾಸ ಉಡುಪ, ಆನಂದ ಪಾಟೀಲ – ಹೀಗೆ ಮಕ್ಕಳಿಗಾಗಿ ಬರೆಯುವುದನ್ನು ಸಾಂಸ್ಕೃತಿಕ ಕರ್ತವ್ಯವೆಂದು ಭಾವಿಸಿದವರ ಸಂಖ್ಯೆ ಹೆಚ್ಚಿಲ್ಲ. ಈ ಪುಟ್ಟ ಪರಂಪರೆಯ ಭಾಗವಾಗಿ ತಿರುಮಲೇಶರ ದೊಡ್ಡ ಹೆಜ್ಜೆ ಗಮನಸೆಳೆಯುವಂತಹದು. ಚಿಣ್ಣರಿಗಾಗಿ ಹತ್ತು ಪದ್ಯಪುಸ್ತಕಗಳನ್ನು ಒಂದೇ ಏಟಿಗೆ ತಂದವರು ತಿರುಮಲೇಶರೇ ಮೊದಲಿಗರಿರಬೇಕು. ಆ ದೃಷ್ಟಿಯಿಂದಲೂ ಇದು ‘ಆದಿಕಾವ್ಯ’ವೇ.

ಮೇಷ್ಟರೊಬ್ಬರು ಎಳೆಯರಿಗೆ ಕನ್ನಡದ ಮೂಲಕ ಜಗತ್ತನ್ನು ಕಲ್ಪಿಸಿಕೊಳ್ಳುವುದನ್ನು ಕಲಿಸುವ ರೀತಿಯಲ್ಲಿ ತಿರುಮಲೇಶರ ಪದ್ಯಗಳಿವೆ; ಅಜ್ಜನೊಬ್ಬ ಮೊಮ್ಮಕ್ಕಳನ್ನು ತನ್ನ ಅನುಭವದ ಜಗತ್ತಿನಲ್ಲಿ ಸುತ್ತಾಡಿಸುತ್ತಿರುವಂತಿವೆ. ಈ ರಚನೆಗಳಲ್ಲಿ ನೀತಿಬೋಧನೆಯಿಲ್ಲ. ಇರುವುದು, ಪ್ರೇರಣೆ–ರಂಜನೆ; ಭಾಷೆಯ ಬಗ್ಗೆ ಪ್ರೀತಿ ಉಕ್ಕಿಸುವ ಒತ್ತಾಸೆ. ‘ಕನ್ನಡದಲ್ಲಿ ಏನಿದೆ ಏನಿಲ್ಲ / ಕನ್ನಡದಲ್ಲಿ ಎಲ್ಲಾ ಇದೆ / ಇನ್ನೇನು ಬೇಕಿದೆ?’ ಎನ್ನುತ್ತಾರೆ ಕವಿ. ಈ ಮಾತು ಅವರ ಪದ್ಯಲೋಕಕ್ಕೂ ಅನ್ವಯಿಸುವಂತಹದ್ದು. ಪ್ರಾಣಿಜಗತ್ತು, ಊಟದ ವೈವಿಧ್ಯ, ಹೂವು, ಸೂರ್ಯ, ಚಂದ್ರ, ಕಾಡು, ವಾರ, ಅಮ್ಮ, ದಾಸರು, ಕವಿಗಳು, ಗಾಂಧಿ – ‘ಆದಿಕವಿ’ಯ ತೆಕ್ಕೆಯಲ್ಲಿ ಯಾರಿಲ್ಲ? ಏನಿಲ್ಲ?

ಮಕ್ಕಳು ನಂಬುವಂತೆ ಬರೆಯುವುದು ಸುಲಭವಲ್ಲ. ಮಕ್ಕಳನ್ನು ನಂಬಿಸುವುದೂ ಕವಿಯ ಉದ್ದೇಶವಲ್ಲ. ಸುಳ್ಳೆಂದು ತಿಳಿದರೂ ಮಕ್ಕಳು ಇಷ್ಟಪಡುವಂತೆ ಬರೆಯುವುದರಲ್ಲಿ ಪದ್ಯದ ಯಶಸ್ಸು ಇರುತ್ತದೆ. ಅಂಥದೊಂದು ಪದ್ಯ, ಅಮ್ಮ–ಮಗು ಸಂವಾದದ ‘ಅದಕೇ ಅದು ಹಾಗಿರತೆ’ ಕವಿತೆ: ‘ಅಮ್ಮಾ ಅಮ್ಮ ಐಸ್‌ಕ್ರೀಮ್‌ ಯಾಕೆ / ಅಷ್ಟೊಂದು ತಣ್ಣಗೆ ಇರತೆ? / ಚಂದಿರನಿಂದ ಕೆರೆದಿರ್ತಾರೆ / ಅದಕೇ ಅದು ಹಾಗಿರತೆ’, ‘ಅಮ್ಮಾ ಅಮ್ಮಾ ಕಬ್ಬು ಯಾಕೆ / ತುಂಬಾ ಸಿಹಿಯಾಗಿರತೆ? / ಸಕ್ಕರೆ ತುಂಬಿಸಿ ನಟ್ಟಿರ್ತಾರೆ / ಅದಕೇ ಅದು ಹಾಗಿರತೆ’ – ಹೀಗೆ ಮುಂದುವರೆಯುವ ಕವಿತೆ ಕೊನೆಗೊಳ್ಳುವುದು ತಾರ್ಕಿಕ ನೆಲೆಗಟ್ಟಿನಲ್ಲಿ: ‘ಅಮ್ಮಾ ಅಮ್ಮಾ ಬೆಕ್ಕಿನ ಹಾಗೇ / ಬೆಕ್ಕಿನ ಮರಿ ಯಾಕಿರತೆ? / ತಪ್ಪಿಸಿಕೊಂಡರೆ ಗೊತ್ತಾಗತ್ತೆ / ಅದಕೇ ಅದು ಹಾಗಿರತೆ.’

ಹೊಸ ಪದಗಳ ಪರಿಚಯ, ಪದ ಚಮತ್ಕಾರ, ಪ್ರಾಸದ ಕಚಗುಳಿ, ಆಡಾಡ್ತಾ ಕಲಿಯುವ ಅವಕಾಶ, ಗಣಿತದ ಲೆಕ್ಕಗಳೂ ಒಗಟುಗಳೂ ಇಲ್ಲಿನ ಪದ್ಯಗಳಲ್ಲುಂಟು. ಕನ್ನಡ ಕಾವ್ಯ ಪರಂಪರೆಯನ್ನು ಮಕ್ಕಳಿಗೆ ಅಪ್ರಜ್ಞಾಪೂರ್ವಕವಾಗಿ ತಲುಪಿಸುವ ತಂತ್ರ ಸೊಗಸಾದುದು. ‘ಎಲ್ಲಾ ಬಿಟ್ಟು ಕುಮಾರವ್ಯಾಸ / ಕೋಳಿವಾಡದಲಿ ಯಾಕ್ಹುಟ್ಟಿದ?’ ಎನ್ನುವ ಗಾಂಪರ ಪ್ರಶ್ನೆಗೆ ಗುರುಗಳ ಉತ್ತರ: ‘ಬೆಳಿಗ್ಗೇನೆ ಎದ್ದು ಬರೀಬೇಕಿತ್ತಲ್ಲ ಕಾವ್ಯ / ಆಗಿನ್‌ ಕಾಲ್ದಲ್ಲಿ ಕೋಳೀನೆ ಕ್ಲಾಕು ಕಣ್ರ.’ ಇದೇ ಗುರು, ‘ಕವಿರಾಜಮಾರ್ಗ’ದ ಬಗ್ಗೆ ಬರೆಯುತ್ತ, ‘ಅಮ್ಮ ದೊಂಗ ರಾಜಾ ನೃಪತುಂಗ’ ಎಂದು ಮಾರ್ಮಿಕವಾಗಿ ಹೇಳಬಲ್ಲರು; ಕವಿ ಚಕ್ರವರ್ತಿಗಳಾದ ಪಂಪ ಪೊನ್ನ ರನ್ನರನ್ನು ಗಲ್ಲಿಗೇರಿಸುವ ಪ್ರಹಸನವನ್ನೂ ಸೃಷ್ಟಿಸಬಲ್ಲರು; ಮಂಕುತಿಮ್ಮನನ್ನು ಮಂಕುಬೊಮ್ಮನಾಗಿಸಬಲ್ಲರು; ಕರ್ವಾಲೋರಿಂದ ಕರ್ವಾಲೋ ಕಾದಂಬರಿ ಓದಿಸಬಲ್ಲರು.

ಭಾಷೆಯ ಬಗ್ಗೆ ಕವಿಗೆ ಮಡಿವಂತಿಕೆಯಿಲ್ಲ. ಆ ಮುಕ್ತತೆಯಿಂದಾಗಿಯೇ ಕನ್ನಡದೊಂದಿಗೆ ಇತರೆ ಭಾಷೆಗಳ ಪದಗಳೂ ಸಹಜವಾಗಿಯೇ ಪದ್ಯದ ಕೈಹಿಡಿದಿವೆ. ಸಿಕಂದರನೊಂದಿಗೆ ‍ಪುರಂದರರನ್ನೂ ಬುಲ್ಲಿನೊಂದಿಗೆ ಇಸ್ತಾಂಬುಲ್ಲನ್ನೂ ಒಟ್ಟಿಗಿಟ್ಟು ನೋಡಲು ಕವಿಗೆ ಸಾಧ್ಯವಾಗಿದೆ. ಈ ಮುಕ್ತಮನಸಿಗೆ ‘ಮಂಡರಗಪ್ಪೆ’ ಒಳ್ಳೆಯ ಉದಾಹರಣೆ: ‘ಮಂಡೂಕಗಳಲಿ ಮಂಡರಗಪ್ಪೆ / ಸ್ಯಾಂಡೋ ಇದ್ದಂಗೆ / ಅಕ್ಕಿಗಳಲಿ ಮಂಡಕ್ಕಿ / ಮರ್ಲಿನ್‌ ಬ್ರಾಂಡೋ ಇದ್ದಂಗೆ’, ‘ತರಕಾರಿಗಳಲಿ ಉಡುಪಿ ಗುಳ್ಳ / ಗೂಂಡಾ ಇದ್ದಂಗೆ / ತಿಂಡಿಗಳಲಿ ಆಮ್ಲೆಟ್‌ ಬ್ರ– / ಹ್ಮಾಂಡ ಇದ್ದಂಗೆ!’

ಪದ್ಯದ ಓಘಕ್ಕೆ ತಕ್ಕಂತೆ ಕಾಗುಣಿತದಲ್ಲಿ ರಾಜಿಯಾಗಿದ್ದರೂ, ‘ಕಾಗುಣಿತ’ದ ಮಹತ್ವವನ್ನು ಮೇಷ್ಟ್ರು ಮರೆತಿಲ್ಲ. ‘ಕಾಗುಣಿತ’ ಹೆಸರಿನ ಪದ್ಯವೇ ಇದೆ. ‘ಒತ್ತಿಲ್ಲದ ಕಡೆ ಒತ್ತು ಕೊಟ್ಟರೆ / ಏನಾಗುವುದೋ ಪುಟ್ಟ? / ಕತೆ ಹೋಗಿ ಕತ್ತೆಯಾಗುತ್ತೆ / ಉಳಿದುದ ನೀವೇ ಊಹಿಸಿಕೊಳ್ಳಿ’ ಎಂದು ಮುಂದುವರೆಯುವ ಕಾಗುಣಿತ ಪಾಠ – ಇಳಿ, ಸುಳಿ, ತಲಕಟ್ಟು, ಅಕಾರ ಹಕಾರ, ಹೊಕ್ಕುಳಗಳ ಭಾಷಾ ಮಹತ್ವದ ಬಗ್ಗೆ ಪ್ರಾಸದ ಜೊತೆಗೆ ಮಂದಹಾಸದೊಂದಿಗೆ ಆಪ್ತವೆನ್ನಿಸುತ್ತದೆ.

ಭಾಷೆಯಲ್ಲಿ ಇಲ್ಲದೆ ಮಡಿವಂತಿಕೆ ಭಾವದಲ್ಲಿರುವುದುಂಟೆ? ‘ಮಡಿವಂತರು ಕೇಳ್ಬೇಡಿ ನಮ್ಮ ಮಿಶ್ರ ಭಾಷೆಯ, ಮಡಿವಂತರು ಓದ್ಬೇಡಿ ನಮ್ಮ ವಿಚಿತ್ರ ಬರಹವ’ ಎನ್ನುವ ಕವಿ ಭಾಷೆಯ ಜೊತೆಗೆ ಸಾಮಾಜಿಕ ಮಡಿಯಿಂದಲೂ ದೂರವುಳಿದವರು. ‘ಮಡಿ ಮಡಿಯೆನುವೆವು’ ಕವಿತೆ ಮಡಿಯನ್ನು ಸೊಗಸಾಗಿ ಹುಡಿಯಾಗಿಸುತ್ತದೆ.

‘ಮಡಿ ಮಡಿಯೆನುವೆವು / ರೇಶಿಮೆಯನುಡುವೆವು / ಮಡಿವುದು ರೇಶಿಮೆ ಹುಳವು / ಅಯ್ಯಾ ಮಡಿವುದು ರೇಶಿಮೆ ಹುಳವು’, ‘ಮಡಿ ಮಡಿಯೆನುವೆವು / ಕೃಷ್ಣಾಜಿನ ತೊಡುವೆವು / ಮಡಿವುದು ಕೃಷ್ಣಾ ಮೃಗವು /ಅಯ್ಯಾ ಮಡಿವುದು ಕೃಷ್ಣಾ ಮೃಗವು’ – ಮಡಿಯ ಹುಸಿತನವನ್ನು ವಿಡಂಬಿಸುವ ಕವಿತೆಯಲ್ಲಿ ವಿಷಾದವೂ ಇದೆ. ಮಡಿ ಏನೆಲ್ಲವನ್ನೂ ಬಲಿ ತೆಗೆದುಕೊಂಡಿದೆ ಎನ್ನುವ ಆ ವಿಷಾದ, ಪದ್ಯಕ್ಕೆ ಪರಿಸರ ಕಾಳಜಿಯ ಆಶಯವನ್ನು ಕಸಿ ಮಾಡಿದೆ. ‘ಎಲ್ಲ ಬೇಕು ಮನುಷ್ಯರಿಗೆ / ಮನುಷ್ಯ ಬೇಕು ಯಾರಿಗೆ?’ ಎನ್ನುವ ವಿಷಾದದಲ್ಲಿ ಅದ್ದಿದ ಸಾಲು ಕೂಡ ಪರಿಸರ ಕಾಳಜಿಯದ್ದೇ.

ಎಳೆಯರಿಗಾಗಿ ಬರೆದ ಕೆಲವು ಪದ್ಯಗಳು ತಿರುಮಲೇಶರು ಈ ಮೊದಲು ಹಿರಿಯರಿಗಾಗಿ ಬರೆದ ಕವಿತೆಗಳನ್ನು ನೆನಪಿಸುವಂತಿವೆ. ಅಂಥದೊಂದು ರಚನೆ ‘ಬೆಕ್ಕಿನ ಕಣ್ಣುಗಳು’: ‘ಕತ್ತಲಾದರೆ ಬೆಕ್ಕಿಗೆ / ಮೊದಲು ಅದರ ಬಾಲ ಮಾಯ / ಆಮೇಲದರ ಕಾಲು ಮಾಯ’ – ಹೀಗೆ ಆರಂಭವಾಗಿ, ಬೆಕ್ಕಿನ ಎಲ್ಲ ಅಂಗಗಳೂ ಕತ್ತಲಲ್ಲಿ ಮಾಯವಾಗಿ, ಅದರ ಕಣ್ಣುಗಳ ಫಳಫಳ ಹೊಳಪಷ್ಟೇ ಉಳಿಯುವ ಕವಿತೆ, ತಿರುಮಲೇಶರ ಬಹುಪ್ರಸಿದ್ಧ ‘ಮುಖಾಮುಖಿ’ ಕವಿತೆಯನ್ನು ನೆನಪಿಸುತ್ತದೆ.

ಪುಸ್ತಕದ ಮಹತ್ವದ ಬಗ್ಗೆ ಹೇಳದಿದ್ದರೆ ಕನ್ನಡ ಮೇಷ್ಟ್ರ ಪಾಠ ಪೂರ್ಣವಾದೀತೆ? ‘ಯಾವಾಗ್ಲೂ ಪುಸ್ತಕ’ ಪದ್ಯ ಹೇಳುತ್ತೆ ಕೇಳಿ: ‘ಯಾಕೋ ಪುಟ್ಟ ಕಿಟ್ಟನ ಕೈಲಿ / ಯಾವಾಗ್ಲೂ ಒಂದು ಪುಸ್ತಕ’, ‘ಹೇಳಲಿಲ್ವೇ ಹಿರಿಯೋರು / ಭೂಷಣ ಅಂತ ಹಸ್ತಕ?’

ಪುಸ್ತಕದ ಮಹತ್ವವನ್ನು ಚಿಣ್ಣರಿಗೆ ಮನದಟ್ಟು ಮಾಡುವ ಮತ್ತೊಂದು ಪದ್ಯ ‘ಓದು ಪುಟ್ಟಿ ಓದೇ.’ ‘ಓದು ಪುಟ್ಟಿ ಓದೇ / ಓದುವೆನ್ನ ಓದೇ / ಸಣ್ಣ ಸಣ್ಣ ಪುಸ್ತಕ / ಬಣ್ಣ ಬಣ್ಣದ ಪುಸ್ತಕ’ ಎನ್ನುವ ಕವಿ, ಏನೆಲ್ಲ ಓದಬೇಕು ಎನ್ನುವುದನ್ನೂ ಪಟ್ಟಿ ಮಾಡಿದ್ದಾರೆ. ಆ ಪಟ್ಟಿಯಲ್ಲಿ ಕುವೆಂಪು, ಬೇಂದ್ರೆ, ಅನಕೃ, ತರಾಸು ಅವರನ್ನೊಳಗೊಂಡ ಕನ್ನಡ ಲೇಖಕಗಡಣದ ಜೊತೆಗೆ ಪತ್ರಿಕೆಗಳನ್ನೂ ಮಾಸಿಕಗಳನ್ನೂ ಓದುವಂತೆ ಕವಿ ಪುಟ್ಟಿಗೆ ಸೂಚಿಸಿದ್ದಾರೆ. ಆದರೆ, ಓದುವ ಸಾವಧಾನ ಕನ್ನಡದ ಮಕ್ಕಳಿಗೆ ಉಳಿದುಕೊಂಡಿದೆಯೆ? ಕನ್ನಡದ ಮಹತ್ವದ ಕವಿಯೊಬ್ಬರ ಈ ‘ಮಕ್ಕಳ ಪರ್ವ’ ಎಳೆಯರಿಗೆ ಮಾತ್ರವಲ್ಲ, ಹಿರಿಯರಿಗೂ ಹಬ್ಬವಾಗಬೇಕಷ್ಟೆ? ಆದರೆ, ಸಾಹಿತ್ಯಲೋಕ ವಿಸ್ಮೃತಿಯಲ್ಲಿರುವ ಹಾಗೂ ಸಹೃದಯರು ದ್ವೀಪಗಳಾಗಿರುವ ದಿನಗಳಲ್ಲಿ ಸಮಸ್ತ ಕನ್ನಡಿಗರನ್ನೂ ತಾಕುವ ಶಕ್ತಿ ಯಾವ ಸೃಜನಶೀಲ ಸಾಹಸಕ್ಕೂ ಇಲ್ಲವೇನೊ? ಈ ವಿರೋಧಾಭಾಸ ಹಾಗೂ ಕನ್ನಡದಲ್ಲಿನ ಮಕ್ಕಳ ಸಾಹಿತ್ಯದ ನಿರಾಶಾದಾಯಕ ಪರಿಸ್ಥಿತಿಯನ್ನೇ ‘ಆದಿಕಾವ್ಯ’ದ ಹತ್ತೂ ಸಂಕಲನಗಳ ತಲಾ 500 ಪ್ರತಿಗಳಷ್ಟೇ ಮುದ್ರಣಗೊಂಡಿರುವುದು ಸಂಕೇತಿಸುತ್ತಿರುವಂತಿದೆ.

ಚಿಕ್ಕಣಿ ರಾಜ
ಪು: 100; ₹100

ಓಡೋ ಪುಟ್ಟಾ ಓಡೋ
ಪು: 100; ₹100

ಬೀಸಿದರೆ ಉದುರಬೇಕು ನನ್ಹತ್ರ ಹೂ ಹಣ್ಣು ನಕ್ಷತ್ರ!
ಪು: 160; ₹150

ನಂಬಿ ಕೆಟ್ಟವರಿಲ್ಲ ಪುಟ್ಟನ
ಪು: 156; ₹150

ನಾನಿದ್ದೀನಲ್ಲ
ಅಂತಾನ್ ಪುಟ್ಟ
ಪು: 152; ₹150

ನೆನೆ ಪುಟ್ಟ ನೆನೆ
ಪು: 164; ₹150

ಅಟ್ಟದಲ್ಲೇನಿದೆಯೋ ಪುಟ್ಟನಿಗೇ ಗೊತ್ತು
ಪು: 164; ₹150

ಇಂತಪ್ಪ ಪುಟ್ಟ ಈಗೆಲ್ಲಿ ಪುಟ್ಟ?
ಪು: 176; ₹150

ಮೆಟ್ರೋದಲ್ಲಿ ಇಲಿ
ಪು: 156; ₹150

ಓ ಲಲ
ಪು: 164; ₹150

ಪ್ರ: ಅಭಿನವ ಪ್ರಕಾಶನ, ಬೆಂಗಳೂರು. ಫೋನ್: 9448804905

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.