ADVERTISEMENT

ಕಡಿಮೆ ಬೆಲೆಯ ಮಕಾನ್‌ ಭಾರತಕ್ಕೆ

ಹೊಸ ಗ್ರಾಹಕರ ಸೆಳೆಯಲು ಪೋರ್ಷ್‌ ಯತ್ನ, ಜುಲೈ ಒಳಗೆ ಲಭ್ಯ

ಸೂರ್ಯನಾರಾಯಣ ವಿ
Published 20 ಜೂನ್ 2019, 10:40 IST
Last Updated 20 ಜೂನ್ 2019, 10:40 IST
ಮಕಾನ್‌
ಮಕಾನ್‌   

ಭಾರತದ ಐಷಾರಾಮಿ ವಾಹನಗಳ ಉದ್ಯಮದಲ್ಲಿ ಗಟ್ಟಿಯಾಗಿ ಬೇರೂರಲು ಯತ್ನಿಸುತ್ತಿರುವಜರ್ಮನಿ ಮೂಲದ ಐಷಾರಾಮಿ ಸ್ಪೋರ್ಟ್ಸ್‌ ಕಾರುಗಳ ತಯಾರಿಕಾ ಸಂಸ್ಥೆ ಪೋರ್ಷ್‌, ಈಗ ಭಾರತದ ಕಾರ್ಪೊರೇಟ್ ಜಗತ್ತಿನ ಗ್ರಾಹಕರ ಮೇಲೆ ಕಣ್ಣಿಟ್ಟಿದೆ.

ಕಂಪನಿಯು ತನ್ನ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ಗಳಲ್ಲಿ (ಎಸ್‌ಯುವಿ) ಒಂದಾದ ‘ಮಕಾನ್‌’ ಮಾಡೆಲ್‌ನ ಹೊಸ ಮಾದರಿಯನ್ನು ಕಡಿಮೆ ಬೆಲೆಗೆ ಭಾರತದ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಜುಲೈ ಅಂತ್ಯದ ಒಳಗಾಗಿ ಹೊಸ ಮಕಾನ್‌ ಎಸ್‌ಯುವಿ ಭಾರತಕ್ಕೆ ಬರಲಿದೆ.

340 ಅಶ್ವಶಕ್ತಿ (ಎಚ್‌ಪಿ) (ಮಾಡೆಲ್‌ ಹೆಸರು ಮಕಾನ್‌– ಎಸ್‌) ಮತ್ತು 245 ಅಶ್ವಶಕ್ತಿ (ಎಚ್‌ಪಿ)ಎಂಜಿನ್‌ ಸಾಮರ್ಥ್ಯದಮಕಾನ್‌ನ ಎರಡು ಮಾದರಿಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಪೋರ್ಷ್‌ ಯೋಚಿಸುತ್ತಿದೆ. 245 ಅಶ್ವಶಕ್ತಿ ಸಾಮರ್ಥ್ಯದ ಎಂಜಿನ್‌ ಹೊಂದಿರುವ ಎಸ್‌ಯುವಿ ಬೆಲೆ ಮಕಾನ್‌ ಮಾಡೆಲ್‌ನ ಸಾಮಾನ್ಯ ಬೆಲೆಗಿಂತ ಕಡಿಮೆ ಇರಲಿದೆ. ಆದರೆ, ಎಷ್ಟು ಬೆಲೆ ನಿಗದಿಪಡಿಸಲಾಗಿದೆ ಎಂಬುದನ್ನು ಕಂಪನಿ ಇನ್ನೂ ಹೇಳಿಲ್ಲ.ಸದ್ಯ ಭಾರತದಲ್ಲಿ ಮಕಾನ್‌ ಎಸ್‌ಯುವಿಯ ಬೆಲೆ ₹ 80 ಲಕ್ಷದಿಂದ ಆರಂಭವಾಗುತ್ತಿದೆ.

ADVERTISEMENT

ಕಾರ್ಪೊರೇಟ್‌ ಜಗತ್ತು ಗುರಿ: ಭಾರತದಲ್ಲಿ ದುಬಾರಿ ಮಕಾನ್‌ ಮಾಡೆಲ್‌ನ ಎಸ್‌ಯುವಿಗಳನ್ನು ಖರೀದಿಸುತ್ತಿರುವವರಲ್ಲಿ ಹೆಚ್ಚಿನವರು ಉದ್ಯಮಿಗಳು. ಎಸ್‌ಯುವಿಯ ಬೆಲೆ ಕಡಿಮೆ ಮಾಡಿದರೆ ಕಾರ್ಪೊರೇಟ್‌ ಜಗತ್ತಿನ ಮಂದಿ ಹಾಗೂ ಇತರೆ ಸಿರಿವಂತರು ಕೂಡ ಖರೀದಿಗೆ ಮುಂದಾಗಬಹುದು ಎಂಬುದು ಪೋರ್ಷ್‌ ಲೆಕ್ಕಾಚಾರ.

ಮಾರಾಟ ಕುಂಠಿತ: 2017ರವರೆಗೂ ದೇಶದಲ್ಲಿ ಪ್ರತಿ ವರ್ಷ ಪೋರ್ಷ್‌ ಕಂಪನಿಯ 400ರಿಂದ 500ರಷ್ಟು ಕಾರುಗಳು ಮಾರಾಟವಾಗುತ್ತಿದ್ದವು. ಕಳೆದ ವರ್ಷ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿತ್ತು.

ಆರು ತಿಂಗಳ ಅವಧಿಯಲ್ಲಿ ತನ್ನ ಮತ್ತೊಂದು ಉತ್ಪನ್ನ ಕಯಾನ್‌ ಎಸ್‌ಯುವಿಯನ್ನು ಮಾರಾಟ ಮಾಡಲು ಅದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಕಡಿಮೆ ಬೆಲೆಯ ಹೊಸ ಮಕಾನ್‌ ಎಸ್‌ಯುವಿ ಮೇಲೆ ಕಂಪನಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ.

ಇನ್ನೆರಡು ಕಾರು: ಪೋರ್ಷ್‌ ಕಂಪನಿಯು ತನ್ನ 911 ಮಾದರಿಯ ಕಾರುಗಳನ್ನು ಏಪ್ರಿಲ್‌ ತಿಂಗಳಲ್ಲೇ ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇನ್ನೆರಡು ತಿಂಗಳಲ್ಲಿ ಮಕಾನ್‌ ಎಸ್‌ಯುವಿಯ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಿರುವ ಕಂಪನಿ,ಮುಂದಿನ ವರ್ಷ ಹೊಸ ಮಾದರಿಯ ಕಯಾನ್‌ ಕೂಪ್‌ ಎಸ್‌ಯುವಿ ಮತ್ತು ವಿದ್ಯುತ್‌ ಚಾಲಿತ ಕಾರುಗಳ ಮಾರಾಟವನ್ನೂ ಭಾರತದಲ್ಲಿ ಆರಂಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.