ADVERTISEMENT

ಅಕ್ಕಿ ಗಿರಣಿ ಮಾಲೀಕರ ಜತೆ ಇಂದು ಸಭೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST

ಬೆಂಗಳೂರು: ಹೆಚ್ಚಿನ ಪ್ರಮಾಣದಲ್ಲಿ ಲೇವಿ ಅಕ್ಕಿ ಸಂಗ್ರಹ ವಿರೋಧಿಸಿ ಅಕ್ಕಿ ಗಿರಣಿಗಳನ್ನು ಬಂದ್‌ ಮಾಡಿರುವ ಮಾಲೀಕರ ಜತೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಂಗಳವಾರ ನಡೆದ ಜನತಾದರ್ಶನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಡಿ.ಜಿ. ಶಾಂತನಗೌಡ ಜತೆ ಮಂಗಳವಾರ ಬೆಳಿಗ್ಗೆ ನಾನು ಚರ್ಚಿಸಿದ್ದೇನೆ. ಜತೆಗೆ ಅಕ್ಕಿ ಗಿರಣಿ ಮಾಲೀಕರ ಜತೆ ಮಾತುಕತೆ ನಡೆಸುವಂತೆ ಆಹಾರ ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೂ ಸೂಚಿಸಿದ್ದೇನೆ. ಬುಧವಾರ ಅವರು ಸಭೆ ನಡೆಸಲಿದ್ದಾರೆ’ ಎಂದು ತಿಳಿಸಿದರು.

ಸಚಿವರ ಜತೆ ನಡೆಯುವ ಸಭೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಈಗ ಸರ್ಕಾರ ಅಕ್ಕಿಗೆ ನಿಗದಿಪಡಿಸಿರುವ ದರ ಸಮರ್ಪಕವಾಗಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ₨1,310 ಜತೆಗೆ ರಾಜ್ಯ ಸರ್ಕಾರ ₨290 ಹೆಚ್ಚುವರಿಯಾಗಿ ನೀಡುತ್ತಿದೆ. ಕ್ವಿಂಟಲ್‌ ಭತ್ತಕ್ಕೆ ₨1,600 ಆಗುತ್ತದೆ. ಅನ್ನಭಾಗ್ಯ ಯೋಜನೆ ಜಾರಿಯಾಗಿರುವುದರಿಂದ ಲೆವಿ ಅಕ್ಕಿಯನ್ನು ಹೆಚ್ಚಿಗೆ ನೀಡುವಂತೆ ಅಕ್ಕಿ ಗಿರಣಿ ಮಾಲೀಕರಿಗೆ ಸೂಚಿಸಲಾಗಿದೆ. ಅವರು 13.5 ಲಕ್ಷ ಟನ್‌ ಅಕ್ಕಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಖಚಿತವಾಗಿ ಪ್ರತಿಕ್ರಿಯೆ ನೀಡದ ಮುಖ್ಯಮಂತ್ರಿ­ಯವರು, ‘ಸಚಿವ ಸಂಪುಟ ವಿಸ್ತರಣೆಯಾದಾಗ ನಿಮಗೆ ತಿಳಿಸುತ್ತೇನೆ’ ಎಂದು ನುಡಿದರು.

ಶೀಘ್ರದಲ್ಲಿ ಅಕಾಡೆಮಿಗಳಿಗೆ ಅಧ್ಯಕ್ಷರನ್ನು ನೇಮಿಸಲಾಗುವುದು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಹಂಚಿಕೆ ಪ್ರಕ್ರಿಯೆಗೂ ಶೀಘ್ರ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಅಭಿ­ವೃದ್ಧಿಗಾಗಿ ಕಾಮಗಾರಿಗಳನ್ನು ಕೈಗೊಳ್ಳುವುದು ಅನಿವಾರ್ಯ. ಅಂತಹ ಸಂದ­ರ್ಭ­ದಲ್ಲಿ  ರಸ್ತೆ ಅಗೆಯಬೇಕಾಗುತ್ತದೆ. ಆದರೆ, ಕಲಾವಿದರೊಬ್ಬರು ಗುಂಡಿ­ಯಲ್ಲಿ ಬಿದ್ದು ಸತ್ತಿದ್ದು ದುರಂತ. ಈ ರೀತಿಯ ಘಟನೆಗಳು ನಡೆಯಬಾರದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.