ADVERTISEMENT

ಅದಿರು: ಏಕರೂಪ ದರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:30 IST
Last Updated 12 ಸೆಪ್ಟೆಂಬರ್ 2011, 19:30 IST
ಅದಿರು: ಏಕರೂಪ ದರಕ್ಕೆ ಮನವಿ
ಅದಿರು: ಏಕರೂಪ ದರಕ್ಕೆ ಮನವಿ   

ಬಳ್ಳಾರಿ:  ಸುಪ್ರೀಂಕೋರ್ಟ್ ಆದೇಶದ ಕಾರಣಕ್ಕೆ ಜಿಲ್ಲೆಯಾದ್ಯಂತ ಗಣಿಗಾರಿಕೆ ಮತ್ತು ಅದಿರು ಸಾಗಣೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಪೂರೈಸುವ ಅದಿರಿಗೆ ಏಕರೂಪದ ದರ ನಿಗದಿ ಮಾಡಬೇಕು ಎಂದು ರಾಜ್ಯ ಮೆದು ಕಬ್ಬಿಣ ಉತ್ಪಾದಕರ ಸಂಘ ಮನವಿ ಮಾಡಿದೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಮನವಿ ಮಾಡಿದ ಸಂಘದ ಅಧ್ಯಕ್ಷ ಟಿ.ಶ್ರೀನಿವಾಸರಾವ್, ಗಣಿಗಾರಿಕೆ ಮತ್ತು ಅದಿರು ಸಾಗಣೆ ಸ್ಥಗಿತದಿಂದಾಗಿ ಮೆದು ಕಬ್ಬಿಣ ಘಟಕ (ಸ್ಪಾಂಜ್ ಐರನ್ ಯೂನಿಟ್ಸ್)ಗಳಿಗೆ ತೀವ್ರ ತೊಂದರೆ ಎದುರಾಗಿದೆ ಎಂದರು.

ಸ್ಥಳೀಯ ಉತ್ಪಾದಕರಿಗೆ ಅದಿರನ್ನು ಪೂರೈಸುವಂತೆ ದೋಣಿಮಲೈನಲ್ಲಿ ಗಣಿ ಹೊಂದಿರುವ ಎನ್‌ಎಂಡಿಸಿಗೆ ಮಾತ್ರ ಸೂಚಿಸಲಾಗಿದ್ದು, ನಿಗಮವು ಗುಣಮಟ್ಟದ ಪ್ರತಿ ಟನ್ ಅದಿರಿಗೆ ರೂ 4 ಸಾವಿರ ದರ ನಿಗದಿ ಮಾಡಿದೆ. ಆ ದರವನ್ನು ಕಡಿಮೆ ಮಾಡಿದರೆ ಮಾತ್ರ ಮೆದು ಕಬ್ಬಿಣ ಉತ್ಪಾದನಾ ಘಟಕಗಳು ಉಳಿಯಲಿವೆ ಎಂದರು.

ಅದಿರನ್ನು ಲಂಪ್ಸ್ ಮತ್ತು ಪೈನ್ಸ್ ಎಂಬಂತೆ ವರ್ಗೀಕರಿಸಲಾಗುತ್ತಿದ್ದು, ಪ್ರತಿ ಟನ್ ಅದಿರು ಪಡೆಯಲು ಕೇವಲ ರೂ 400 ರಿಂದ ರೂ 500  ವೆಚ್ಚ ತಗುಲುತ್ತದೆ. ಸರ್ಕಾರಿ ಸ್ವಾಮ್ಯದ ನಿಗಮವು ಅಂತರರಾಷ್ಟ್ರೀಯ ಮಾರುಕಟ್ಟೆ ದರವನ್ನೇ ಆಕರಿಸುತ್ತಿದೆ. ಆ ಪದ್ಧತಿ  ಕೈಬಿಟ್ಟು ಸ್ಥಳೀಯ ಘಟಕಗಳ ಅಸ್ತಿತ್ವ ರಕ್ಷಣೆಗೂ ಗಮನ ಹರಿಸಬೇಕು ಎಂದರು.

ರಾಜ್ಯದಲ್ಲಿ 60ಕ್ಕೂ ಅಧಿಕ ಮೆದು ಕಬ್ಬಿಣ ಉತ್ಪಾದನಾ ಘಟಕಗಳಿದ್ದು, ಅದಿರು ಲಭ್ಯವಿರುವ ಬಳ್ಳಾರಿ ಜಿಲ್ಲೆಯಲ್ಲಿ ಅವುಗಳ ಸಂಖ್ಯೆ 36. ಆ ಪೈಕಿ ಈಗಾಗಲೇ ಅದಿರು ಕೊರತೆಯಿಂದಾಗಿ 31 ಘಟಕಗಳು ಉತ್ಪಾದನೆ ಸ್ಥಗಿತಗೊಳಿಸಿದ್ದು, ಇನ್ನುಳಿದ ಐದು ಘಟಕಗಳು ಕೆಲವೇ ದಿನಗಳಲ್ಲಿ ಸ್ಥಗಿತಗೊಳ್ಳಲಿವೆ ಎಂದರು.

ಉಕ್ಕು ಅಥವಾ ಕಬ್ಬಿಣದ ಉತ್ಪಾದನೆ  ರಫ್ತು ಮಾಡದೇ ಸ್ಥಳೀಯ ಉತ್ಪಾದಕರನ್ನೇ ಉತ್ತೇಜಿಸುವ ಅಗತ್ಯವಿದೆ. ಇದರಿಂದ ಮೌಲ್ಯವರ್ಧನೆಯೂ ಸಾಧ್ಯ, ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದರು.

ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ರಾತ್ರಿಯಿಂದ ಉತ್ಪಾದನೆ  ಸ್ಥಗಿತಗೊಳಿಸಿ, ಇದೇ 14ರಂದು ನಗರದಲ್ಲಿ ಪ್ರತಿಭಟನಾ ವೆುರವಣಿಗೆ ಏರ್ಪಡಿಸಲು ನಿರ್ಧರಿಸಲಾಗಿದೆ. ಅಂದಿನಿಂದಲೇ ಅನಿರ್ದಿಷ್ಟ ಅವಧಿಯ ಸರದಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಸಂಘದ ಎಸ್.ಪಿ. ವೆಂಕಟೇಶ, ಯು.ಕೆ. ರಾಣಾ, ಇ.ಶ್ರೀನಿವಾಸ, ಎಸ್.ಬಸವರಾಜ್, ಜಿ.ರಾಮು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.