ADVERTISEMENT

ಅಪೆಕ್ಸ್ ಬ್ಯಾಂಕ್‌ನ ಲಾಭ 5 ಪಟ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 19:30 IST
Last Updated 2 ಜೂನ್ 2011, 19:30 IST
ಅಪೆಕ್ಸ್ ಬ್ಯಾಂಕ್‌ನ  ಲಾಭ 5 ಪಟ್ಟು ಹೆಚ್ಚಳ
ಅಪೆಕ್ಸ್ ಬ್ಯಾಂಕ್‌ನ ಲಾಭ 5 ಪಟ್ಟು ಹೆಚ್ಚಳ   

ಬೆಂಗಳೂರು: `2010- 11ರ ಸಾಲಿನಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ್ಙ 45.59 ಕೋಟಿ ಲಾಭ ಗಳಿಸಿದೆ. ಇದು ಹಿಂದಿನ ಆರ್ಥಿಕ ವರ್ಷಕ್ಕಿಂತ ಐದು ಪಟ್ಟು ಹೆಚ್ಚು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ್ಙ 100 ಕೋಟಿಗೂ ಹೆಚ್ಚು ಲಾಭ ಗಳಿಸುವ ಗುರಿ ಇಟ್ಟುಕೊಳ್ಳಲಾಗಿದೆ~ ಎಂದು ಬ್ಯಾಂಕಿನ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.

 `ಬಹಳ ವರ್ಷಗಳ ನಂತರ ಬ್ಯಾಂಕು ಈ ಪ್ರಮಾಣದ ಲಾಭ ಗಳಿಸಿದೆ. 2009- 10ರ ಸಾಲಿನಲ್ಲಿ ದೇಶದಲ್ಲಿ 3ನೇ ಸ್ಥಾನದಲ್ಲಿದ್ದ ಬ್ಯಾಂಕು ಈ ಬಾರಿ ಮೊದಲ ಸ್ಥಾನ ಪಡೆಯುವ ಸಾಧ್ಯತೆ ಇದೆ~ ಎಂದು ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

`ಜಿಲ್ಲಾ ಬ್ಯಾಂಕುಗಳು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 1.76 ಲಕ್ಷ ಸ್ವಸಹಾಯ ಗುಂಪುಗಳನ್ನು ರಚಿಸಿ, ಶೇಕಡಾ 4ರ ಬಡ್ಡಿ ದರದಲ್ಲಿ ಒಟ್ಟು ್ಙ 1,600 ಕೋಟಿ ಸಾಲ ನೀಡಲಾಗಿದೆ. ಬರುವ ಮಾರ್ಚ್ ಅಂತ್ಯಕ್ಕೆ 22 ಸಾವಿರ ಸ್ವಸಹಾಯ ಗುಂಪುಗಳ ರಚಿಸಿ, 2014ರ ಮಾರ್ಚ್ ಅಂತ್ಯದ ವೇಳೆಗೆ ಒಟ್ಟು 3 ಲಕ್ಷ  ಸ್ವಸಹಾಯ ಗುಂಪುಗಳನ್ನು ರಚಿಸುವ ಗುರಿ ಹೊಂದಿದ್ದೇವೆ. ಸುಮಾರು ್ಙ5 ಸಾವಿರ ಕೋಟಿ   ಸಾಲ ಸೌಲಭ್ಯ ನೀಡಲು ಉದ್ದೇಶಿಸಲಾಗಿದೆ~.

`ಬ್ಯಾಂಕುಗಳಿಂದ ಸಾಲ ಪಡೆಯಲು ಸಾಧ್ಯವಾಗದಿರುವ ದುರ್ಬಲ ವರ್ಗಗಳಿಗೆ ಜಂಟಿ ಬಾಧ್ಯತಾ ಯೋಜನೆ ಅಡಿಯಲ್ಲಿ ಸ್ವಸಹಾಯ ಗುಂಪುಗಳ ಮೂಲಕ ಸಾಲ ಸೌಲಭ್ಯ ನೀಡಲಾಗುವುದು. ಮಹಿಳಾ ಸಬಲೀಕರಣ ಮತ್ತು ಉದ್ಯಮಶೀಲತೆ ಅಭಿವೃದ್ಧಿಪಡಿಸುವುದಕ್ಕಾಗಿ ಬ್ಯಾಂಕಿನಲ್ಲಿ ವಿಶೇಷ ಕಿರು ಹಣಕಾಸು ನೀಡಿಕೆ ವಿಭಾಗವನ್ನು ತೆರೆಯಲಾಗಿದೆ. ಈ ವಿಭಾಗ ಆರಂಭಿಸಿದ ರಾಷ್ಟ್ರದ ಮೊದಲ ಅಪೆಕ್ಸ್ ಬ್ಯಾಂಕು ನಮ್ಮದು~.

`ರಾಜ್ಯ ಸರ್ಕಾರ ಪ್ರೊ.ವೈದ್ಯನಾಥನ್ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿ ವೃತ್ತಿಪರತೆಯನ್ನು ಅಳವಡಿಸಲು ನೇರ ನೇಮಕಾತಿ ಮೂಲಕ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತಿದೆ. ಒಂದು ಸಲ ನಷ್ಟ ತುಂಬಿಕೊಡುವ ಯೋಜನೆ ಅಡಿ ರಾಜ್ಯ, ಜಿಲ್ಲಾ ಮತ್ತು ಪ್ರಾಥಮಿಕ ಸಹಕಾರ ಬ್ಯಾಂಕುಗಳಿಗೆ ಒಟ್ಟು ರೂ. 759 ಕೋಟಿ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುಂಬಿಕೊಟ್ಟಿವೆ~.


`ಬ್ಯಾಂಕಿನ ಅನುತ್ಪಾದಕ ಆಸ್ತಿಗಳ ಪ್ರಮಾಣವು (ಎನ್‌ಪಿಎ) ಕೇವಲ ಶೇ 1.48ರಷ್ಟಿದೆ. ಇದು ದೇಶದಲ್ಲೇ ಅತ್ಯಂತ ಕಡಿಮೆ. ಮಹಾರಾಷ್ಟ್ರದ ಅಪೆಕ್ಸ್ ಬ್ಯಾಂಕಿನ ಎನ್‌ಪಿಎ ಶೇ 38ರಷ್ಟಿದೆ. ಬಾದಾಮಿ ಶುಗರ್ಸ್ ಫ್ಯಾಕ್ಟರಿ ಹೊರತು ಪಡಿಸಿ ಉಳಿದೆಲ್ಲ ಸಕ್ಕರೆ ಕಾರ್ಖಾನೆಗಳ ಸಾಲ ಮರು ಪಾವತಿ ಆಗಿದೆ~.

`ಮಾರ್ಚ್ ಅಂತ್ಯಕ್ಕೆ ಬ್ಯಾಂಕಿನ ಒಟ್ಟು ಠೇವಣಿ ್ಙ 4,646.67 ಕೋಟಿ. ದುಡಿಯುವ ಬಂಡವಾಳ ್ಙ 7,259.75 ಕೋಟಿ. ಹೂಡಿಕೆ ್ಙ2,747 ಕೋಟಿ. 2011- 12ರ ಸಾಲಿನಲ್ಲಿ ದುಡಿಯುವ ಬಂಡವಾಳವನ್ನು ್ಙ 8,000 ಕೋಟಿಗೆ, ಠೇವಣಿಯನ್ನು ್ಙ 5,275 ಕೋಟಿಗೆ ಹೆಚ್ಚಿಸಲು ಕಾರ್ಯಕ್ರಮ ರೂಪಿಸಲಾಗಿದೆ~.

`ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಬ್ಯಾಂಕುಗಳ ಮೂಲಕ ರೈತರಿಗೆ ್ಙ 5400 ಕೋಟಿ ಸಾಲ ನೀಡಲು ಉದ್ದೇಶಿಸಲಾಗಿದೆ. ಮೇ ಅಂತ್ಯದವರೆಗೆ 2.5 ಲಕ್ಷ ರೈತರಿಗೆ ಶೇ 1ರ ಬಡ್ಡಿ ದರದಲ್ಲಿ ್ಙ 900 ಕೋಟಿ ಸಾಲ ನೀಡಲಾಗಿದೆ.


ದೇಶ ಮತ್ತು ವಿದೇಶಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನೂ ನೀಡಲಾಗುತ್ತಿದೆ~.

`ವೈದ್ಯನಾಥನ್ ವರದಿ ಶಿಫಾರಸಿನ ಪ್ರಕಾರ ಈ ಸಾಲಿನಿಂದ ಕೃಷಿಯೇತರ ಚಟುವಟಿಕೆಗಳಿಗೆ ಶೇ 40ರಷ್ಟು ಸಾಲವನ್ನು ನೀಡಲಾಗುವುದು. ವರ್ಷದ ಹಿಂದೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಪ್ರವಾಸೋದ್ಯಮ ಯೋಜನೆಗಳಿಗೆ ಶೇ 10ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಈ ಸಲವೂ ಅದನ್ನು ಮುಂದುವರೆಸಲಾಗುವುದು~.

`ಬ್ಯಾಂಕಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ 9 ಶಾಖೆಗಳನ್ನು ನಗರದ ವಿವಿಧ ಬಡಾವಣೆಗಳಲ್ಲಿ ತೆರೆಯಲಾಗಿದೆ. ಇದರೊಂದಿಗೆ ಬ್ಯಾಂಕಿನ ಶಾಖೆಗಳ ಸಂಖ್ಯೆ 40ಕ್ಕೆ ಏರಿದೆ. ಎಲ್ಲ ಶಾಖೆಗಳಲ್ಲಿ ಮುಂದಿನ ಮಾರ್ಚ್ ಅಂತ್ಯದ ವೇಳೆಗೆ ಕೋರ್ ಬ್ಯಾಂಕಿಂಗ್ ಮತ್ತು ಎಟಿಎಂ ಸೌಲಭ್ಯವನ್ನು ಒದಗಿಸಲಾಗುವುದು. ಕೋರಮಂಗಲ, ಜೆ.ಪಿ. ನಗರ, ಆರ್‌ಪಿಸಿ ಬಡಾವಣೆ ಸೇರಿದಂತೆ ಆರು ಕಡೆಗಳಲ್ಲಿ ಬ್ಯಾಂಕಿನ ಸ್ವಂತ ನಿವೇಶನಗಳಲ್ಲಿ ಶಾಖಾ ಕಟ್ಟಡಗಳನ್ನು ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ~.
`ಅಪೆಕ್ಸ್ ಬ್ಯಾಂಕಿನ ಎಲ್ಲ ಶಾಖೆಗಳಲ್ಲೂ ಇ- ಸ್ಟಾಂಪಿಂಗ್ ಸೇವೆ ಜಾರಿಯಲ್ಲಿದ್ದು, ಸದ್ಯದಲ್ಲೇ ಈ ಸೇವೆಯನ್ನು ಜಿಲ್ಲಾ ಸಹಕಾರಿ ಬ್ಯಾಂಕುಗಳಿಗೂ ವಿಸ್ತರಿಸಲಾಗುವುದು~.

ತೆರಿಗೆ ವಿನಾಯಿತಿ ರದ್ದು ಬೇಡ: ಸಹಕಾರ ಬ್ಯಾಂಕುಗಳಿಗೆ ತೆರಿಗೆ ವಿನಾಯಿತಿ ರದ್ದು ಮಾಡುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ ಮಂಜುನಾಥಗೌಡ, `ಇಂತಹ ಕ್ರಮದಿಂದ ಕೃಷಿ ಬೆಳವಣಿಗೆ ಕುಂಠಿತವಾಗಲಿದೆ. ಸಹಕಾರಿ ಆಶಯಗಳಿಗೆ ವಿರುದ್ಧವಾಗಿರುವ ಇಂತಹ ನಿರ್ಧಾರವನ್ನು ಕೈಬಿಡಬೇಕು~ ಎಂದು ಒತ್ತಾಯಿಸಿದರು.

ADVERTISEMENT


ಗೋಷ್ಠಿಯಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ನಾಗರಾಜಯ್ಯ, ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಎನ್.ಆರ್.ಪಾಟೀಲ್, ಎಂ.ವೆಂಕಟೇಗೌಡ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.