(ಹಿಂದಿನ ಸಂಚಿಕೆಯಿಂದ)
ದೇಣಿಗೆ
ವಿಶೇಷವಾಗಿ ಕೇಂದ್ರ ಸರಕಾರವು ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಮತ್ತು ವಿಪತ್ತುಗಳ ನಿಗ್ರಹ ಉದ್ದೇಶಕ್ಕೆ ಸ್ಥಾಪಿಸಿದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಹಣ ತೊಡಗಿಸಿದಲ್ಲಿ ಅಲ್ಲದೇ ಮಾನ್ಯತೆ ಪಡೆದ ಚಾರಿಟೇಬಲ್ ಟ್ರಸ್ಟ್‌ಗೂ ದೇಣಿಗೆ ನೀಡಿದಲ್ಲಿ ಅಂತಹ ಆದಾಯಕ್ಕೆ ವಿನಾಯತಿ ಇರುತ್ತದೆ.
ಹಣ ತೊಡಗಿಸುವಿಕೆ
2011-12ನೇ ಸಾಲಿಗೆ ಅನ್ವಯವಾಗುವಂತೆ ಯಾವುದೇ ವ್ಯಕ್ತಿ /ಅವಿಭಕ್ತ ಕುಟುಂಬದವರು ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ ದೀರ್ಘಾವಧಿ ಮೂಲ ಸೌಕರ್ಯ ಬಾಂಡ್‌ಗಳಲ್ಲಿ ಹಣ ತೊಡಗಿಸಿದಲ್ಲಿ ಆದಾಯ ತೆರಿಗೆ ಸೆಕ್ಷನ್ 80 ಸಿಸಿಎಫ್ ಪ್ರಕಾರ, ಗರಿಷ್ಠ ರೂ 20,000 ದ ವರೆಗೆ ಆದಾಯದಲ್ಲಿ ಕಡಿತ ಮಾಡಿ ತೆರಿಗೆ ಉಳಿತಾಯ ಮಾಡಿಕೊಳ್ಳಲು ಅವಕಾಶವಿದೆ.
ಈ ಯೋಜನೆಯಲ್ಲಿ ತೊಡಗಿಸಿದ ಹಣವು, ನಿಯಮ 80ಸಿ ಹೊರತುಪಡಿಸಿ (ರೂ 1 ಲಕ್ಷ) ಹೆಚ್ಚಿನ ಉಳಿತಾಯಕ್ಕೆ ಈ ತೆರಿಗೆ ನಿಯಮ ಅನ್ವಯಿಸುವುದು. ಇದರ ಬಗ್ಗೆ ಹೆಚ್ಚಿನ ಪ್ರಚಾರ ಇರುವುದಿಲ್ಲ. ಪತ್ರಿಕೆಗಳಲ್ಲಿ ಬರುವ ಸುದ್ದಿ, ಜಾಹೀರಾತುಗಳಿಂದಲೇ ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ಇಂತಹ ಯೋಜನೆಗಳು ಡಿಸೆಂಬರ ತಿಂಗಳಿಂದ ಪ್ರಾರಂಭವಾಗುವವು.
`ಪಟ್ಟಿ 1~ರಲ್ಲಿ ವಿವರಿಸಿರುವಂತೆ, ಖರ್ಚು/ವೆಚ್ಚ/ಉಳಿತಾಯ/ ಹೂಡಿಕೆಗಳಲ್ಲಿ ತೊಡಗಿಸಿದ ಹಣವು ರೂ 1,42,000 ಆಗಿದ್ದರೂ, ಗರಿಷ್ಠ ಮಿತಿ ರೂ. 1,00,000 ಇರುವುದರಿಂದ ರೂ 42,000ಕ್ಕೆ ನೀವು ತೆರಿಗೆ ನೀಡಬೇಕಾಗುತ್ತದೆ. ಇನ್ನು ನೀವು ರೂ 20,000 ವರೆಗೆ 80ಸಿಸಿಎಫ್ ಅನ್ವಯ ದೀರ್ಘಾವಧಿ ಬಾಂಡಗಳನ್ನು ಖರೀದಿಸಿದಲ್ಲಿ ಅದಕ್ಕೆ ಮೇಲ್ಕಂಡ ಮಿತಿಯ ಜೊತೆಗೆ ಆದಾಯದಲ್ಲಿ ಕಡಿತಗೊಳಿಸಿ ತೆರಿಗೆ ಉಳಿತಾಯ ಮಾಡಬಹುದು.
`ಪಟ್ಟಿ 2~ರಲ್ಲಿ ತಿಳಿಸಿರುವಂತೆ, ಹಿರಿಯ ನಾಗರಿಕರಿಗೆ ಹೆಚ್ಚಿನ ಪ್ರೋತ್ಸಾಹ ಇರುವುದು ಕಂಡು ಬರುತ್ತದೆ. ಈ ಯೋಜನೆಗಳಿಗೆ ರಿಯಾಯತಿ/ವಿನಾಯ್ತಿ ಪಡೆದುಕೊಳ್ಳ ಬಯಸುವವರು ದಾಖಲೆಗಳನ್ನು/ರಸೀದಿಗಳನ್ನು ಸಲ್ಲಿಸುವುದು ಕಡ್ಡಾಯ.
ವಿನಾಯ್ತಿ /ರಿಯಾಯ್ತಿಗಳನ್ನು ಉಪಯೋಗಿಸಿಕೊಂಡು, ತೆರಿಗೆ ಸಲಹೆಗಾರರಿಂದ ಸಲಹೆ ಪಡೆದುಕೊಂಡು ಉಳಿತಾಯ ಮಾಡಬಹುದು.
ನಿಮ್ಮ ತೆರಿಗೆಯ ಆದಾಯ ಸರಿಯಾಗಿ ಲೆಕ್ಕಹಾಕಿಕೊಂಡು ವಿನಾಯ್ತಿಗಳನ್ನು ಬಳಸಿಕೊಂಡು ಸರಿಯಾಗಿ ತೆರಿಗೆ ತುಂಬಿದಲ್ಲಿ ರಾಷ್ಟ್ರದ ಅಭಿವೃದ್ಧಿಯಲ್ಲಿ ಸಹ ಪಾಲುದಾರರಾಗಬಹುದು. ಆದಾಯ ತೆರಿಗೆಯ ಲೆಕ್ಕವನ್ನು ಅಂತರಜಾಲ ತಾಣ ಡಿಡಿಡಿ.ಜ್ಞ್ಚಿಟಞಛಿಠಿಚ್ಡಜ್ಞಿಜಿ.ಜಟ.ಜ್ಞಿ ಮೂಲಕ ಲೆಕ್ಕಹಾಕಿಕೊಳ್ಳಬಹುದು.
ಮಿತಿ ಹೆಚ್ಚಳ?
ಕೇಂದ್ರ ಸರ್ಕಾರವು 2012-13ನೇ ಹಣಕಾಸು ವರ್ಷದಲ್ಲಿ ನೇರ ತೆರಿಗೆ ನೀತಿ ಸಂಹಿತೆ (ಡಿಟಿಸಿ) ಜಾರಿಗೆ ತರಲು ಉದ್ದೇಶಿಸಿದೆ. ವೈಯಕ್ತಿಕ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಒಂದು ವೇಳೆ ಈ ನೀತಿ ಸಂಹಿತೆ ಪ್ರಸ್ತಾವಗಳು ಏಪ್ರಿಲ್ ತಿಂಗಳಿನಿಂದ ಜಾರಿಗೆ ಬಂದರೆ, ಅದರಿಂದ ವೇತನವರ್ಗಕ್ಕೆ ಹೆಚ್ಚಿನ ಪ್ರಯೋಜನಗಳು ಲಭಿಸಲಿವೆ.
ಈ `ಡಿಟಿಸಿ~ ಮಸೂದೆಯ ಪ್ರಸ್ತಾವಗಳನ್ನು ಪರಿಶೀಲಿಸಿರುವ ಸಂಸತ್ತಿನ ಸ್ಥಾಯಿ ಸಮಿತಿಯು, ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ರೂ 3 ಲಕ್ಷಕ್ಕೆ ಮತ್ತು ಉಳಿತಾಯಕ್ಕೆ ಸಂಬಂಧಿಸಿದ ಕಡಿತದ ಮಿತಿಯನ್ನೂ ರೂ 2.5 ಲಕ್ಷಗಳಿಗೆ ಹೆಚ್ಚಿಸಲು ಸಲಹೆ ನೀಡಿದೆ. ಸಂಸತ್ತು ಈ ಶಿಫಾರಸುಗಳನ್ನು ಒಪ್ಪಿಕೊಳ್ಳುವ ಸಾಧ್ಯತೆಗಳು ಇವೆ.
ಭವಿಷ್ಯ ನಿಧಿ, ಜೀವ ವಿಮೆ, ಮಕ್ಕಳ ಶಿಕ್ಷಣ, ಮೂಲ ಸೌಕರ್ಯ ಬಾಂಡ್‌ಗಳಲ್ಲಿ ತೊಡಗಿಸುವ ಉಳಿತಾಯಕ್ಕೆ ಸಂಬಂಧಿಸಿದಂತೆ ಒಟ್ಟು ಆದಾಯದಲ್ಲಿನ ತೆರಿಗೆ ಕಡಿತ ಪ್ರಮಾಣವನ್ನು ಕೂಡ ಸದ್ಯದ ರೂ 1.20 ಲಕ್ಷದಿಂದ ರೂ 2.5 ಲಕ್ಷಕ್ಕೆ ಹೆಚ್ಚಿಸುವುದಕ್ಕೂ ಸಮಿತಿ ಸಲಹೆ ನೀಡಿದೆ. ವೇತನವರ್ಗದವರು ಈಗ ಬಜೆಟ್ ಮಂಡನೆ ದಿನವನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.