ADVERTISEMENT

ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಬಡ್ತಿ

ಪಿಟಿಐ
Published 12 ಏಪ್ರಿಲ್ 2018, 19:30 IST
Last Updated 12 ಏಪ್ರಿಲ್ 2018, 19:30 IST

ವಾಷಿಂಗ್ಟನ್‌: ಜಾಗತಿಕ ಆರ್ಥಿಕ ಸ್ವಾತಂತ್ರ್ಯಸೂಚ್ಯಂಕದಲ್ಲಿ ಭಾರತವು 130ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಅಮೆರಿಕದ ಚಿಂತಕರ ಚಾವಡಿ ಹೆರಿಟೇಜ್‌ ಫೌಂಡೇಷನ್‌ ನಡೆಸಿದ ಸಮೀಕ್ಷೆಯಲ್ಲಿ, 2017ರಲ್ಲಿ 180 ದೇಶಗಳ ಪೈಕಿ 143ನೇ ಸ್ಥಾನದಲ್ಲಿದ್ದ ಭಾರತ, ಈಗ 130ನೇ ಸ್ಥಾನಕ್ಕೆ ಏರಿದೆ. 111ನೇ ಸ್ಥಾನದಲ್ಲಿದ್ದ ಚೀನಾ ಈಗ 110ನೆ ಸ್ಥಾನ ಮತ್ತು ಪಾಕಿಸ್ತಾನ 131ನೇಸ್ಥಾನದಲ್ಲಿ ಇವೆ.

ಭಾರತ ಈ ವರ್ಷ ಆರ್ಥಿಕ ಸ್ವಾತಂತ್ರ್ಯ ವಿಷಯದಲ್ಲಿ 54.5 ಅಂಕ ಗಳಿಸಿ ಬಡ್ತಿ ಪಡೆದಿದೆ ಎಂದು ಹೆರಿಟೇಜ್‌ ಫೌಂಡೇಷನ್‌ ತಿಳಿಸಿದೆ.

ADVERTISEMENT

ವಹಿವಾಟು ಸ್ವಾತಂತ್ರ್ಯ, ಸರ್ಕಾರದ ಸಮಗ್ರತೆ ಮತ್ತು ವಿತ್ತೀಯ ಆರೋಗ್ಯದಲ್ಲಿನ ಸುಧಾರಣೆ ಕಾರಣಕ್ಕೆ ಭಾರತದ ಒಟ್ಟಾರೆ ಅಂಕಗಳಿಕೆ ಶೇ 1.9ರಷ್ಟು ಏರಿಕೆಯಾಗಿದೆ. ಏಷ್ಯಾ ಪೆಸಿಫಿಕ್‌ ಪ್ರದೇಶದ 43 ದೇಶಗಳಲ್ಲಿ ಭಾರತದ ಶ್ರೇಯಾಂಕವು 30 ನೇ ಸ್ಥಾನದಲ್ಲಿದೆ. ಒಟ್ಟಾರೆ ಅಂಕ ಗಳಿಕೆಯು ಪ್ರಾದೇಶಿಕ ಮತ್ತು ಜಾಗತಿಕ ಸರಾಸರಿ ಮಟ್ಟಕ್ಕಿಂತ ಕಡಿಮೆ ಇದೆ.

ಭಾರತವು ಮುಕ್ತ ಮಾರುಕಟ್ಟೆಯ ಆರ್ಥಿಕತೆಯಾಗಿ ಅಭಿವೃದ್ಧಿಪಥದಲ್ಲಿ ಸಾಗಿದೆ. ಆರ್ಥಿಕ ಸ್ವಾತಂತ್ರ್ಯವು ಕೈಗಾರಿಕೆಗಳನ್ನು ನಿಯಂತ್ರಣ ಮುಕ್ತಗೊಳಿಸುವುದು, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಖಾಸಗೀಕರಣ, ವಿದೇಶ ವ್ಯಾಪಾರ ಮತ್ತು ಹೂಡಿಕೆ ಮೇಲಿನ ನಿಯಂತ್ರಣ ತಗ್ಗಿಸುವ ಕ್ರಮಗಳನ್ನು ಒಳಗೊಂಡಿದೆ. 1990ರಲ್ಲಿಯೇ ಈ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಈ ಉಪಕ್ರಮಗಳು ಆರ್ಥಿಕ ಬೆಳವಣಿಗೆಯನ್ನು ತ್ವರಿತಗೊಳಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಗತಿಗೆ ಅಡ್ಡಿ: ಭ್ರಷ್ಟಾಚಾರದ ಸಮಸ್ಯೆ, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸದಿರುವುದು, ನಿರ್ಬಂಧಿತ ಮತ್ತು ಹೊರೆಯಾಗಿ ಪರಿಣಮಿಸಿರುವ ನಿಯಂತ್ರಣ ಕ್ರಮಗಳು, ಕಳಪೆ ಹಣಕಾಸು ನೀತಿ ಮತ್ತು ಅಸಮರ್ಪಕ ಬಜೆಟ್‌ ನಿರ್ವಹಣೆಯು ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗಿ ಪರಿಣಮಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ವ್ಯಾಪಕ ಪ್ರಮಾಣದಲ್ಲಿ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದರೂ, ಇಲ್ಲಿಯವರೆಗಿನ ಸುಧಾರಣೆಗಳು ಸಾಧಾರಣ ಮಟ್ಟದಲ್ಲಿ ಇವೆ. ವಿದೇಶಿ ಬಂಡವಾಳ ಹೂಡಿಕೆಗೆ ಸರ್ಕಾರ ಮುಕ್ತ ನೀತಿ ಅನುಸರಿಸುತ್ತಿದ್ದರೂ ಅದು ಸರಾಸರಿ ಮಟ್ಟಕ್ಕಿಂತ ಕಡಿಮೆ ಇದೆ.

ಹಣಕಾಸು ವಲಯದಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪ್ರಭಾವ ಗರಿಷ್ಠ ಮಟ್ಟದಲ್ಲಿ ಇದೆ. ವಿದೇಶಿ ಸಂಸ್ಥೆಗಳ ಪಾಲುದಾರಿಕೆ ಸೀಮಿತ ಪ್ರಮಾಣದಲ್ಲಿ ಇದೆ. ಸರ್ಕಾರಿ ಒಡೆತನದ ಬ್ಯಾಂಕ್‌ಗಳು ವಸೂಲಾಗದ ಸಾಲದ  (ಎನ್‌ಪಿಎ) ತೀವ್ರ ಸಮಸ್ಯೆ ಎದುರಿಸುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.