ADVERTISEMENT

ಆಹಾರ ಹಣದುಬ್ಬರ ಇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 19:30 IST
Last Updated 27 ಜನವರಿ 2012, 19:30 IST
ಆಹಾರ ಹಣದುಬ್ಬರ ಇಳಿಕೆ
ಆಹಾರ ಹಣದುಬ್ಬರ ಇಳಿಕೆ   

ನವದೆಹಲಿ (ಪಿಟಿಐ): ಜನವರಿ 14ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ದರವು ಶೇ (-)1.03ರಷ್ಟಾಗಿದ್ದು, ಸತತ ನಾಲ್ಕನೇಯ ವಾರವೂ ಋಣಾತ್ಮಕ ವಲಯದಲ್ಲೇ ಮುಂದುವರೆದಿದೆ.

ಈ ಅವಧಿಯಲ್ಲಿ ಆಲೂಗಡ್ಡೆ, ಈರುಳ್ಳಿ ಸೇರಿದಂತೆ ಇತರೆ ತರಕಾರಿಗಳ ದರಗಳು ಗರಿಷ್ಠ ಇಳಿಕೆ ಕಂಡಿವೆ. ಆಹಾರ ಹಣದುಬ್ಬರ ಇನ್ನೂ ಮೂರು ನಾಲ್ಕು ತಿಂಗಳವರೆಗೆ ಋಣಾತ್ಮಕ ವಲಯದಲ್ಲೇ ಮುಂದುವರೆಯುವ ಸಾಧ್ಯತೆ ಇದ್ದು, ಇದರಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾರ್ಚ್‌ನಲ್ಲಿ ಪ್ರಕಟಿಸಲಿರುವ ಮಧ್ಯಂತರ ವಿತ್ತೀಯ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರ ಇಳಿಕೆಗೆ ಮುಂದಾಗಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಹಾರ ಹಣದುಬ್ಬರ ನಿರ್ಧರಿಸುವ ಸಗಟು ಬೆಲೆ ಸೂಚ್ಯಂಕವು (ಡಬ್ಲ್ಯುಪಿಐ), ಜನವರಿ 7ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ  ಶೇ (-)0.41ರಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು ಶೇ 17ರಷ್ಟಿತ್ತು.

ಜನವರಿ 14ಕ್ಕೆ ಕೊನೆಗೊಂಡ ವಾರದಲ್ಲಿ  ಈರುಳ್ಳಿ ಬೆಲೆ ಗರಿಷ್ಠ ಮಟ್ಟದಲ್ಲಿ ಇಳಿಕೆ ಕಂಡಿದ್ದು, ಶೇ 80ರಷ್ಟು ಅಗ್ಗವಾಗಿದೆ. ಆಲೂಗಡ್ಡೆ ಬೆಲೆ ಶೇ 22ರಷ್ಟು ಕುಸಿತ ಕಂಡಿದೆ. ಒಟ್ಟಾರೆ ತರಕಾರಿ ದರಗಳು ಶೇ 47ರಷ್ಟು ಇಳಿಕೆಯಾಗಿದ್ದು, ಗೋಧಿ ದರವೂ ಶೇ 3ರಷ್ಟು ಅಗ್ಗವಾಗಿದೆ.

`ಆರ್‌ಬಿಐ~ ಜನವರಿ 24ರಂದು ಪ್ರಕಟಿಸಿದ ಮೂರನೇಯ ತ್ರೈಮಾಸಿಕದ ಹಣಕಾಸು ಪರಾಮರ್ಶೆಯಲ್ಲಿ ಬ್ಯಾಂಕುಗಳ ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್) ಶೇ 0.5 ರಷ್ಟು ತಗ್ಗಿಸಿದೆ.  ಇದರಿಂದ ಮಾರುಕಟ್ಟೆಗೆ ಹೆಚ್ಚುವರಿ ್ಙ32 ಸಾವಿರ ಕೋಟಿಗಳಷ್ಟು ಬಂಡವಾಳ ಹರಿದು ಬಂದಿದೆ.  ಆಹಾರ ಹಣದುಬ್ಬರ ಋಣಾತ್ಮಕ ವಲಯದಲ್ಲೇ ಮುಂದುವರೆದರೆ, ಮುಂದಿನ ಹಣಕಾಸು ಪರಾಮರ್ಶೆಯಲ್ಲಿ ರೆಪೊ ದರ ಇಳಿಕೆಗೂ `ಆರ್‌ಬಿಐ~ ಮುಂದಾಗಬಹುದು ಎಂದು `ಕ್ರಿಸಿಲ್~ನ   ಹಿರಿಯ ಆರ್ಥಿಕ ತಜ್ಞ ಡಿ.ಕೆ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.