ADVERTISEMENT

ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆ ಶೀಘ್ರ

ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 19:30 IST
Last Updated 3 ಏಪ್ರಿಲ್ 2018, 19:30 IST

ಮಂಗಳೂರು: ‘ಪ್ರಯಾಣಿಕರ ಅನುಕೂಲಕ್ಕಾಗಿ ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು’ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ. ರಾವ್ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ‘ಚೆನ್ನೈ ಸೇರಿದಂತೆ ಐದು ವಿಮಾನ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಆ್ಯಪ್ ಆಧರಿತ ಕ್ಯಾಬ್‌ ಸೇವೆಯನ್ನು ಆರಂಭಿಸಲಾಗಿದೆ. ಅಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದರಿಂದ ಎರಡನೇ ಹಂತದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲೂ ಆರಂಭಿಸಲಾಗುವುದು’ ಎಂದರು.

‘ವಿಮಾನ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಹೊಸ ನೀತಿಯನ್ನು ಅಳವಡಿಸಲಾಗುತ್ತಿದೆ. ಇದರಡಿ ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆ ಸೇರಿದಂತೆ ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಒದಗಿಸಲಾಗುವುದು.

ADVERTISEMENT

‘ದಕ್ಷಿಣ ಭಾರತದಲ್ಲಿಯೇ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಇಲ್ಲಿನ ವಿಮಾನ ನಿಲ್ದಾಣ ಪಾತ್ರವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ 30 ರಷ್ಟು ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. 2016–17 ರಲ್ಲಿ ಒಟ್ಟು 17.5 ಲಕ್ಷ ಪ್ರಯಾಣಿಕರು ಮತ್ತು  2017–18 ರಲ್ಲಿ 23.4 ಲಕ್ಷ ಪ್ರಯಾಣಿಕರು ಇಲ್ಲಿಂದ ಪ್ರಯಾಣ ಬೆಳೆಸಿದ್ದಾರೆ. ಸದ್ಯಕ್ಕೆ ನಿತ್ಯ 60ಕ್ಕಿಂತ ಹೆಚ್ಚು ವಿಮಾನಗಳು ಸಂಚರಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಇದು 80ಕ್ಕೆ ಏರಲಿದೆ.

‘ಟರ್ಮಿನಲ್ ಕಟ್ಟಡದ ವಿಸ್ತರಣೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಒಂದೂವರೆ ಪಟ್ಟು ದೊಡ್ಡದಾದ ಟರ್ಮಿನಲ್ ನಿರ್ಮಿಸಲಾಗುತ್ತಿದೆ. ಇದರಿಂದ ವಿದೇಶಗಳಿಂದ ಬರುವ ಪ್ರಯಾಣಿಕರು ಇಳಿದುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಲು ಸಾಧ್ಯವಾಗಲಿದೆ. ಮೊದಲ ಹಂತದ ಟ್ಯಾಕ್ಸಿ ಟ್ರ್ಯಾಕ್‌ ಆರಂಭವಾಗಿದ್ದು, ರನ್‌ವೇ ಸಾಮರ್ಥ್ಯ ಪ್ರತಿಗಂಟೆಗೆ 10 ವಿಮಾನದಿಂದ 14 ವಿಮಾನಗಳಿಗೆ ಹೆಚ್ಚಿದೆ. ಎರಡನೇ ಹಂತದ ಟ್ಯಾಕ್ಸಿ ಟ್ರ್ಯಾಕ್‌ ಆರಂಭವಾದಲ್ಲಿ ಇದು 17 ಕ್ಕೆ ಏರಲಿದೆ’ ಎಂದರು.

ಸ್ವಚ್ಛ ವಿಮಾನ ನಿಲ್ದಾಣದ ಗರಿ
ಸ್ವಚ್ಛ ಭಾರತ ಯೋಜನೆಯಡಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಸ್ವಚ್ಛ ವಿಮಾನ ನಿಲ್ದಾಣ ಪ್ರಶಸ್ತಿ ದೊರೆತಿದೆ ಎಂದು ವಿ.ವಿ.ರಾವ್ ತಿಳಿಸಿದರು.

15 ಲಕ್ಷದಿಂದ 50 ಲಕ್ಷ ಪ್ರಯಾಣಿಕರನ್ನು ನಿರ್ವಹಣೆ ಮಾಡುವ ವಿಮಾನ ನಿಲ್ದಾಣಗಳ ವಿಭಾಗದಲ್ಲಿ ಮಂಗಳೂರು ಪ್ರಥಮ, ಕೇರಳದ ತಿರುವನಂತಪುರ ದ್ವಿತೀಯ ಹಾಗೂ ಅಸ್ಸಾಂನ ಗುವಾಹಟಿ ವಿಮಾನ ನಿಲ್ದಾಣಕ್ಕೆ ತೃತೀಯ ಸ್ಥಾನ ಲಭಿಸಿದೆ ಎಂದರು.

**

ಆ್ಯಪ್‌ ಆಧರಿತ ಕ್ಯಾಬ್‌ ಸೇವೆಯ ರೂಪುರೇಷೆಗೆ ಸಲಹಾ ಸಮಿತಿಯನ್ನು ನೇಮಿಸಲಾಗಿದ್ದು, ಇನ್ನೊಂದು ತಿಂಗಳಲ್ಲಿ ಸೇವೆ ಆರಂಭವಾಗಲಿದೆ.
– ವಿ.ವಿ. ರಾವ್‌, ಎಂಐಎ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.