ADVERTISEMENT

ಇನ್ಫೊಸಿಸ್‌: ₨ 2,875 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 19:30 IST
Last Updated 10 ಜನವರಿ 2014, 19:30 IST

ಮೈಸೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ  ಸಂಸ್ಥೆ ಇನ್ಫೊಸಿಸ್‌ಗೆ ಎನ್‌.ಆರ್‌. ನಾರಾಯಣ­ಮೂರ್ತಿ ಮತ್ತೆ ಅಧ್ಯಕ್ಷರಾಗಿ ಬಂದ ನಂತರ ಉತ್ತಮ ಪ್ರಗತಿ ಸಾಧಿಸಿದೆ. ಮೂರನೇ ತ್ರೈಮಾಸಿಕ  ಅವಧಿಯಲ್ಲಿ ಶೇ 0.5 ರಷ್ಟು ವರಮಾನ ಗಳಿಸಿ ಒಟ್ಟು ₨ 13 ಸಾವಿರ ಕೋಟಿ ವಹಿವಾಟು ನಡೆಸಿದೆ. ಒಟ್ಟಾರೆ ಶೇ 19.4 (₨ 2,875 ಕೋಟಿ ) ಲಾಭ ಗಳಿಸಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಡಿ. ಶಿಬುಲಾಲ್‌ ತಿಳಿಸಿದರು.

ನಗರದ ಹೆಬ್ಬಾಳದ ಇನ್ಫೊಸಿಸ್‌ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅವರು ತ್ರೈಮಾಸಿಕ ವರದಿ ಪ್ರಕಟಿಸಿದರು.  ಕಂಪೆನಿಯು ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಶೇ 24.4 ರಿಂದ 24.9 ರಷ್ಟು  ವರಮಾನ ಗಳಿಸುವ ಗುರಿ ಹೊಂದಿದೆ.

ಮಾರುಕಟ್ಟೆ, ಗ್ರಾಹಕರ ಆಕರ್ಷಣೆ ನಿಟ್ಟಿನಲ್ಲಿ ಉದ್ಯಮ­ದಲ್ಲಿ ನಾಯಕತ್ವ ಬದಲಾವಣೆಗಳು ಅನಿವಾರ್ಯ.  ಈಗ ಜಾಗತಿಕ ಆರ್ಥಿಕ ಸ್ಥಿತಿಗತಿಗಳು ಸುಧಾ­ರಿ­ಸಿವೆ. ಗ್ರಾಹಕರು ಬಂಡವಾಳ ತೊಡಗಿಸಲಿ­ದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎನ್‌.ಆರ್‌. ನಾರಾಯಣ ಮೂರ್ತಿ ಮಾತನಾಡಿ, ಸಂಸ್ಥೆಯನ್ನು ಸಾಧನೆಯ ಹಾದಿ­ಯಲ್ಲಿ ಒಯ್ಯಲು  ಕಾರ್ಯಕಾರಿ ಮಂಡಳಿಗೆ ಇಬ್ಬರು ಅಧ್ಯಕ್ಷರನ್ನು ನೇಮಿಸಲಾಗಿದೆ ಎಂದು ಆಡಳಿತ ಮಂಡಳಿ ಪುನರ್ ರಚನೆಯನ್ನು ಸಮರ್ಥಿಸಿ­ಕೊಂಡರು. ಸಂಸ್ಥೆಯ ಹಿತದೃಷ್ಟಿಯಿಂದ ಕಾರ್ಯ­ಕಾರಿ ಸಮಿತಿ ವಿಸ್ತರಣೆ ಅನಿವಾರ್ಯ­ವಾಗಿತ್ತು. ಮುಂದೆ ಸಮಿತಿ ಗಾತ್ರ ಕುಗ್ಗಿಸಿದರೂ ಸಂಸ್ಥೆಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.

ಉನ್ನತ ಹುದ್ದೆಯಲ್ಲಿದ್ದ ಕೆಲವರು ಸಂಸ್ಥೆಯನ್ನು ತೊರೆದಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ಇನ್ಫೊಸಿಸ್‌ ಬಹಳಷ್ಟು ನಾಯಕರನ್ನು ಸೃಷ್ಟಿಸಿದೆ. ನಾಯಕರ ತಯಾರಿಗೆ ಸಂಸ್ಥೆಯಲ್ಲಿ‘ಇನ್ಫೊಸಿಸ್‌  ನಾಯಕತ್ವ ಅಭಿವೃದ್ಧಿ ಸಂಸ್ಥೆ’ (ಐಎಲ್‌ಡಿಐ) ಇದೆ. ಸಂಸ್ಥೆ ತೊರೆದು ಮತ್ತೊಂದು ಸಂಸ್ಥೆ ಸೇರುವುದು, ಬೇರೆ ಕ್ಷೇತ್ರದಲ್ಲಿ ಮುಂದುವರಿಯುವುದು ಇದೆಲ್ಲ ಎಲ್ಲ ಸಂಸ್ಥೆಗಳಲ್ಲಿ ಇದ್ದದ್ದೇ. ಆದರೂ, ಕೆಲವು ದಕ್ಷ ನೌಕರರು ಸಂಸ್ಥೆ ಬಿಟ್ಟಿದ್ದು ಬೇಸರ ಮೂಡಿಸಿದೆ ಎಂದು ಹೇಳಿದರು.

ಸಂಸ್ಥೆಯಲ್ಲಿ ಹಲವರಿಗೆ ಬಡ್ತಿ ನೀಡಿರುವ ಕ್ರಮವನ್ನು ಸಮರ್ಥಿಸಿಕೊಂಡ ಅವರು, ಸಮಿತಿಯಲ್ಲಿ ಬಹಳಷ್ಟು ಮಂದಿ ಈಗಾಗಲೇ 50 ವರ್ಷದ ಆಸುಪಾಸಿನಲ್ಲಿದ್ದಾರೆ. ಹೊಸ ತಂಡ ಕಟ್ಟುವ ನಿಟ್ಟಿನಲ್ಲಿ ಈ ನಿರ್ಧಾರಗಳು ಅನಿವಾರ್ಯ. ಸಂಸ್ಥೆಯ ಉನ್ನತಿಗೆ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಸಂಸ್ಥೆಯನ್ನು ನಿರೀಕ್ಷಿತ ಏಳಿಗೆಯ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರತಿನಿಮಿಷವೂ  ಶ್ರಮಿಸುತ್ತೇನೆ ಎಂದು ತಿಳಿಸಿದರು.

ಇನ್ಫೊಸಿಸ್‌ ಮುಖ್ಯಸ್ಥ ಸ್ಥಾನವನ್ನು ರೋಹನ್‌ ಮೂರ್ತಿ ಅವರು ವಹಿಸಲಿದ್ದಾರೆಯೇ ಎಂಬುದಕ್ಕೆ ಪ್ರತಿಕ್ರಿಯಿಸಿದ ನಾರಾಯಣ ಮೂರ್ತಿ, ರೋಹನ್‌ ಈಗ ಸಂಸ್ಥೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಸದ್ಯಕ್ಕೆ ಅವರು ಒಂದು ವರ್ಷದ ರಜೆ ಮೇಲೆ ಹಾರ್ವರ್ಡ್‌ನಿಂದ ಇಲ್ಲಿಗೆ ಬಂದಿದ್ದಾರೆ. ಮತ್ತೆ ಹಾರ್ವರ್ಡ್‌ಗೆ ತೆರಳುವುದಾಗಿ ಹೇಳಿದ್ದಾರೆ. ಅವರ ಭವಿಷ್ಯದ ನಿರ್ಧಾರ ಅವರಿಗೆ ಬಿಟ್ಟಿದ್ದು. ನಾನು ಒತ್ತಡ ಹೇರುವುದಿಲ್ಲ ಎಂದು ಹೇಳಿದರು.

ಇನ್ಫೊಸಿಸ್‌ ಮುಖ್ಯ ಹಣಕಾಸು ಅಧಿಕಾರಿ ರಾಜೀವ್ ಬನ್ಸಾಲ್‌, ಇತರರು ಇದ್ದರು.

ಪ್ರತಿಭಾವಂತರನ್ನು ಉಳಿಸಿಕೊಳ್ಳಲು ಯತ್ನ: ಅಕ್ಟೋಬರ್– ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯಿಂದ ನಿರ್ಗಮಿಸಿದ1,823 ಸಿಬ್ಬಂದಿಯನ್ನು ಉಳಿಸಿಕೊಳ್ಳಲು ‘ಇನ್ಫೊಸಿಸ್‌’  ಗಂಭೀರವಾಗಿ ಯತ್ನಿಸುತ್ತಿದೆ. ತ್ರೈಮಾಸಿಕ ಅವಧಿಯಲ್ಲಿ ಹೊಸದಾಗಿ 6,682 ಮಂದಿಯನ್ನು ಕೆಲಸಕ್ಕೆ ತೆಗೆದುಕೊಂಡಿ­ದ್ದರೂ ಕಂಪೆನಿಯ ಒಟ್ಟು 1,58,404 ನೌಕರರಲ್ಲಿ 1,823 ಮಂದಿ ಕಡಿಮೆ ಆಗಲಿದ್ದಾರೆ.

ಷೇರು ಮೌಲ್ಯ ಹೆಚ್ಚಳ
ಮುಂಬೈ (ಪಿಟಿಐ): ಮುಂಬೈ ಷೇರುಪೇಟೆಯ ಶುಕ್ರವಾರದ ವಹಿವಾಟಿನಲ್ಲಿ ಇನ್ಫೊಸಿಸ್‌ನ ಷೇರು ಬೆಲೆ ಶೇ 3ರಷ್ಟು ಏರಿಕೆ ದಾಖಲಿಸಿತು.

ಮೂರನೇ ತ್ರೈಮಾಸಿಕದ ಹಣಕಾಸು ಸಾಧನೆ ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿದ್ದ ಕಾರಣ, ಷೇರು ಬೆಲೆಯೂ ಶೇ 2.84ರಷ್ಟು ಏರಿಕೆ ಕಂಡು, ₨3,548.9ಕ್ಕೆ ಅಂತ್ಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT