ADVERTISEMENT

ಇನ್ಫೊಸಿಸ್ ಲಾಭ ರೂ 2,289 ಕೋಟಿ

1ನೇ ತ್ರೈಮಾಸಿಕ ಪ್ರಗತಿ ಶೇ 3.7

​ಪ್ರಜಾವಾಣಿ ವಾರ್ತೆ
Published 12 ಜುಲೈ 2013, 19:59 IST
Last Updated 12 ಜುಲೈ 2013, 19:59 IST

ಬೆಂಗಳೂರು(ಪಿಟಿಐ): ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಕಂಪೆನಿಗಳಲ್ಲೊಂದಾದ `ಇನ್ಫೊಸಿಸ್', ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ಅವಧಿಯ ಕ್ರೋಡೀಕೃತ ನಿವ್ವಳ ಲಾಭದಲ್ಲಿ ಶೇ 3.7ರಷ್ಟು ಅಲ್ಪ ಪ್ರಗತಿ ದಾಖಲಿಸಿದೆ. ಉದ್ಯಮ ವಲಯದ ನಿರೀಕ್ಷೆಗೆ ತಕ್ಕಂತೆಯೇ ಫಲಿತಾಂಶ ನೀಡಿದೆ.

2013-14ನೇ ಹಣಕಾಸು ವರ್ಷದ  ಮೊದಲ ತ್ರೈಮಾಸಿಕದಲ್ಲಿರೂ2,374 ಕೋಟಿ ಕ್ರೋಡೀಕೃತ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿರೂ2,289 ಕೋಟಿ ಲಾಭವಾಗಿತ್ತು.

ಇನ್ಫೊಸಿಸ್2012-13ನೇ ಹಣಕಾಸು ವರ್ಷದ ಕೊನೆಯ(ಜನವರಿ-ಮಾರ್ಚ್) ತ್ರೈಮಾಸಿಕದಲ್ಲಿ ಸಾಧಾರಣ ಮಟ್ಟದ ಸಾಧನೆ ತೋರಿತ್ತು. ಕಂಪೆನಿಯ ಸಂಸ್ಥಾಪಕರಲ್ಲೊಬ್ಬರಾದ ಎನ್.ಆರ್.ನಾರಾಯಣ ಮೂರ್ತಿ ತಿಂಗಳ ಹಿಂದೆ ಇನ್ಫೊಸಿಸ್‌ಗೆ ಮರಳಿದ ನಂತರದ ಮೊದಲ ತ್ರೈಮಾಸಿಕ ಫಲಿತಾಂಶ ಉತ್ತಮ ನಿರೀಕ್ಷೆ ಹುಟ್ಟುಹಾಕಿದೆ.

ದೇಶದ ಮೇಲ್ಮಟ್ಟದ ಆರ್ಥಿಕ ವ್ಯವಸ್ಥೆಯಲ್ಲಿ ಆಸ್ಥಿರತೆ ಮುಂದುವರಿದಿದೆ, ರೂಪಾಯಿ ಮೌಲ್ಯ  ಭಾರಿ ಕುಸಿತ ಕಂಡಿದೆ. ಇಂಥ ಸನ್ನಿವೇಶದಲ್ಲಿಯೂ ಕಂಪೆನಿ ಮೊದಲ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ಮಾಡಿದೆ. ಮುಂದಿನ ಅವಧಿಯೂ ಆಶಾದಾಯಕವಾಗಿದೆ ಎಂದು ಇನ್ಫೊಸಿಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಡಿ.ಶಿಬುಲಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿದೇಶಿ ವಿನಿಮಯ ಮೌಲ್ಯದಲ್ಲಿನ ಭಾರಿ ಏರಿಳಿತದಿಂದಾಗಿ ಮೊದಲನೇ ತ್ರೈಮಾಸಿಕದಲ್ಲಿ ಕಂಪೆನಿಗೆ 13.40 ಕೋಟಿ ಅಮೆರಿಕನ್ ಡಾಲರ್(ಈಗಿನ ಲೆಕ್ಕದಲ್ಲಿ ಅಂದಾಜುರೂ793) ಆದಾಯ ನಷ್ಟವಾಗಿದೆ ಎಂದರು. ಏಪ್ರಿಲ-ಜೂನ್ ಅವಧಿಯಲ್ಲಿ ಹೊಸದಾಗಿ 66 ಗ್ರಾಹಕ ಕಂಪೆನಿಗಳು ದೊರಕಿವೆ. ಅತಿದೊಡ್ಡ ಗ್ರಾಹಕ ಕಂಪೆನಿ ಲೆಕ್ಕದಲ್ಲಿ ಶೇ 11ರಷ್ಟು ಹೆಚ್ಚಳವಾಗಿದೆ ಎಂದು ವಿವರಿಸಿದರು.

ಷೇರು ಮೌಲ್ಯ ಹೆಚ್ಚಳ
ಇದೇ ವೇಳೆ, ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದಲ್ಲಿನ ಶುಕ್ರವಾರದ ವಹಿವಾಟಿನಲ್ಲಿ ಇನ್ಫೊಸಿಸ್ ಷೇರುಗಳು ಶೇ 11ರಷ್ಟು ಮೌಲ್ಯ ಹೆಚ್ಚಿಸಿಕೊಂಡವು. ನಿರೀಕ್ಷೆಗೆ ತಕ್ಕಂತಹ ಫಲಿತಾಂಶದ ಫಲಶ್ರುತಿ ಎಂಬಂತೆ ಕಂಪೆನಿಯ ಷೇರುಗಳುರೂ2,905ಕ್ಕೇರಿ(ಕಳೆದ ಮೂರು ತಿಂಗಳ ಗರಿಷ್ಠ ಮಟ್ಟ) ಕೊನೆಗೆರೂ2,802.75ರಲ್ಲಿ ದಿನದಂತ್ಯ ಕಂಡವು. ಇನ್ಫೊಸಿಸ್ ಷೇರುಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯರೂ15,849 ಕೋಟಿಗೆ ಏರಿಕೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.