ADVERTISEMENT

ಇರಾನ್ ಕಚ್ಚಾ ತೈಲ ಬಿಕ್ಕಟ್ಟು ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 17:15 IST
Last Updated 3 ಫೆಬ್ರುವರಿ 2011, 17:15 IST


ನವದೆಹಲಿ (ಪಿಟಿಐ): ಇರಾನ್‌ನಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಹಣ ಪಾವತಿಗೆ ಸಂಬಂಧಿಸಿದ  ಅನಿಶ್ಚಿತತೆ ಈಗ ಕೊನೆಗೊಂಡಿದೆ.

ಹ್ಯಾಂಬರ್ಗ್ ಮೂಲದ ಜರ್ಮನಿಯ  ಬ್ಯಾಂಕ್ ಮೂಲಕ ‘ಯೂರೊ’ ರೂಪದಲ್ಲಿ ಹಣ ಪಾವತಿಸಲು ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಕೃತ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವ ಶಂಕರ್ ಮೆನನ್ ನೇತೃತ್ವದಲ್ಲಿ ಗುರುವಾರ ಇಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಆರ್ಥಿಕ ವ್ಯವಹಾರ ಕಾರ್ಯದರ್ಶಿ ಆರ್. ಗೋಪಾಲನ್, ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಮತ್ತು ತೈಲ ಕಾರ್ಯದರ್ಶಿ ಎಸ್. ಸುಂದರೇಷನ್ ಭಾಗವಹಿಸಿದ್ದರು.

ಇದುವರೆಗೆ ಪಾವತಿ ತಡೆ ಹಿಡಿದಿರುವ 2 ಶತಕೋಟಿ ಡಾಲರ್‌ಗಳನ್ನು (ರೂ 9,200 ಕೋಟಿ) ತಕ್ಷಣದಿಂದಲೇ ಪಾವತಿಗೆ ಕ್ರಮ ಕೈಗೊಳ್ಳಲು ಭಾರತೀಯ ಸ್ಟೇಟ್ ಬ್ಯಾಂಕ್‌ಗೆ (ಎಸ್‌ಬಿಐ) ಸೂಚಿಸಲಾಗಿದೆ.

ಇರಾನಿನ ರಾಷ್ಟ್ರೀಯ ತೈಲ ಸಂಸ್ಥೆಯ ಹ್ಯಾಂಬರ್ಗ್ ಮೂಲದ ‘ಇಐಎಚ್ ಬ್ಯಾಂಕ್’ ಮೂಲಕ ಎಸ್‌ಬಿಐ  ‘ಯೂರೊ’ಗಳನ್ನು ಪಾವತಿ ಮಾಡಲಿದೆ. ಸೆಪ್ಟೆಂಬರ್ ತಿಂಗಳಿನಿಂದೀಚೆಗೆ 2 ಶತಕೋಟಿ ಡಾಲರ್‌ಗಳ ಮರು ಪಾವತಿ ಬಾಕಿ ಉಳಿದಿದ್ದರೆ, ಡಿಸೆಂಬರ್ 23ರಿಂದ 1.3 ಶತಕೋಟಿ ಡಾಲರ್ ಮರು ಪಾವತಿಯಾಗಿಲ್ಲ.

9 ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ದೀರ್ಘಕಾಲದಿಂದ ನಿರ್ವಹಿಸುತ್ತ ಬಂದಿದ್ದ ಹಣ ಮರು ಪಾವತಿ ವ್ಯವಸ್ಥೆಗೆ  ‘ಆರ್‌ಬಿಐ’ ಅನುಮತಿ ನಿರಾಕರಿಸಿದ್ದರಿಂದ ಬಿಕ್ಕಟ್ಟು ಉದ್ಭವಿಸಿತ್ತು.

ಭಾರತ ಪ್ರತಿ ತಿಂಗಳು 12 ದಶಲಕ್ಷ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಆರ್‌ಬಿಐ ನಿರ್ಬಂಧದ ಹೊರತಾಗಿಯೂ ಇರಾನ್ ಸಾಲದ ಆಧಾರದ ಮೇಲೆ ಕಚ್ಚಾ ತೈಲವನ್ನು ನಿರಂತರವಾಗಿ ಪೂರೈಕೆ ಮಾಡುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.