ADVERTISEMENT

ಇ-ವಾಣಿಜ್ಯ ವಲಯ ಗರಿಷ್ಠ ನೇಮಕ: ಜವಳಿ ಉದ್ಯಮ ನಿರುದ್ಯೋಗ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 27 ಮೇ 2012, 19:30 IST
Last Updated 27 ಮೇ 2012, 19:30 IST

ನವದೆಹಲಿ(ಪಿಟಿಐ): ಇದು ಉದ್ಯೋಗಾವಕಾಶ ಮತ್ತು ನಿರುದ್ಯೋಗ ಹೆಚ್ಚಳದ ವೈರುಧ್ಯದ  ಸುದ್ದಿ. ಆಧುನಿಕ ತಂತ್ರಜ್ಞಾನ ಆಧರಿಸಿದ ಉದ್ಯಮ ಕ್ಷೇತ್ರದಲ್ಲಿ ಗರಿಷ್ಠ ನೇಮಕದ ಆಶಾಕಿರಣ ಮೂಡುತ್ತಿದ್ದರೆ, ಇನ್ನೊಂದೆಡೆ ಸಾಂಪ್ರದಾಯಿಕ ದುಡಿಮೆಯ ಕ್ಷೇತ್ರಗಳಲ್ಲಿ ನೌಕರಿಗಳ ಸಂಖ್ಯೆಯೇ ಕಡಿಮೆ ಆಗುತ್ತಿದೆ.

ದೇಶದ ಇ-ವಾಣಿಜ್ಯ ವಲಯದಲ್ಲಿ ಪ್ರಸಕ್ತ ವರ್ಷ ಗರಿಷ್ಠ ಉದ್ಯೋಗ ನೇಮಕಾತಿ ನಡೆಯಲಿವೆ ಎಂದು `ಹೋಮ್ ಶಾಪ್18 ಡಾಟ್‌ಕಾಂ~ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂದೀಪ್ ಮಲ್ಹೋತ್ರಾ ಹೇಳಿದ್ದಾರೆ.

ಆನ್‌ಲೈನ್ ಚಿಲ್ಲರೆ ವಹಿವಾಟು ವಲಯ ದೇಶೀಯ ಉದ್ಯೋಗ ಮಾರುಕಟ್ಟೆ ಚಿತ್ರಣವನ್ನೇ ಬದಲಿಸುವ ಸಾಧ್ಯತೆ ಇದೆ. ಆನ್‌ಲೈನ್ ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವುದರ ಜತೆಗೇ ಆನ್‌ಲೈನ್ ಸರಕು ವಹಿವಾಟು ಕೂಡ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ  ಹೆಚ್ಚಿನ ಮಾನವ ಸಂಪನ್ಮೂಲದ ಅಗತ್ಯವಿದೆ ಎಂದು `ಫ್ಯಾಷನ್ ಅಂಡ್ ಯು~ ಡಾಟ್ ಕಾಂನ `ಸಿಇಒ~ ಪರ್ಲ್ ಉಪ್ಪಾಲ್ ವಿಶ್ಲೇಷಿಸಿದ್ದಾರೆ.  `ಸ್ಯಾನ್‌ಡೀಲ್ ಡಾಟ್ ಕಾಂ~ ಪ್ರಸಕ್ತ ವರ್ಷ ತನ್ನ ಸಿಬ್ಬಂದಿಗಳ ಒಟ್ಟು ಸಂಖ್ಯೆಯನ್ನು 1,500ಕ್ಕೆ ಹೆಚ್ಚಿಸುವುದಾಗಿ ಹೇಳಿದೆ.

ಇಂಟರ್‌ನೆಟ್ ಬಳಕೆ ಮತ್ತು ಬ್ರಾಡ್‌ಬ್ಯಾಂಡ್ ವಿಸ್ತರಣೆಯಿಂದ ದೇಶದ ಆನ್‌ಲೈನ್ ಚಿಲ್ಲರೆ ವಹಿವಾಟು ಕ್ಷೇತ್ರವು ಈಗಿನ ರೂ.2 ಸಾವಿರ ಕೋಟಿಯಿಂದ 2015ರ ವೇಳೆಗೆ ರೂ.7 ಸಾವಿರ ಕೋಟಿ ತಲುಪಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ಸಮೀಕ್ಷೆ ಹೇಳಿದೆ.

ಇನ್ನೊಂದೆಡೆ ಜಾಗತಿಕ ಆರ್ಥಿಕ ಅಸ್ಥಿರತೆಯಿಂದಾಗಿ ಕಳೆದ ಎರಡು ವರ್ಷಗಳಲ್ಲಿ ದೇಶದ ಜವಳಿ ಉದ್ಯಮದಲ್ಲಿ 45 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಜವಳಿ ರಫ್ತು ಉತ್ತೇಜನ ಮಂಡಳಿ ಮಂಗಳವಾರ ಹೇಳಿದೆ.

ಸದ್ಯ ದೇಶದ ಜವಳಿ ಉದ್ಯಮದಲ್ಲಿ  4.5 ಕೋಟಿ ಉದ್ಯೋಗಿಗಳಿದ್ದಾರೆ. ಇವರಲ್ಲಿ ಇನ್ನಷ್ಟು ಮಂದಿ ಕೆಲಸ ಕಳೆದುಕೊಳ್ಳುವ ಭೀತಿಯಲ್ದ್ದ್‌ದು, ಸರ್ಕಾರ ಕೂಡಲೇ ಉದ್ಯಮದ ನೆರವಿಗೆ ಧಾವಿಸಬೇಕು ಎಂದು ರಫ್ತು ಮಂಡಳಿ ಅಧ್ಯಕ್ಷ ಎ.ಶಕ್ತಿವೇಲ್ ಆಗ್ರಹಿಸಿದ್ದಾರೆ.

ದೇಶದಿಂದ ಶೇ 65ರಷ್ಟು ಜವಳಿ ಸರಕು ಯೂರೋಪ್, ಅಮೆರಿಕ ಮಾರುಕಟ್ಟೆಗೆ ರಫ್ತಾಗುತ್ತವೆ. ಆದರೆ, ಆರ್ಥಿಕ ಅಸ್ಥಿರತೆಯಿಂದ ಈ ಮಾರುಕಟ್ಟೆಗಳಿಂದ ಬೇಡಿಕೆ ಕುಸಿದಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.