ADVERTISEMENT

ಈರುಳ್ಳಿ ಕಣ್ಣೀರ ಕಥೆ

ಶ್ರೀಕಾಂತ ಕಲ್ಲಮ್ಮನವರ
Published 21 ಡಿಸೆಂಬರ್ 2010, 9:55 IST
Last Updated 21 ಡಿಸೆಂಬರ್ 2010, 9:55 IST

ಯಾರ ಊಹೆಗೂ ನಿಲುಕದಂತೆ ಈರುಳ್ಳಿ ಬೆಲೆ ದಿನೇ ದಿನೇ ಏರಿಕೆ ಕಾಣುತ್ತಿದೆ. ಹದಿನೈದು ದಿನಗಳ ಹಿಂದೆ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ  ರೂ 30ರಿಂದ ರೂ 40 ಇದ್ದದ್ದು, ಕಳೆದ ವಾರ ರೂ 60 ರಿಂದ ರೂ 80ಗೆ ತಲುಪಿದೆ. ಮುಂಬರುವ ದಿನಗಳಲ್ಲಿ ದಾಖಲೆಯ ಬೆಲೆ ಮೂರಂಕಿಗೆ ತಲುಪಿದರೂ ಅಚ್ಚರಿ ಪಡಬೇಕಾಗಿಲ್ಲ. 

ಈ ಸ್ಥಿತಿ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ನೆರೆಯ ರಾಜ್ಯಗಳಲ್ಲೂ ಕಂಡುಬಂದಿದೆ. ಕಳೆದ ನವೆಂಬರ್ ತಿಂಗಳಲ್ಲಿ ದಕ್ಷಿಣ ಭಾರತದೆಲ್ಲೆಡೆ ಸುರಿದ ಭಾರಿ ಮಳೆಯೇ ಇದಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈರುಳ್ಳಿಯನ್ನು ಅಪಾರ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮವಾಗಿ ಜಮೀನಿನಲ್ಲಿಯೇ ಬಹಳಷ್ಟು ಈರುಳ್ಳಿ ಫಸಲು ಕೊಳೆತುಹೋಯಿತು. ಹೀಗಾಗಿ ಮಾರುಕಟ್ಟೆಗೆ ಬರುವ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ.

ಪೂರೈಕೆ ಕಡಿಮೆಯಾದಾಗ ಹಾಗೂ ಬೇಡಿಕೆ ಹೆಚ್ಚಾದಾಗ ಸಹಜವಾಗಿ ಆ ವಸ್ತುವಿನ ಬೆಲೆ ಹೆಚ್ಚಾಗುತ್ತದೆ. ಈರುಳ್ಳಿ ವಿಷಯದಲ್ಲೂ ಇದೇ ಆಗಿದೆ. ದಿನ ದಿನಕ್ಕೆ ಬೆಲೆ ಹೆಚ್ಚುತ್ತಾ ಹೋಗಿದ್ದು, ಒಂದು ತಿಂಗಳಲ್ಲಿ ಈರುಳ್ಳಿ ಬೆಲೆ ನಾಲ್ಕು ಪಟ್ಟು ಹೆಚ್ಚಾಗಿದೆ. ಗೃಹಿಣಿಯರು ಈರುಳ್ಳಿಯನ್ನು ಹೆರಚುವುದಕ್ಕಿಂತ ಮೊದಲೇ ಖರೀದಿಗೂ ಕಣ್ಣೀರು ಸುರಿಸುವ ಸ್ಥಿತಿ ಬಂದಿದೆ.

ಬೆಂಗಳೂರಿನ ಮಾರುಕಟ್ಟೆಗೆ ಬರುವ ಈರುಳ್ಳಿ ಪ್ರಮಾಣ ತುಂಬಾ ಕಡಿಮೆಯಾಗಿದೆ. ಸಾಮಾನ್ಯವಾಗಿ ದಿನವೊಂದಕ್ಕೆ 150 ಟ್ರಕ್‌ಗಳಷ್ಟು ಈರುಳ್ಳಿ ಬರುತ್ತಿತ್ತು. ಆದರೆ, ಈಗ 20ರಿಂದ 30 ಟ್ರಕ್‌ಗಳಷ್ಟು ಬಂದರೆ ಅದೇ ದೊಡ್ಡದು ಎನ್ನುವಂತಹ ಪರಿಸ್ಥಿತಿ ಇದೆ.ಇಂತಹ ಸಂದರ್ಭಗಳಲ್ಲಿ ಹರಾಜಿನಲ್ಲಿ ಬೆಲೆ ಎದ್ವಾತದ್ವಾ ಏರಿಕೆಯಾಗುತ್ತದೆ. ಇದರ ಪರಿಣಾಮವಾಗಿ 50 ಕೆ.ಜಿ ಮೂಟೆಗೆ ರೂ 3,000 ಬೆಲೆ ಕಂಡುಬಂದಿದೆ.

ಈ ಲೆಕ್ಕ ನೋಡಿದರೆ ಸಗಟು ಮಾರುಕಟ್ಟೆಯಲ್ಲಿಯೇ ಒಂದು ಕೆ.ಜಿ ಈರುಳ್ಳಿ ಬೆಲೆ ್ಙ 60ಗೆ ತಲುಪಿದಂತಾಗಿದೆ.ಇಲ್ಲಿಂದ ದಲ್ಲಾಳಿಗಳು, ಸಗಟು ವ್ಯಾಪಾರಸ್ಥರು ಹಾಗೂ ಚಿಲ್ಲರೆ ವ್ಯಾಪಾರಸ್ಥರ ಬಳಿಗೆ ಹೋಗುವ ವೇಳೆಗೆ ಬೆಲೆ ಕನಿಷ್ಠವೆಂದರೂ ರೂ 80 ತಲುಪುತ್ತದೆ. ಅಂದರೆ ರೈತರಿಂದ ಈರುಳ್ಳಿ ಗ್ರಾಹಕರ ಕೈಗೆ ಸೇರುವ ವೇಳೆಗೆ ಅದರ ಬೆಲೆ ಶೇ 30ರಿಂದ 40ರಷ್ಟು ಹೆಚ್ಚಾಗಿರುತ್ತದೆ.

ಈರುಳ್ಳಿಯ ಗಾತ್ರದ ಮೇಲೆ ಅದರ ಬೆಲೆ ನಿಗದಿಯಾಗುತ್ತದೆ. ಸಣ್ಣ ಗಾತ್ರದ ಈರುಳ್ಳಿ ಮೂಟೆಗೆ (50 ಕೆ.ಜಿ) ರೂ 1200-ರೂ 1400.ಮಧ್ಯಮ ಗಾತ್ರದ ಈರುಳ್ಳಿ ಮೂಟೆಗೆ ರೂ 2000-2200 ಹಾಗೂ ದೊಡ್ಡ ಗಾತ್ರದ ಈರುಳ್ಳಿ ಮೂಟೆಗೆ ರೂ 3000-3200 ಬೆಲೆ ಇದೆ.ದಲ್ಲಾಳಿ ಕಮಿಷನ್, ಎಪಿಎಂಸಿ ಕಮಿಷನ್, ಆಳುಗಳ ವೆಚ್ಚ, ಸಾರಿಗೆ ವೆಚ್ಚವನ್ನು ಸೇರಿಸಿದರೆ ರೈತರಿಗೆ ನೀಡಿದ ಬೆಲೆಗಿಂತ ಶೇ 30ರಷ್ಟು ಹೆಚ್ಚಿನ ದರಕ್ಕೆ ಗ್ರಾಹಕ ಪೇಟೆಯಲ್ಲಿ ಕೊಳ್ಳುತ್ತಾನೆ.

ನಷ್ಟ ಸರಿದೂಗಿಸಿದ ಅಳಿದುಳಿದ ಈರುಳ್ಳಿ
ಮಳೆಯ ಹೊಡೆತಕ್ಕೆ ಸಿಲುಕಿ ಅಪಾರ ಪ್ರಮಾಣದಲ್ಲಿ ಈರುಳ್ಳಿ ನಾಶವಾಗಿದ್ದರೂ, ಅಷ್ಟೋ, ಇಷ್ಟೋ ಉಳಿದ ಈರುಳ್ಳಿ ರೈತರಿಗೆ ಬಂಪರ್ ಬೆಲೆ ತಂದುಕೊಟ್ಟಿದೆ. ಒಂದು ತಿಂಗಳ ಹಿಂದೆ ರೂ 1500ಗೆ ಮಾರಾಟವಾಗುತ್ತಿದ್ದ ಈರುಳ್ಳಿ ಮೂಟೆ ಈಗ ರೂ 3000 ಆಸುಪಾಸು ಮಾರಾಟವಾಗುತ್ತಿದೆ. ಒಂದೇ ತಿಂಗಳ ಅವಧಿಯಲ್ಲಿ ಎರಡು ಪಟ್ಟು ಬೆಲೆ ಹೆಚ್ಚಾಗಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಬೆಲೆ ಹೆಚ್ಚಾಗಬಹುದು ಎಂದು ಕೆಲವು ರೈತರು ಹಾಗೂ ವ್ಯಾಪಾರಸ್ಥರು ಈರುಳ್ಳಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. (ಈರುಳ್ಳಿಯನ್ನು ಒಣಗಿಸಿದರೆ 15-20ದಿನಗಳವರೆಗೂ ಇಟ್ಟುಕೊಳ್ಳಬಹುದಾಗಿದೆ). ಕಡಿಮೆ ಪ್ರಮಾಣದಲ್ಲಿ ಈರುಳ್ಳಿಯನ್ನು ಪೂರೈಸಿ, ಬೆಲೆ ಹೆಚ್ಚಾಗುವಂತೆ ಮಾಡಲಾಗುತ್ತಿದೆ ಎಂದೂ ಹೇಳುವವರಿದ್ದಾರೆ.

ಸದ್ಯಕ್ಕೆ ಗದಗ, ಹುಬ್ಬಳ್ಳಿ, ವಿಜಾಪುರ ಜಿಲ್ಲೆಗಳಿಂದ ಈರುಳ್ಳಿ ಬೆಂಗಳೂರಿಗೆ ಬರುತ್ತದೆ. ಮುಂದಿನ ದಿನಗಳಲ್ಲಿ ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಈರುಳ್ಳಿ ಬರುವ ಲಕ್ಷಣವಿದೆ.  ದೇಶದಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆಯಲಾಗುವ ನೆರೆಯ ಮಹಾರಾಷ್ಟ್ರದಲ್ಲೂ ಇದೇ ಸ್ಥಿತಿ ಇದೆ. ಅಕಾಲಿಕ ಮಳೆಯಿಂದಾಗಿ ಅಲ್ಲಿನ ಈರುಳ್ಳಿ ಫಸಲು ಹಾನಿಗೀಡಾಗಿದೆ. ಸಾಮಾನ್ಯವಾಗಿ ಪುಣೆ, ನಾಸಿಕ ಹಾಗೂ ಇತರ ದಕ್ಷಿಣ ಜಿಲ್ಲೆಗಳಿಂದಲೂ ರಾಜ್ಯಕ್ಕೆ ಈರುಳ್ಳಿ ಆವಕವಾಗುತ್ತಿತ್ತು. ಆದರೆ, ಈ ಬಾರಿ ಅಲ್ಲಿಯ ಫಸಲು ಕೂಡ ಹಾನಿಯಾಗಿರುವುದರಿಂದ ರಾಜ್ಯಕ್ಕೆ ಆವಕವಾಗಿಲ್ಲ.

ಉತ್ಪಾದನೆ ಕುಸಿತ
ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಒಟ್ಟಾರೆಯಾಗಿ ಈರುಳ್ಳಿಯ ಉತ್ಪಾದನೆ ಕಡಿಮೆಯಾಗಿದೆ. ಕಳೆದ ವರ್ಷ 1.35 ಕೋಟಿ ಟನ್‌ಗಳಷ್ಟು ಈರುಳ್ಳಿ ಉತ್ಪಾದನೆಯಾಗಿತ್ತು. ಆದರೆ, ಈ ವರ್ಷ ಕೇವಲ 1.21 ಕೋಟಿ ಟನ್‌ಗಳಷ್ಟು ಉತ್ಪಾದನೆಯಾಗಿದೆ. ಬೆಲೆ ಏರಿಕೆಗೆ ಇದು ಸಹ ಕಾರಣವಾಗಿದೆ.

ರಾಜ್ಯಸಭೆಯಲ್ಲೂ ಚರ್ಚೆ
ದೇಶದ ಹಲವು ಭಾಗಗಳಲ್ಲಿ ಈರುಳ್ಳಿ ಹಾಗೂ ತರಕಾರಿಗಳ ಬೆಲೆಗಳು ಗಗನಕ್ಕೇರಿರುವ ವಿಷಯ ರಾಜ್ಯಸಭೆಯಲ್ಲೂ ಚರ್ಚೆಯಾಗಿದೆ.
‘ಅಕಾಲಿಕ ಮಳೆಯಿಂದಾಗಿ ಗುಜರಾತ್, ಮಧ್ಯ ಪ್ರದೇಶ, ರಾಜಸ್ತಾನ ಹಾಗೂ ಮಹಾರಾಷ್ಟ್ರದಲ್ಲಿ ಈರುಳ್ಳಿ ಉತ್ಪಾದನೆ ಕುಸಿತವಾಗಿದೆ’ ಎಂದು ಕೃಷಿ ರಾಜ್ಯ ಸಚಿವ ಕೆ.ವಿ. ಥಾಮಸ್ ಉತ್ತರಿಸಿರುವುದು ಪರಿಸ್ಥಿತಿಯ ಗಂಭೀರತೆಗೆ ಹಿಡಿದ ಕೈಗನ್ನಡಿಯಾಗಿದೆ.

ಜನವರಿ ವೇಳೆಗೆ ಸುಧಾರಣೆ
‘ವಿವಿಧ ಪ್ರದೇಶಗಳಲ್ಲಿ ವಿವಿಧ ಅವಧಿಯಲ್ಲಿ ಈರುಳ್ಳಿಯನ್ನು ಬೆಳೆಯಲಾಗುತ್ತದೆ. ಮಹಾರಾಷ್ಟ್ರದ ನಾಸಿಕ ಹಾಗೂ ಇತರೆಡೆ ಬೆಳೆಯಲಾಗುವ ಈರುಳ್ಳಿ ಜನವರಿ ತಿಂಗಳ ಎರಡನೇ ವಾರದ ವೇಳೆಗೆ ಮಾರುಕಟ್ಟೆಗೆ ಬರುವ ಲಕ್ಷಣವಿದೆ. ಹೊಸ ಫಸಲು ಬಂದರೆ ಆಗ ಬೆಲೆ ನಿಯಂತ್ರಣಕ್ಕೆ ಬರುತ್ತದೆ’ ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ಚಿಕ್ಕಣ್ಣ ತಿಳಿಸಿದ್ದಾರೆ.

ರಫ್ತಿಗೂ ಸಂಚಕಾರ
ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಈ ದರದಲ್ಲಿ ವಿದೇಶಗಳಿಗೆ ರಫ್ತು ಮಾಡುವುದು ಕಷ್ಟ ಎಂದು ಈರುಳ್ಳಿ ರಫ್ತುದಾರರೊಬ್ಬರು ಹೇಳಿದರು.ಮಲೇಷ್ಯಾ, ಬಾಂಗ್ಲಾದೇಶ ಹಾಗೂ ಇತರ ರಾಷ್ಟ್ರಗಳಿಗೆ ರಾಜ್ಯದಿಂದ ಈರುಳ್ಳಿಯನ್ನು ರಫ್ತು ಮಾಡಲಾಗುತ್ತಿತ್ತು.

ವಿವಿಧ ಜಿಲ್ಲೆಗಳಲ್ಲಿ ದರ
(ಪ್ರತಿ ಕೆ.ಜಿ.ಗೆ ರೂ ಗಳಲ್ಲಿ)
ಬೆಂಗಳೂರು      70-80
ಗುಲ್ಬರ್ಗ            50
ಯಾದಗಿರಿ         40
ವಿಜಾಪುರ          40
ಗದಗ                60
ಹುಬ್ಬಳಿ             50
ಚಿತ್ರದುರ್ಗ        40


 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.