ADVERTISEMENT

ಈರುಳ್ಳಿ ಧಾರಣೆ ತೀವ್ರ ಕುಸಿತ

ಬೆಳೆಗಾರರ ಸಂಕಷ್ಟ; ಖರೀದಿ ಕೇಂದ್ರ ಆರಂಭಿಸಲು ಆಗ್ರಹ

ಡಿ.ಬಿ, ನಾಗರಾಜ
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST
ಉಪ್ಪಲದಿನ್ನಿಯ ಹೊಲವೊಂದರಲ್ಲಿ ರಾಶಿ ಹಾಕಿದ ಉಳ್ಳಾಗಡ್ಡಿ
ಉಪ್ಪಲದಿನ್ನಿಯ ಹೊಲವೊಂದರಲ್ಲಿ ರಾಶಿ ಹಾಕಿದ ಉಳ್ಳಾಗಡ್ಡಿ   

ವಿಜಯಪುರ: ಉಳ್ಳಾಗಡ್ಡಿ ರಾಶಿ ಮಾಡಿ, ಮಾರುಕಟ್ಟೆಗೆ ತರುತ್ತಿರುವ ಹೊತ್ತಿಗೆ ಬೆಲೆ ಕುಸಿದಿದೆ. ಕನಿಷ್ಠ ದರ ಸಿಗುತ್ತಿರುವುದರಿಂದ ಬೆಳೆಗಾರರು ದಿಕ್ಕುತೋಚದಂತಾಗಿದ್ದಾರೆ. ಮೂರು ತಿಂಗಳ ಹಿಂದೆ ಒಂದು ಕ್ವಿಂಟಲ್‌ಗೆ ₹ 4,000ದ ಆಸುಪಾಸು ಇದ್ದ ಧಾರಣೆ, ಇದೀಗ ₹ 500ರಿಂದ ₹600ಕ್ಕೆ ಕುಸಿದಿದೆ.

ಹಲವು ಕಷ್ಟ, ತಾಪತ್ರಯಗಳ ನಡುವೆಯೂ ಬೇಸಿಗೆಯಲ್ಲಿ ಉಳ್ಳಾಗಡ್ಡಿ ಬೆಳೆದ ರೈತರು, ಒಳ್ಳೆಯ ಧಾರಣೆಗೆ ಮಾರಾಟ ಮಾಡಿ ಬಂಪರ್‌ ಲಾಭ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಕುಸಿದ ಬೆಲೆಯು ಗಾಯದ ಮೇಲೆ ಬರೆ ಹಾಕಿದಂತಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಅವರಿಗೆ ಕೂಲಿ ಕಾರ್ಮಿಕರನ್ನು ಸಂಭಾಳಿಸುವುದೇ ಕಷ್ಟವಾಗಿದೆ.

ಕೂಲಿ ಹುಟ್ತಿಲ್ಲ..!: ‘ಈಗಿನ್‌ ರೇಟ್‌ ನೋಡಿದ್ರ ಕೂಲಿ ಖರ್ಚೂ ಹುಟ್ಟೋ ಹಂಗ ಕಾಣೋದಿಲ್ಲ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಬಬಲೇಶ್ವರ ತಾಲ್ಲೂಕಿನ ಉಪ್ಪಲದಿನ್ನಿಯ ರೈತ ಸೋಮನಾಥ ಬಿರಾದಾರ.

ADVERTISEMENT

‘10 ಕ್ವಿಂಟಲ್‌ ಉಳ್ಳಾಗಡ್ಡಿ ಕಿತ್ತು, ಸ್ವಚ್ಛಗೊಳಿಸಿ ಮಾರಾಟಕ್ಕೆ ಅಣಿ ಗೊಳಿಸಲು ಬಿರಾದಾರ ಅವರು 12 ಮಂದಿ ಕಾರ್ಮಿಕರನ್ನು ಗೊತ್ತುಮಾಡಿದ್ದರು. ಕೂಲಿಯ ಖರ್ಚೇ ₹ 3,500 ಆಗಿದೆ.

‘ಇದನ್ನು ಮಾರುಕಟ್ಟೆಗೆ ಸಾಗಿಸುವ ವಾಹನದ ಬಾಡಿಗೆ ವೆಚ್ಚ ₹ 1000. ಮಾರಾಟದಿಂದ ಸಿಕ್ಕಿದ್ದು ₹ 6000 ಮಾತ್ರ. ಇದರಲ್ಲಿ ಕೂಲಿ ಹಾಗೂ ಸಾಗಾಟ ವೆಚ್ಚ ಕಳೆದರೆ, ಉಳಿದದ್ದು ₹ 1500.  ‘ಬೀಜದ ಖರ್ಚು, ಬಿತ್ತನೆ, ಕಳೆ ಕಿತ್ತ ಆಳಿನ ಪಗಾರ, ಗೊಬ್ಬರದ ಬಾಬ್ತು ಇದ್ಯಾವುದೂ ಇನ್ನೂ ಕೈ ಸೇರಿಲ್ಲ’ ಎಂದು ಅವರು ಅಲವತ್ತುಕೊಂಡರು.

ಬೇಸಿಗೆಯಲ್ಲಿ ಒಳ್ಳೆಯ ದರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ 15 ಎಕರೆಯಲ್ಲಿ ಉಳ್ಳಾಗಡ್ಡಿ ಬೆಳೆದಿರುವ ಅವರು, ಎಕರೆಗೆ ₹ 35, 000ದಿಂದ ₹ 40,000 ಖರ್ಚು ಮಾಡಿದ್ದಾಗಿ ಹೇಳುತ್ತಾರೆ.

ಒಟ್ಟು ಖರ್ಚೇ ₹ 6 ಲಕ್ಷದ ಆಸುಪಾಸಿನಲ್ಲಿದೆ. ಖರ್ಚು ಮಾಡಿದ್ದಕ್ಕೆ ಸಮೃದ್ಧ ಬೆಳೆ ಬಂದಿರುವ ಸಮಾಧಾನ ಇದೆಯಾದರೂ ದರ ಕುಸಿತ ಅವರನ್ನು ಕಂಗಾಲು ಮಾಡಿದೆ.

‘ಕಡೇಪಕ್ಷ, ಕ್ವಿಂಟಲ್‌ಗೆ ಸಾವಿರ ರೂಪಾಯಿ ಸಿಕ್ಕರೂ 150 ಟನ್‌ಗೆ ₹ 15 ಲಕ್ಷವಾದರೂ ಸಿಗತೈತಿ. ಆದ್ರ ಈಗಿನ್ ರೇಟ್‌ ಕೇಳಿದ್ರ ಹೆದ್ರಿಕಿ ಆಕ್ಕೇತಿ’ ಎನ್ನುತ್ತಾರೆ ಬಿರಾದಾರ.

ಇನ್ನು, ಬಸವನಬಾಗೇವಾಡಿ ತಾಲ್ಲೂಕಿನ ಕಾನ್ನಾಳ ಗ್ರಾಮದ ಶಿವಪ್ಪ ಹೂಗಾರ ಅವರು, ಶನಿವಾರವಷ್ಟೇ 110 ಕ್ವಿಂಟಲ್‌ ಉಳ್ಳಾಗಡ್ಡಿಯನ್ನು ಬೆಳಗಾವಿಯಲ್ಲಿ ಮಾರಿ ಬಂದಿದ್ದಾರೆ. ಅಲ್ಲಿಯ ಮಾರುಕಟ್ಟೆಯಲ್ಲಿ ₹ 200ರಿಂದ ₹ 800ರವರೆಗೆ ಧಾರಣೆ ಇದ್ದು, ಅವರ ಉತ್ಪನ್ನಕ್ಕೆ ಪ್ರತಿ ಕ್ವಿಂಟಲ್‌ಗೆ ₹ 500 ಸಿಕ್ಕಿದೆ. 120 ಕ್ವಿಂಟಲ್‌ನಷ್ಟು ಫಸಲು ಇನ್ನೂ ಹೊಲದಲ್ಲಿದ್ದು, ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಅದನ್ನು ಕೊಯ್ಲು ಮಾಡದೇ ಕಾದಿದ್ದಾರೆ.

‘ಚಲೋ ಧಾರಣಿ ಸಿಕ್ಕೀತು ಅನ್ನೋದೆಲ್ಲ ಸುಳ್ಳಾದಂಗಾತ್ರಿ. ಖರ್ಚೂ ಗಿಟ್ಟಂಗಿಲ್ಲ ಅನ್ನೋಹಂಗ ಆಗೇತಿ. ಹಿಂಗಾದ್ರ ಜೀವ್ನಾ ಮಾಡೋದ್‌ ಹೆಂಗ್? ಹೊಲಗಿಲಾ ಬಿಟ್ಟು, ಗುಳೇ ಹೋಗೋದ.. ಪಾಡ್‌ ಅನಸಾಕತ್ತೈತಿ’ ಎಂದು ಉಪ್ಪಲದಿನ್ನಿಯ ಹಿರೇಕುರುಬರ ಬೇಸರ ವ್ಯಕ್ತಪಡಿಸಿದರು.

ಖರೀದಿ ಕೇಂದ್ರ ಆರಂಭಿಸಿ
ಉಳ್ಳಾಗಡ್ಡಿ ರಾಶಿ ನಡೆದಿದೆ. ರೈತರು ಉತ್ಪನ್ನವನ್ನು ಕಾಪಿಟ್ಟುಕೊಳ್ಳಲು ಕಷ್ಟವಿದೆ. ಅಕಾಲಿಕ ಮಳೆ ಸುರಿದರೆ ಎಲ್ಲವೂ ಕೊಳೆತು ಹೋಗುತ್ತದೆ. ಕಾಪಿಟ್ಟರೆ ಕೆಡುವ ಜತೆಗೆ ತೂಕವೂ ಕಡಿಮೆಯಾಗುತ್ತದೆ. ರಾಜ್ಯ ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಿ, ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ ಮೂಲಕ ತಕ್ಷಣದಿಂದಲೇ ಖರೀದಿಸಬೇಕು ಎಂದು ಕೂಡಗಿಯ ಗ್ಯಾನಪ್ಪ ದೇಸಾಯಿ, ಸಿದ್ದಪ್ಪ ಮಿಣಜಗಿ ಒತ್ತಾಯಿಸಿದ್ದಾರೆ.

‘ವಾರದೊಳಗೆ ಖರೀದಿ ಕೇಂದ್ರ ಆರಂಭಿಸದಿದ್ದರೆ ಬೆಳೆಗಾರರಿಗೆ ಪ್ರಯೋಜನವಾಗದು. ಯಥಾಪ್ರಕಾರ ವ್ಯಾಪಾರಿಗಳಿಗೇ ಅನುಕೂಲವಾಗಲಿದೆ’ ಎಂದು ಹೇಳುತ್ತಾರೆ ಅವರು.

*
ವಿಜಯಪುರ, ದಾವಣಗೆರೆ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಬೇಸಿಗೆ ಬೆಳೆಯಾಗಿ ಈರುಳ್ಳಿ ಬೆಳೆಯಲಾಗಿದ್ದು, ಬೆಲೆ ಕುಸಿದಿದೆ.
–ಎಸ್‌.ಆರ್‌.ಕುಮಾರಸ್ವಾಮಿ, ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.