ADVERTISEMENT

ಉದ್ಯೋಗ ನೇಮಕ ಕುಸಿತ

ತಯಾರಿಕಾ ಕ್ಷೇತ್ರ ಕಳಪೆ ಸಾಧನೆ: ಕೃಷ್ಣನ್‌ ಕಳವಳ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 19:30 IST
Last Updated 7 ಜನವರಿ 2014, 19:30 IST

ಬೆಂಗಳೂರು: ದೇಶದ ತಯಾರಿಕಾ ಉದ್ಯಮ ಕ್ಷೇತ್ರವು ಕಳೆದ ಎರಡು ವರ್ಷ ಗಳಿಂದಲೂ ಹಿನ್ನಡೆ ಕಂಡಿರುವುದರ ಪರಿಣಾಮ ಕಳೆದ ವರ್ಷ ಉದ್ಯೋಗ ನೇಮಕ ಪ್ರಕ್ರಿಯೆಗೆ ದೊಡ್ಡ ಪೆಟ್ಟು ಬಿದ್ದಿತು. 2013-14ರಲ್ಲಿ ನೂತನ ಸಿಬ್ಬಂದಿ ನೇಮಕ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ‘ಭಾರತೀಯ ಯಂತ್ರೋಪಕರಣ ತಯಾರಕರುಗಳ ಸಂಘ’ದ (ಐಎಂಟಿಎಂಎ) ಅಧ್ಯಕ್ಷ ಎಲ್‌.ಕೃಷ್ಣನ್‌ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಜ. 23ರಿಂದ 28ರವರೆಗೆ ನಡೆಯಲಿರುವ ‘ಐಎಂಟೆಕ್ಸ್‌ ಫಾರ್ಮಿಂಗ್‌ 2014’ ಯಂತ್ರೋಪ ಕರಣ ವಸ್ತು ಪ್ರದರ್ಶನ ಕುರಿತು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಯಂತ್ರೋಪಕರಣಗಳ ತಯಾರಿಕೆ ಉದ್ಯಮ ವಿಭಾಗದಲ್ಲಂತೂ ಕಳೆದ 12 ತಿಂಗಳುಗಳಿಂದ ಪ್ರಗತಿ ಎಂಬುದೇ ಕಾಣ ದಾಗಿದೆ. ಹಾಗಾಗಿ ಪ್ರಧಾನ ಸರಕುಗಳ ಕ್ಷೇತ್ರದಲ್ಲಿ ಹೂಡಿಕೆ ವಿಚಾರ ಹಿನ್ನಡೆ ಕಂಡಿದೆ ಎಂದು ಗಮನ ಸೆಳೆದರು.

ಲೋಹದ ವಸ್ತುಗಳ ತಯಾರಿಕೆ ಕ್ಷೇತ್ರ ದಲ್ಲಿ ಸದ್ಯ ‘ಮೆಟಲ್‌ ಫಾರ್ಮಿಂಗ್‌’ (ಲೋಹಾಕೃತಿ ನೇರ ರಚನೆ) ವಿಭಾಗದ ಉದ್ಯಮಗಳು ಹೆಚ್ಚಿನ ಬೆಳವಣಿಗೆ ತೋರುತ್ತಿವೆ. ಮೆಟಲ್‌ ಕಟಿಂಗ್‌ (ಲೋಹಗಳನ್ನು ಕತ್ತರಿಸಿ ಜೋಡಿಸುವ) ಉದ್ಯಮದ ವಹಿವಾಟು ಜೋರಾಗಿಯೇ ಇದ್ದರೂ (₨3320 ಕೋಟಿ), ಇತ್ತೀಚಿನ ದಿನಗಳಲ್ಲಿ ಮೆಟಲ್‌ ಫಾರ್ಮಿಂಗ್‌ ವಿಭಾಗವೂ(₨565 ಕೋಟಿ) ಚುರುಕು ಗೊಂಡಿದೆ. ಒಟ್ಟು ಲೋಹ ರಚನೆ ಉದ್ಯ ಮದಲ್ಲಿ ಮೆಟಲ್‌ ಕಟಿಂಗ್‌ನದ್ದು ಶೇ 85ರ ಪಾಲಿದ್ದರೆ, ಮೆಟಲ್‌ ಫಾರ್ಮಿಂಗ್‌ ವಿಭಾಗ ನಿಧಾನ ಗತಿಯಲ್ಲಿ ಶೇ 15ರವರೆಗೂ ವಿಸ್ತರಣೆ ಕಂಡಿದೆ. ಮುಂಬರುವ ದಿನಗಳಲ್ಲಿ ಮೆಟಲ್‌ ಫಾರ್ಮಿಂಗ್‌ ವಿಭಾಗ ಶೇ 20ರವರೆಗೂ ಪ್ರಗತಿ ಕಾಣುವ ನಿರೀಕ್ಷೆ ಇದೆ ಎಂದರು.

23ರಿಂದ ‘ಐಎಂಟೆಕ್ಸ್‌’
ಹಾಗಾಗಿಯೇ ಈ ಬಾರಿ  ‘ಐಎಂಟೆಕ್ಸ್‌ ಫಾರ್ಮಿಂಗ್‌ 2014’ ವಸ್ತು ಪ್ರದರ್ಶನ ದಲ್ಲಿ ಮೆಟಲ್‌ ಫಾರ್ಮಿಂಗ್ ವಿಚಾರ ವನ್ನೇ ಕೇಂದ್ರೀಕರಿಸಲಾಗಿದೆ ಎಂದರು.

ತುಮಕೂರು ರಸ್ತೆಯಲ್ಲಿನ ಅಂತರ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ದಲ್ಲಿ ಆಯೋಜಿಸಲಾಗಿರುವ ಯಂತ್ರೋ ಪಕರಣ ವಸ್ತು ಪ್ರದರ್ಶನದಲ್ಲಿ ಈ ಬಾರಿ ಆಸ್ಟ್ರೇಲಿಯಾ, ಬೆಲ್ಜಿಯಂ, ಚೀನಾ, ಫ್ರಾನ್ಸ್‌ ಸೇರಿದಂತೆ 25 ದೇಶಗಳ 419 ಕಂಪೆನಿ ಪಾಲ್ಗೊಳ್ಳುತ್ತಿವೆ.   ಮುಖ್ಯ ಮಂತ್ರಿ ಸಿದ್ದರಾಮಯ್ಯ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ ಎಂದು ‘ಐಎಂಟಿ ಎಂಎ’ ಮಾಧ್ಯಮ ವಿಭಾಗ ಅಧ್ಯಕ್ಷ ಶೈಲೇಶ್‌ ಸೇತ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.