ADVERTISEMENT

ಎಂಡೋಸಲ್ಫಾನ್ ನಿಷೇಧಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 16:20 IST
Last Updated 4 ಫೆಬ್ರುವರಿ 2011, 16:20 IST

ಬೆಂಗಳೂರು:  ‘ಅಹಮದಾಬಾದ್ ಮೂಲದ ರಾಷ್ಟ್ರೀಯ ವೃತ್ತಿ ಆರೋಗ್ಯ ಸಂಸ್ಥೆ (ಎನ್‌ಐಒಎಚ್) ದೇಶದಲ್ಲಿ ಎಂಡೋಸಲ್ಫಾನ್ ನಿಷೇಧಿಸುವಂತೆ ಪ್ರಕಟಿಸಿರುವ ವರದಿ ಅವೈಜ್ಞಾನಿಕವಾಗಿದ್ದು, ಕೀಟನಾಶಕದ ನಿಷೇಧಿಸುವುದು ಬೇಡ’ ಎಂದು ಭಾರತೀಯ ಕೀಟನಾಶಕ ತಯಾರಿಕರ ಒಕ್ಕೂಟ (ಪಿಎಂಎಫ್‌ಎಐ)  ಆಗ್ರಹಿಸಿದೆ.

ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದಲ್ಲಿ ಸಮೀಕ್ಷೆ ನಡೆಸಿ, ‘ಎನ್‌ಐಒಎಚ್’ ಎಂಡೋಸಲ್ಫಾನ್ ನಿಷೇಧಿಸುವಂತೆ ವರದಿ ಸಲ್ಲಿಸಿದೆ. ಈ  ಪ್ರದೇಶಗಳಲ್ಲಿ  ಕಾಣಿಸಿಕೊಂಡಿರುವುದು ವಂಶವಾಹಿ ಸಮಸ್ಯೆ. ಎಂಡೋಸಲ್ಫಾನ್ ಬಳಕೆಯಿಂದ   ಪ್ರಾಣಹಾನಿ ಅಥವಾ ಇತರೆ ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳು  ಉಂಟಾಗಿಲ್ಲ. ಇದು ಅವೈಜ್ಞಾನಿಕ ವರದಿ ಎಂದು ‘ಪಿಎಂಎಫ್‌ಎಐ’ ಅಧ್ಯಕ್ಷ  ಪ್ರದೀಪ್ ದವೆ ಶುಕ್ರವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಹೇಳಿದರು.

ಯೂರೋಪಿಯನ್ ಒಕ್ಕೂಟ ‘ಎಂಡೋಸಲ್ಫಾನ್ ನಿಷೇಧಿಸಿರುವುದರ ಹಿಂದೆ ವ್ಯವಹಾರದ ಲಾಬಿ ಅಡಗಿದೆ.  ಜಾಗತಿಕ ಉತ್ಪಾದನೆಯ ಶೇಕಡ   80 ರಷ್ಟು ಮಾರುಕಟ್ಟೆ ಪಾಲನ್ನು ಭಾರತ ಹೊಂದಿದ್ದು, ಎಂಡೋಸಲ್ಪಾನ್ ನಿಷೇಧದಿಂದ ದೇಶೀಯ ಕಂಪೆನಿಗಳಿಗೆ, ಉದ್ಯೋಗಿಗಳಿಗೆ, ರೈತರಿಗೆ ಅನ್ಯಾಯವಾಗಲಿದೆ ಎಂದು ‘ಭಾರತೀಯ ಬೆಳೆ ರಕ್ಷಣೆ ಒಕ್ಕೂಟ’ದ ನಿರ್ದೇಶಕ ಅನಿಲ್ ಕಾಕರ್ ಹೇಳಿದರು.  ರಾಷ್ಟ್ರೀಯ ಕೃಷಿ ವಿಜ್ಞಾನ ಸಂಸ್ಥಯ ಗೌರವ ಸದಸ್ಯ ಎಸ್.ಕೆ. ಹಂಡಾ, ನ್ಯೂಯಾರ್ಕ್ ಮೂಲದ ಇಂಟರ್‌ನ್ಯಾಷನಲ್ ಸ್ಟೆವರ್ಡ್‌ಷಿಪ್ ಸೆಂಟರ್‌ನ ಕಾರ್ಯಕಾರಿ ನಿರ್ದೇಶಕ ಚಾರ್ಲ್ಸ್ ಹಾನ್ಸನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.