ADVERTISEMENT

ಎಫ್‌ಟಿಎ: ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಅಥವಾ ಇನ್ನಿತರ ಯಾವುದೇ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳು ದೇಶೀಯ ತಯಾರಿಕೆ ರಂಗದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಮುಕ್ತ ಮತ್ತು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದಿಂದ ದೇಶೀಯ ತಯಾರಿಕೆ ರಂಗದ ಮೇಲೆ ತೀವ್ರ ಪರಿಣಾಮ ಬೀಳಲಿದೆ ಎನ್ನುವ ಆರೋಪಗಳನ್ನು ಸರ್ಕಾರ ಅಲ್ಲಗಳೆದಿದೆ. ಹೊಸ ರಾಷ್ಟ್ರೀಯ ತಯಾರಿಕೆ ನೀತಿ (ಎಂಎನ್‌ಪಿ) ಅನ್ವಯ ಈ ರೀತಿಯ ಪ್ರತಿಕೂಲ ಪರಿಣಾಮಗಳು ಆಗದಂತೆ ಎಚ್ಚರಿಕೆ ವಹಿಸಲಾಗುತ್ತಿದ್ದು, ಯಾವುದೇ ಅಪಾಯ ಇಲ್ಲ ಎಂದೂ ಹೇಳಿದೆ.

ರಾಷ್ಟ್ರೀಯ ತಯಾರಿಕೆ ನೀತಿಗೆ (ಎನ್‌ಎಂಪಿ) ಅಕ್ಟೋಬರ್ 25ರಂದು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ನೀತಿಯು, ದೇಶದ ತಯಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಬಲ ತುಂಬಲಿದ್ದು, ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ವಾಣಿಜ್ಯ ಸಚಿವಾಲಯ ಅಧೀನದಲ್ಲಿರುವ ಕೈಗಾರಿಕೆ ನೀತಿ ಮತ್ತು ಉತ್ತೇಜನ ಮಂಡಳಿ (ಡಿಐಪಿಪಿ) ಹೇಳಿದೆ.

ಆಗ್ನೇಯ ಏಷ್ಯಾ ದೇಶಗಳ ಸಹಭಾಗಿತ್ವದಲ್ಲಿ ದೇಶದಲ್ಲಿ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಜಾರಿಯಾಗುತ್ತಿದೆ. ಇದರ ನಂತರ ಇಂತಹದೇ ಒಪ್ಪಂದವನ್ನು ಯೂರೋಪ್ ಒಕ್ಕೂಟದ 27 ರಾಷ್ಟ್ರಗಳ ಜತೆ  ಮಾಡಿಕೊಳ್ಳಲು ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಅಂತಿಮ ಸುತ್ತಿನ ಮಾತುಕತೆ ನಡೆಸುತ್ತಿವೆ.

ಈ ಪ್ರಸ್ತಾವಿತ `ಎಫ್‌ಟಿಎ~ ಒಪ್ಪಂದದಡಿ ವಾಹನಗಳ ಬಿಡಿಭಾಗಗಳು ಮತ್ತು ಇತರೆ ತಯಾರಿಕೆ ಉತ್ಪನ್ನಗಳನ್ನು ತೆರಿಗೆ ಮುಕ್ತವಾಗಿ ದೇಶೀಯ ಮಾರುಕಟ್ಟೆಗೆ ಬಿಡಲು ಯೂರೋಪ್ ಭಾರತದ ಮೇಲೆ ಒತ್ತಡ ಹೇರುತ್ತಿದೆ.ದೇಶದಲ್ಲಿ ತಯಾರಿಕೆ ಕೇಂದ್ರಗಳನ್ನು ಪ್ರಾರಂಭಿಸಿರುವ ಕೆಲವು ಬಹುರಾಷ್ಟ್ರೀಯ ಕಂಪೆನಿಗಳು ಯೂರೋಪ್ ದೇಶಗಳ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು,ಇದರಿಂದ ದೇಶೀಯ ತಯಾರಿಕೆ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆರೋಪಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.