ADVERTISEMENT

ಐಟಿ ಉದ್ಯಮದ ಬೆಳವಣಿಗೆಗೆ ಬದ್ಧ: ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 19:30 IST
Last Updated 4 ಜನವರಿ 2014, 19:30 IST
ಐಟಿ ಉದ್ಯಮದ ಬೆಳವಣಿಗೆಗೆ ಬದ್ಧ: ಪ್ರಧಾನಿ
ಐಟಿ ಉದ್ಯಮದ ಬೆಳವಣಿಗೆಗೆ ಬದ್ಧ: ಪ್ರಧಾನಿ   

ತಿರುವನಂತಪುರ (ಪಿಟಿಐ): ‘ದೇಶದ ಮಾಹಿತಿ ತಂತ್ರಜ್ಞಾನದ (ಐಟಿ) ಬೆಳವಣಿಗೆಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಈ ಕ್ಷೇತ್ರದ ಅಭಿವೃದ್ಧಿಗೆ ಪ್ರೋತ್ಸಾಹ­ ದಾಯಕ ವಾತಾ­ವರಣ ಸೃಷ್ಟಿಸಲಿದೆ’ ಎಂದು ಪ್ರಧಾನಮಂತ್ರಿ ಡಾ.  ಮನಮೋಹನ್‌ ಸಿಂಗ್ ಶನಿವಾರ ಹೇಳಿದರು.

ಕೇರಳದ ತಿರುವನಂತಪುರದಲ್ಲಿ ‘ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ (ಟಿಸಿಎಸ್‌) ಗ್ಲೋಬಲ್‌ ಲರ್ನಿಂಗ್ ಸೆಂಟರ್‌’ಗೆ (ಜಾಗತಿಕ ಕಲಿಕಾ ಕೇಂದ್ರ) ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಐಟಿ ಕ್ಷೇತ್ರದ ಬೆಳವಣಿಗೆಗಾಗಿ ‘ರಂಗಾಚಾರಿ ವರದಿ’ ಅನ್ವಯ ಹಲವು ಸೇವಾ ತೆರಿಗೆ  ವಿಷಯಗಳನ್ನು ಚರ್ಚಿಸಲಾಗಿದೆ. ಅಲ್ಲದೆ, ವಲಸೆ ಮತ್ತು ವೀಸಾ ಕುರಿತು ಹೊರಡಿಸಲಾಗಿರುವ ಸುತ್ತೋಲೆ ಸಂಬಂಧ ಉದ್ಭವವಾಗಿರುವ ಸಮಸ್ಯೆಗಳ ನಿವಾರಣೆಯಲ್ಲಿ ಸರ್ಕಾರ ತೊಡಗಿದೆ’ ಎಂದು ಅವರು ಹೇಳಿದರು.
‘ಐಟಿ ಕ್ಷೇತ್ರದ ಕೌಶಲ್ಯ ವೃದ್ಧಿಗಾಗಿ ಸರ್ಕಾರ ಅತ್ಯಂತ ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಕೆಲ ಹೆಜ್ಜೆಗಳನ್ನು ಇರಿಸಿದ್ದು, ಖಾಸಗಿ ಕ್ಷೇತ್ರವನ್ನೂ ಒಗ್ಗೂಡಿಸಿಕೊಂಡು ತನ್ನ ಗುರಿ ಸಾಧನೆಗಾಗಿ ಶ್ರಮಿಸುತ್ತಿದೆ’ ಎಂದರು.

‘ಟಿಸಿಎಸ್‌’ ಸಾಧನೆ ಬಗ್ಗೆ ಮೆಚ್ಚುಗೆ
‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾಗಿ ತನ್ನದೇ ಆದ ಛಾಪು ಮೂಡಿಸಿರುವ ‘ಟಿಸಿಎಸ್‌’, ದೇಶದ ಯಶಸ್ವಿ ಖಾಸಗಿ ಉದ್ಯಮಗಳಿಗೆ ಮಾದರಿ’ ಎಂದು ಪ್ರಧಾನಿ ಶ್ಲಾಘಿಸಿದರು.

‘ಜಾಗತಿಕ ಮಟ್ಟದಲ್ಲಿ ಐಟಿ ಸೇವೆ ಒದಗಿಸುತ್ತಿರುವ ಮೊದಲ ಹತ್ತು ಕಂಪೆನಿಗಳ ಪೈಕಿ ‘ಟಿಸಿಎಸ್‌’ ಮೊದಲ ಸ್ಥಾನದಲ್ಲಿದೆ. ಅಲ್ಲದೆ, ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದಲ್ಲೇ ಎರಡನೆಯ ಕಂಪೆನಿ ಎಂಬ ಹೆಗ್ಗಳಿಕೆ ಹೊಂದಿದೆ’ ಎಂದು ಅವರು ಕೊಂಡಾಡಿದರು.

ಐಟಿ ಸೇವೆ, ಬಿಸಿನೆಸ್‌ ಸಲ್ಯೂಷನ್ಸ್‌ ಹಾಗೂ ಕನ್ಸಲ್ಟೆನ್ಸಿ ಕ್ಷೇತ್ರದ ಪ್ರಮುಖ ಕಂಪೆನಿಯಾದ ಇದು ಸುಮಾರು 40 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ವಿಶ್ವದ ಅತಿ ದೊಡ್ಡ ಕಲಿಕಾ ಕೇಂದ್ರ
‘ಟಿಸಿಎಸ್‌’ ಸ್ಥಾಪಿಸಲು ಉದ್ದೇಶಿಸಿರುವ ‘ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ (ಟಿಸಿಎಸ್‌) ಗ್ಲೋಬಲ್‌ ಲರ್ನಿಂಗ್ ಸೆಂಟರ್‌’ (ಜಾಗತಿಕ ಕಲಿಕಾ ಕೇಂದ್ರ) ವಿಶ್ವದಲ್ಲೇ ಅತಿ ದೊಡ್ಡ ಕಲಿಕಾ ಕೇಂದ್ರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

‘97 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಈ ಕೇಂದ್ರದಲ್ಲಿ, ಏಕಕಾಲಕ್ಕೆ 15 ಸಾವಿರ ಮಂದಿಗೆ ವೃತ್ತಿ ಕೌಶಲ ತರಬೇತಿ ನೀಡಬಹುದಾಗಿದ್ದು, ಈ ಯೋಜನೆಯಿಂದ ಸುಮಾರು 2 ಸಾವಿರ ಮಂದಿಗೆ ಉದ್ಯೋಗ ದೊರೆಯಲಿದೆ’ ಎನ್ನುತ್ತಾರೆ ‘ಟಿಸಿಎಸ್‌’ ಮುಖ್ಯ ಕಾರ್ಯನಿರ್ವಹಣಾ­ಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಎನ್‌. ಚಂದ್ರಶೇಖರನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.