ADVERTISEMENT

ಒಂದು ಈಗಲ್ ಯಶಸ್ಸಿನ ಕತೆ!

ಪ್ರಜಾವಾಣಿ ಚಿತ್ರ
Published 16 ಅಕ್ಟೋಬರ್ 2012, 19:30 IST
Last Updated 16 ಅಕ್ಟೋಬರ್ 2012, 19:30 IST
ಒಂದು ಈಗಲ್ ಯಶಸ್ಸಿನ ಕತೆ!
ಒಂದು ಈಗಲ್ ಯಶಸ್ಸಿನ ಕತೆ!   

ಎಲ್ಲ ಸಮಸ್ಯೆಗಳಿಗೂ ಬೆವರೇ ಪರಿಹಾರ ಎನ್ನುವ ಮಾತು ಇದೆ. ಅಂತಹ ಮಾತನ್ನು ನೂರಕ್ಕೆ ನೂರರಷ್ಟು ನಿಜವಾಗಿಸಿದ ವ್ಯಕ್ತಿಯ ಕತೆ ಇದು. ಹಳ್ಳಿ ಹೈದನೊಬ್ಬ ಯಾವುದೇ ಅನುಭವ ಇಲ್ಲದೆ ಪಟ್ಟಣಕ್ಕೆ ಬಂದು ಈಗ ಇಡೀ ನಗರವೇ ಬೆರಗಾಗುವಂತೆ ಬೆಳೆದು ನಿಂತ ಕತೆಯೂ ಹೌದು. ದುಡಿಮೆಯನ್ನು ನಂಬಿ ಬದುಕಿದರೆ ದೈವ ಕೂಡ ಕೈ ಬಿಡುವುದಿಲ್ಲ ಎಂದು ನಿರೂಪಿಸಿದವನ ಕತೆ ಕೂಡ ಹೌದು.

1995ರಲ್ಲಿ ಜೇಬಿನಲ್ಲಿ 50 ರೂಪಾಯಿ ಇಟ್ಟುಕೊಂಡು ತಲೆ ತುಂಬ ಕನಸಿನ ಗೋಜಲನ್ನು ತುಂಬಿಕೊಂಡು ಮೈಸೂರು ನಗರಕ್ಕೆ ಬಂದ ಪ್ರಶಾಂತ್ ಜೈನ್ ಈಗ ಒಬ್ಬ ಯಶಸ್ವಿ ಉದ್ಯಮಿ. ಮೈಸೂರಿಗೆ ಬರುವಾಗ ಯಾವ ಕೆಲಸ ಮಾಡಬೇಕು ಎನ್ನುವ ಗುರಿ ಇರಲಿಲ್ಲ. ಒಟ್ಟಿನಲ್ಲಿ ದುಡಿಯ ಬೇಕು, ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಬೇಕು ಎನ್ನುವ ಛಲ ಮಾತ್ರ ಇತ್ತು.

ಈಗ ಪ್ರಶಾಂತ್ ಜೈನ್ ತನ್ನ ಕಾಲ ಮೇಲೆ ತಾನು ನಿಂತಿದ್ದೇ ಅಲ್ಲದೆ ಇತರ 80ಕ್ಕೂ ಹೆಚ್ಚು ಮಂದಿಗೆ ನೇರ ಉದ್ಯೋಗ ನೀಡಿದ್ದಾರೆ. ಅಲ್ಲದೆ ಇನ್ನೂ ನೂರಾರು ಮಂದಿ ಅವರ ದುಡಿಮೆಯ ಫಲದಿಂದಾಗಿಯೇ ತಮ್ಮ ಬದುಕಿನ ಬಂಡಿಯನ್ನೂ ಎಳೆಯ ತೊಡಗಿದ್ದಾರೆ.
ಪ್ರಶಾಂತ್ ಜೈನ್ ಹಾಸನದ ಬಳಿಯ ಚಿಕ್ಕ ಹಳ್ಳಿಯವರು.
 
ಇವರ ತಂದೆ ಕೃಷಿಕ. ಇವರಿಗೆ ಇಬ್ಬರು ಹಿರಿಯ ಸಹೋದರರು ಹಾಗೂ ಒಬ್ಬಳು ಅಕ್ಕ ಇದ್ದಾರೆ. ಎಲ್ಲರಿಗಿಂತ ಕಿರಿಯರಾಗಿದ್ದ ಪ್ರಶಾಂತ್ ತಂದೆ ನಂಬಿಕೊಂಡಿದ್ದ ಕೃಷಿ ಭೂಮಿಯಲ್ಲಿಯೇ ವ್ಯವಸಾಯ ಮಾಡಿಕೊಂಡು ಉಳಿದಿದ್ದರೆ ಈಗ ಯಶಸ್ಸಿನ ಜೀವನ ಸಾಧ್ಯವಿರಲಿಲ್ಲ. ಹಾಗಂತ ಅವರು ಕೃಷಿಯನ್ನು ಬಿಡಲಿಲ್ಲ.

“ನಮಗೆ ಭೂಮಿ ಇತ್ತು ನಿಜ. ಆದರೆ ಅದು ಒಂದು ಕುಟುಂಬಕ್ಕೆ ಮಾತ್ರ ಸಾಕಿತ್ತು. ಮೂವರು ಸಹೋದರರಲ್ಲಿ ಇಬ್ಬರು ಮನೆಯಿಂದ ಹೊರಕ್ಕೆ ಹೋಗಿ ಜೀವನ ಕಟ್ಟಿಕೊಳ್ಳುವುದು ಅನಿವಾರ್ಯವಾಗಿತ್ತು. ಹಾಸನದಲ್ಲಿ ಬಿಎಸ್‌ಸಿ ಪದವಿ ಪಡೆದ ನಂತರ ಮುಂದೆ ಓದುವ ಆಸಕ್ತಿ ಇದ್ದರೂ ಅಪ್ಪ ಕೈಯಲ್ಲಿ 50 ರೂಪಾಯಿ ಇಟ್ಟು ಎಲ್ಲಿಯಾದರೂ ಉದ್ಯೋಗ ಅರಸಿಕೋ ಎಂದು ಹೇಳಿದರು.
 
ಅದರಂತೆ ನಾನು ಮೈಸೂರಿಗೆ ಬಂದು ಸೇರಿದೆ~ ಎಂದು ಪ್ರಶಾಂತ್ ಜೈನ್ ನೆನಪಿಸಿಕೊಳ್ಳುತ್ತಾರೆ. ಹೀಗೆಯೇ ಅವರ ನೆನಪಿನ ಪಯಣ ಸಾಗುತ್ತದೆ.
ಮೈಸೂರಿಗೆ ಬಂದಾಗ ಇಲ್ಲಿ ಯಾರ ಮನೆಯಲ್ಲಿ ಉಳಿಯಬೇಕು ಎನ್ನುವುದೂ ಗೊತ್ತಿರಲಿಲ್ಲ. ಸ್ನೇಹಿತನೊಬ್ಬನ ಸ್ನೇಹಿತನ ಸಂಬಂಧಿ ಮನೆಯಲ್ಲಿ ಉಳಿದೆ.
 
ಯಾವ ಕೆಲಸ ಮಾಡಬೇಕು ಎನ್ನುವುದರ ಬಗ್ಗೆ ಕೂಡ ಸ್ಪಷ್ಟ ಕಲ್ಪನೆ ಇರಲಿಲ್ಲ. ಓದುವಾಗ ಕೂಡ ಇಂತಹದ್ದನ್ನೇ ಓದು ಎಂದು ಯಾರೂ ಹೇಳಿರಲಿಲ್ಲ. ಎಸ್‌ಎಸ್‌ಎಲ್‌ಸಿ ಆದ ನಂತರ ಪಿಯುಸಿ, ಪಿಯುಸಿ ಆದ ನಂತರ ಪದವಿ ಎಂದು ಬಿಎಸ್‌ಸಿ ಪದವಿ ಮುಗಿಸಿಕೊಂಡಿದ್ದೆ ಅಷ್ಟೆ. ಊರಿನಲ್ಲಿದ್ದಾಗ ನಮ್ಮ ಭೂಮಿಯಲ್ಲಿ ಕಬ್ಬು, ಆಲೂಗಡ್ಡೆ, ಹತ್ತಿ, ಬತ್ತ ಬೆಳೆಯುತ್ತಿದ್ದೆವು.

ಗದ್ದೆ ಹೂಡುವುದರಿಂದ ಹಿಡಿದು ಎಲ್ಲ ಕೆಲಸಗಳನ್ನು ಮಾಡಿಕೊಂಡೇ ನಾನು ಕಾಲೇಜಿಗೆ ಹೋಗುತ್ತಿದ್ದೆ. ಅಪ್ಪ ಅಮ್ಮ ಇಂತಹದ್ದನ್ನೇ ಓದು ಎಂದು ಹೇಳಲಿಲ್ಲ. ಆದರೆ ದುಡಿಮೆಯ ಮಹತ್ವವನ್ನು ಮಾತ್ರ ಕಲಿಸಿಕೊಟ್ಟಿದ್ದರು. ಈಗಲೂ ನನ್ನನ್ನು ಕಾಯುತ್ತಿರುವುದು ಅದೊಂದೆ ಮಂತ್ರ.

ಮೈಸೂರಿಗೆ ಬಂದಾಗ ಯುರೇಕಾ ಫೋರ್ಬ್ಸ್‌ನಲ್ಲಿ ಸೇಲ್ಸ್‌ಮನ್ ಕೆಲಸ ಇದೆ ಎಂದು ಯಾರೋ ಹೇಳಿದರು. ನಾನೂ ಒಂದು ಅರ್ಜಿ ಸಲ್ಲಿಸಿದೆ. ಸಂದರ್ಶನಕ್ಕೆ ಕರೆ ಬಂದಾಗ ಅಲ್ಲಿಗೆ ಹೋದರೆ ನನಗೆ ಗಾಬರಿ. ಅಲ್ಲಿ ಬಹಳಷ್ಟು ಮಂದಿ ಟೈ, ಸೂಟ್ ಹಾಕಿಕೊಂಡು ಜಬರ್‌ದಸ್ತ್‌ನಲ್ಲಿ ಬಂದಿದ್ದರು. ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಅವರ ನಡುವೆ ನನಗೆ ಕೆಲಸ ಸಿಗುವ ಸಂಭವ ಇರಲಿಲ್ಲ. ಆದರೂ ಅಂಜದೆ ಸಂದರ್ಶನಕ್ಕೆ ಹೋದೆ. ನನ್ನ ಅದೃಷ್ಟ. ಅವರು ನನಗೆ ಕೆಲಸ ಕೊಟ್ಟರು.

ಸೇಲ್ಸ್‌ಮನ್ ಕೆಲಸ. ವ್ಯಾಕ್ಯೂಮ್ ಕ್ಲೀನರ್ ಮಾರಾಟ ಮಾಡಬೇಕಿತ್ತು. ಅದನ್ನು ಮನೆ ಮನೆಗೆ ತೆಗೆದುಕೊಂಡು ಹೋಗಿ ಮಾರ ಬೇಕಿತ್ತು. ಸಂಬಳ ತಿಂಗಳಿಗೆ 750 ರೂಪಾಯಿ. ಒಂದು ವ್ಯಾಕ್ಯೂಮ್ ಕ್ಲೀನರ್ ಮಾರಾಟ ಮಾಡಿದರೆ ನನಗೆ 150 ರೂಪಾಯಿ ಕಮಿಷನ್ ಸಿಗುತ್ತಿತ್ತು.

ಸಂಬಳಕ್ಕಿಂತಲೂ ಕಮಿಷನ್ ನನ್ನ ಆಸಕ್ತಿಯನ್ನು ಕೆರಳಿಸಿತು. ಆಗ ನನ್ನ ಬಳಿ ವಾಹನ ಕೂಡ ಇರಲಿಲ್ಲ. ನಡೆದುಕೊಂಡೇ ನನ್ನ ಕಾಯಕ ಆರಂಭಿಸಿದೆ. ಮೂರು ತಿಂಗಳಾಗುವ ಹೊತ್ತಿಗೆ ನಾನು ನಂಬರ್ ಒನ್ ಸೇಲ್ಸ್‌ಮನ್ ಆಗಿಬಿಟ್ಟೆ. ಸುಮಾರು ಐದು ವರ್ಷ ಈ ಕೆಲಸವನ್ನೇ ಮಾಡುತ್ತಿದ್ದೆ. ನನ್ನ ಸಂಬಳದಲ್ಲಿ ಏರಿಕೆಯಾಗಲಿಲ್ಲ. ಆದರೆ ನಾನು ಪಡೆಯುವ ಕಮಿಷನ್ ಮಾತ್ರ ಪ್ರತಿ ತಿಂಗಳೂ ಜಾಸ್ತಿಯಾಗುತ್ತಲೇ ಇತ್ತು.

ಆಗಲೇ ನಾನು ನನ್ನ ತಂದೆಗೆ ಒಂದು ದ್ವಿಚಕ್ರ ವಾಹನ ಕೊಡಿಸಲು ಕೇಳಿದೆ. ಅದಕ್ಕೆ ಒಪ್ಪಿದ ತಂದೆ 11 ಸಾವಿರ ರೂಪಾಯಿ ನೀಡಿ ಒಂದು ಲೂನ ತೆಗೆಸಿಕೊಟ್ಟರು. ಒಂದು ವರ್ಷದಲ್ಲಿ ಹಣವನ್ನು ವಾಪಸು ಮಾಡುವ ಷರತ್ತು ವಿಧಿಸಿದ್ದರು. ಆದರೆ ನಾನು ಮೂರು ತಿಂಗಳಿಗೇ ಅವರ ಹಣವನ್ನು ವಾಪಸು ಕೊಟ್ಟುಬಿಟ್ಟೆ.
 
ಆಗ ನನ್ನ ತಲೆಯಲ್ಲಿ ಇದ್ದಿದ್ದು ದುಡಿಮೆ, ದುಡಿಮೆ ದುಡಿವೆು ಮಾತ್ರ.ಹೀಗೆ ಸೇಲ್ಸ್‌ಮನ್ ಆಗಿರುವಾಗಲೇ ಮೈಸೂರಿನ ನ್ಯೂಕಾಂತರಾಜ ಅರಸ್ ರಸ್ತೆಯಲ್ಲಿ ಒಂದು ಕಿರಾಣಿ ಅಂಗಡಿ ತೆರೆದೆ. ಅದನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನನ್ನ ಒಬ್ಬ ಅಣ್ಣನಿಗೆ ವಹಿಸಿದೆ. ಅಣ್ಣ ಅಲ್ಲಿ ದುಡಿಯುತ್ತಿದ್ದ.

ನಾನು ರಸ್ತೆ ರಸ್ತೆ ತಿರುಗಿ ವ್ಯಾಕ್ಯೂಮ್ ಕ್ಲೀನರ್ ಮಾರಾಟ ಮಾಡುತ್ತಿದ್ದೆ. ಅಷ್ಟರಲ್ಲಾಗಲೇ ನನಗೆ ವ್ಯವಹಾರದ ಗುಟ್ಟುಗಳೆಲ್ಲಾ ತಿಳಿದಿದ್ದವು. ಯಾವುದೇ ವಸ್ತುವನ್ನು ಮಾರಾಟ ಮಾಡುವುದು ಹೇಗೆ ಎನ್ನುವುದು ಗೊತ್ತಾಗಿತ್ತು. ಅದಕ್ಕೆ ನಾನು 2000 ಇಸವಿಯಲ್ಲಿ ಇನ್ನು ನಾನು ಕೇವಲ ಸೇಲ್ಸ್‌ಮನ್ ಆಗಿರುವುದರಲ್ಲಿ ಪ್ರಯೋಜನವಿಲ್ಲ ಎಂದುಕೊಂಡೆ.

ಆಗ ಮೈಸೂರಿನಲ್ಲಿ ಸೋಲಾರ್ ಹೀಟರ್ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡುತ್ತಿತ್ತು. ಅದರಲ್ಲಿ ಲಾಭ ಇದೆ ಎಂದುಕೊಂಡು ಸೋಲರೈಸರ್ ಕಂಪೆನಿಯ ಡೀಲರ್‌ಶಿಪ್ ತೆಗೆದುಕೊಂಡೆ. ಇಷ್ಟು ವರ್ಷ ನಾನು ಸೇಲ್ಸ್‌ಮನ್ ಆಗಿ ದುಡಿದ ಹಣವನ್ನು ಅದರಲ್ಲಿ ವಿನಿಯೋಗಿಸಿದೆ.

ಸೋಲರೈಸರ್ ಕಂಪೆನಿಯ ವಸ್ತುಗಳನ್ನು ಮಾರಾಟ ಮಾಡುವುದರಲ್ಲಿ ನನ್ನ ಶ್ರಮವನ್ನೆಲ್ಲಾ ಹಾಕಿದೆ. ಕಿರಾಣಿ ಅಂಗಡಿಯನ್ನು ಮುಚ್ಚಿ ಅಣ್ಣನನ್ನೂ ಇದರಲ್ಲಿಯೇ ತೊಡಗಿಸಿದೆ. ಇಬ್ಬರೂ ಸೇರಿ ದುಡಿದಿದ್ದರಿಂದ ಅಲ್ಲೂ ಯಶಸ್ವಿಯಾದೆ.

ಈಗಲ್ ಬಾಯ್ಲರ್ ಮಾತ್ರ ತಯಾರು ಮಾಡುತ್ತಿದ್ದ ಅವಧಿಯಲ್ಲಿ 10 ಜನ ಕಾರ್ಮಿಕರಿದ್ದರು. ಇನ್ನೂ 15 ಮಂದಿಯನ್ನು ಸೇರಿಸಿಕೊಂಡು ಸೋಲಾರ್ ವಾಟರ್ ಹೀಟರ್ ಯಂತ್ರ ತಯಾರಿಕೆಗೆ ಮುಂದಾದೆವು. ಮೈಸೂರಿನಲ್ಲಿ ಸೋಲಾರ್ ಬಗ್ಗೆ ಜನರಿಗೆ ಆಸಕ್ತಿ ಇತ್ತು.

ಆದರೆ ಸೋಲಾರ್ ಯಂತ್ರ ತಯಾರಿಕೆಗೆ ಬೇಕಾದ ಯಾವುದೇ ಕಚ್ಚಾ ವಸ್ತು ಇಲ್ಲಿ ಸಿಗುವುದಿಲ್ಲ. ಎಲ್ಲವನ್ನೂ ಮುಂಬೈ ಮತ್ತು ಬೆಂಗಳೂರಿನಿಂದ ತರಿಸಿಕೊಳ್ಳಬೇಕು. ಬೆಲೆಯಲ್ಲಿ ಏರಿಳಿಕೆಯಾಗುತ್ತಿತ್ತು.

ಆದರೂ ನಾವು ಎದೆಗುಂದಲಿಲ್ಲ. ಸುಮಾರು ಒಂದೂವರೆ ವರ್ಷದಲ್ಲಿ ಮಾರುಕಟ್ಟೆಯಲ್ಲಿ ಈಗಲ್ ಬ್ರ್ಯಾಂಡ್ ಸ್ಥಿರವಾಗುವಂತೆ ನೋಡಿಕೊಂಡೆವು. ಆರಂಭದಲ್ಲಿ 5-6 ಕೋಟಿ ರೂಪಾಯಿಗಳಷ್ಟಿದ್ದ ವಹಿವಾಟು ಈಗ 18-20 ಕೋಟಿ ರೂಪಾಯಿಗೆ ಏರಿದೆ.

ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಈಗಲ್ ಸೋಲಾರ್ ವಾಟರ್ ಹೀಟರ್‌ಗೆ ಸಾಕಷ್ಟು ಬೇಡಿಕೆಗಳಿವೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಯಾವುದೇ ನೀರಿಗೂ ಹೊಂದಾಣಿಕೆಯಾಗುವ ಉತ್ಪನ್ನ ನಮ್ಮದು. ಕೇಂದ್ರ ಸರ್ಕಾರದ ಎಂಎನ್‌ಆರ್‌ಎ ಕ್ರಿಸಿಲ್ ಗ್ರೇಡ್ ಪಡೆದುಕೊಂಡಿದೆ. ಅಲ್ಲದೆ ಈಗಲ್ ಸೋಲಾರ್ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಸಬ್ಸಿಡಿ ಕೂಡ ನೀಡುತ್ತದೆ.

ಸೋಲಾರ್ ಹೀಟರ್‌ಗಳು 11 ಸಾವಿರ ರೂಪಾಯಿಗಳಿಂದ ಹಿಡಿದು 20 ಲಕ್ಷದ ವರೆಗಿನ ಉತ್ಪನ್ನಗಳೂ ನಮ್ಮಲ್ಲಿ ಲಭ್ಯ. ನೂರು ಲೀಟರ್‌ನಿಂದ 10 ಸಾವಿರ ಲೀಟರ್ ಸಾಮರ್ಥ್ಯದ ಸೋಲಾರ್ ವಾಟರ್ ಹೀಟರ್‌ಗಳನ್ನು ತಯಾರಿಸುತ್ತೇವೆ. ಕೇರಳ, ತಮಿಳುನಾಡು, ಕರ್ನಾಟಕದಲ್ಲಿ 70ಕ್ಕೂ ಹೆಚ್ಚು ಡೀಲರ್‌ಗಳಿದ್ದಾರೆ.
 
5 ಪ್ರಮುಖ ವಿತರಕರಿದ್ದಾರೆ. ಈಗ ನಮ್ಮ ಕಂಪೆನಿಯಲ್ಲಿ ನೇರವಾಗಿ 80ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಾರೆ. ಈಗಲ್ ಕಂಪೆನಿಗಾಗಿಯೇ ಉಪ ಉತ್ಪನ್ನಗಳನ್ನು ತಯಾರಿಸಿ ಕೊಡುವ 6 ಪ್ರತ್ಯೇಕ ಘಟಕಗಳು ಇವೆ.

ಈಗಲೂ ಇಲ್ಲಿ ಕುಶಲ ಕಾರ್ಮಿಕರ ಕೊರತೆ ಇದೆ. ಮೈಸೂರಲ್ಲಿ ಸೋಲಾರ್ ಸಾಕ್ಷರತೆ ಹೆಚ್ಚಾಗಿರುವುದರಿಂದ ನಮ್ಮ ಉತ್ಪನ್ನಗಳಿಗೆ ಬೇಡಿಕೆಯ ಕೊರತೆ ಇಲ್ಲ. ಇನ್ನು ಮುಂದೆ ಸೋಲಾರ್ ಶಕ್ತಿಯೇ ಇಂಧನದ ಪರ‌್ಯಾಯವಾಗುವುದರಿಂದಲೂ ನಮ್ಮ ಉದ್ಯಮಕ್ಕೆ ಬೇಡಿಕೆ ಕುಸಿಯುವ ಸಾಧ್ಯತೆ ಇಲ್ಲ.

ಹೀಗೆ ಪ್ರಶಾಂತ್ ಜೈನ್ ದುಡಿಮೆಯನ್ನೇ ನಂಬಿ ಬೆಳೆದವರು. ಇನ್ನೂ ಬೆಳೆಯಲು ಹವಣಿಸುತ್ತಿರುವವರು. ಬೆವರು ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ ಎನ್ನುವುದನ್ನು ಮತ್ತೆ ಮತ್ತೆ ದೃಢಪಡಿಸಿದವರು. 

ಆರಂಭದ ದಿನಗಳು...
`ನಾನೇ ಸೋಲಾರ್ ವಾಟರ್ ಹೀಟರ್ ಉತ್ಪಾದನೆ ಆರಂಭಿಸಿದ್ದರಿಂದ ಸೋಲರೈಸರ್ ಕಂಪೆನಿ ಜೊತೆ ನಾನು ಸ್ಪರ್ಧೆಗೆ ಇಳಿಯುವುದು ಅನಿವಾರ್ಯವಾಯಿತು. ಅದಕ್ಕೇ ಆ ಕಂಪೆನಿಯ ವಿತರಣೆಯನ್ನು ಬಿಟ್ಟೆ. ರಾಜ್ಯದ ಎಲ್ಲ ಕಡೆ ಮತ್ತು ಹೊರ ರಾಜ್ಯಗಳಲ್ಲಿಯೂ ನನಗೆ ಸಂಪರ್ಕ ಇತ್ತು.

ಆದರೆ ಹೊಸ ಉತ್ಪನ್ನಗಳನ್ನು ಮಾರಾಟ ಮಾಡುವುದು ಸುಲಭವಾಗಿರಲಿಲ್ಲ. ಯಾರೂ ಡೀಲರ್‌ಶಿಪ್ ತೆಗೆದುಕೊಳ್ಳಲು ಮುಂದಾಗುತ್ತಿರಲಿಲ್ಲ. ಆಗ ನಾವೇ ಒಂದಿಷ್ಟು ಮಂದಿಯನ್ನು ಸೇಲ್ಸ್‌ಮನ್‌ಗಳಾಗಿ ನೇಮಕ ಮಾಡಿಕೊಂಡೆವು.

ಕೋಲಾರ, ಹುಬ್ಬಳ್ಳಿ, ಬಳ್ಳಾರಿ ಮುಂತಾದ ಕಡೆಗೆ ಹೋಗಿ ಉದ್ಯೋಗದ ಅಗತ್ಯ ಇರುವ ಯುವಕರನ್ನು ಕರೆದು ತಂದು ತಯಾರಿ ಮಾಡಿ ಮಾರುಕಟ್ಟೆಯಲ್ಲಿ ಬಿಟ್ಟೆವು.ಇದರಿಂದ ನಮ್ಮ ಬಾಯ್ಲರ್ ಮತ್ತು ಸೋಲಾರ್ ವಾಟರ್ ಹೀಟರ್‌ಗೂ ಬೇಡಿಕೆ ಬಂದವು~ ಎನ್ನುತ್ತಾರೆ ಜೈನ್.
 
ಬೆಳಕು ಮೂಡಿತು...
`ಇಡೀ ಜಗತ್ತನ್ನೇ ಬೆಳಗುವ ಸೂರ್ಯ ನನ್ನ ಬದುಕಿನಲ್ಲಿಯೂ ಬೆಳಕನ್ನು ತಂದ. ಸೋಲರೈಸರ್ ಕಂಪೆನಿ ಡೀಲರ್, ಡಿಸ್ಟ್ರಿಬ್ಯೂಟರ್ ಎಲ್ಲಾ ಆಗಿ ಸೋಲಾರ್ ಕಂಪೆನಿಯ ಒಳ ಹೊರಗನ್ನು ತಿಳಿದುಕೊಂಡ ನಾನು ನಾನೇ ಯಾಕೆ ಒಂದು ಕಂಪೆನಿ ಆರಂಭಿಸಬಾರದು ಎಂದುಕೊಂಡೆ. 

   ಮತ್ತೆ ತಡ ಮಾಡಲಿಲ್ಲ. ಯಾವುದೇ ವಸ್ತುವನ್ನು ಮಾರಾಟ ಮಾಡುವುದು ಹೇಗೆ ಎನ್ನುವುದು ನನಗೆ ಗೊತ್ತಿತ್ತು. ಉತ್ಪಾದನೆಯ ಕೌಶಲವನ್ನು ಗೆಳೆಯ ಚಂದ್ರಶೇಖರ್ ಅವರಿಂದ ಕಲಿತುಕೊಂಡೆ. ಅವರನ್ನೇ ಕಂಪೆನಿಯ ನಿರ್ದೇಶಕರನ್ನಾಗಿ ಮಾಡಿಕೊಂಡು ಈವರೆಗೆ ನಾನು ದುಡಿದ ಹಣವನ್ನೆಲ್ಲಾ ಸೇರಿಸಿ 7 ಲಕ್ಷ ರೂಪಾಯಿ ಬಂಡವಾಳದೊಂದಿಗೆ 2007ರಲ್ಲಿ ಈಗಲ್ ಕಂಪೆನಿ ಆರಂಭಿಸಿದೆ. 

   ಆಗ ನಾವು ಕೇವಲ ಗುಜರಾತ್ ಬಾಯ್ಲರ್ ಮಾತ್ರ ಉತ್ಪಾದಿಸುತ್ತಿದ್ದೆವು. ಹೂಟಗಳ್ಳಿ ಕೈಗಾರಿಕಾ ಘಕಟದಲ್ಲಿ ನಮ್ಮ ಕಾರ್ಖಾನೆ ಸ್ಥಾಪನೆಗೊಂಡಿತು.ಮೊದ ಮೊದಲು ಸ್ವಲ್ಪ ಕಷ್ಟವಾದರೂ ಕೊಡಗು, ಮೈಸೂರು ಮುಂತಾದ ಜಿಲ್ಲೆಗಳಲ್ಲಿ ನಮ್ಮ ಬಾಯ್ಲರ್‌ಗಳಿಗೆ ಬೇಡಿಕೆ ಬಂತು. ಸುಮಾರು ಒಂದೂವರೆ ವರ್ಷದಲ್ಲಿ ನಾವು ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನಿಂತೆವು. 

  ಅಲ್ಲಿಯವರೆಗೂ ನಾನು ಸೋಲರೈಸರ್ ಕಂಪೆನಿ ಸೋಲಾರ್ ವಾಟರ್ ಹೀಟರ್ ವಿತರಕನಾಗಿಯೇ ಇದ್ದೆ. ಆದರೆ ನಮ್ಮ ಈಗಲ್ ಕಂಪೆನಿ ಗಟ್ಟಿಯಾಗಿ ನಿಂತಿದ್ದರಿಂದ ನಾವೇ ಸೋಲಾರ್ ವಾಟರ್ ಹೀಟರ್ ತಯಾರಿಕೆ ಮಾಡುವುದು ಒಳ್ಳೆಯದು ಎಂದು ನಿರ್ಧರಿಸಿ 2008ರಲ್ಲಿ 25 ಲಕ್ಷ ರೂಪಾಯಿ ಮೂಲ ಬಂಡವಾಳದಲ್ಲಿ ಈಗಲ್ ಸೋಲಾರ್ ವಾಟರ್ ಹೀಟರ್ ಕಾರ್ಖಾನೆ ಆರಂಭಿಸಿದೆ.
 
ಚಂದ್ರ   ಶೇಖರ್ ಅವರು ತಾಂತ್ರಿಕ ಸಲಹೆ ನೀಡಿದರು. ನಾನು ಮಾರಾಟ ವಿಭಾಗವನ್ನು ನೋಡಿಕೊಂಡೆ~ ಎನ್ನುತ್ತಾ ತಮ್ಮ ಸಾಧನೆಯ ಹಾದಿ ನೆನಪುಮಾಡಿಕೊಂಡರು ಪ್ರಶಾಂತ್ ಜೈನ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.