ಕಡೆಗೂ ಉದ್ದಿಮೆಗಳು ಕರ್ನಾಟಕದ ಉತ್ತರ ದಿಕ್ಕಿನತ್ತ ಮುಖ ಮಾಡಿವೆ. ಆ ಮೂಲಕ ದಶಕಗಳ ಕಾಲದ `ತಾರತಮ್ಯ~ ನಿವಾರಣೆಗೆ ಮನಸ್ಸು ಮಾಡಿವೆ. ಇತ್ತೀಚಿನ ಈ ಬೆಳವಣಿಗೆ ಉತ್ತರ ಕರ್ನಾಟಕ ಭಾಗದ ಜನರಲ್ಲಿ ಆಶಾಭಾವ ಮೂಡಿಸಿದೆ.
ಉತ್ತರ ಕರ್ನಾಟಕದಲ್ಲಿ ದಶಕದ ಹಿಂದೆ ಅಲ್ಲೊಂದು, ಇಲ್ಲೊಂದು ಕೈಗಾರಿಕೆಗಳಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಕ್ಕರೆ, ಸಿಮೆಂಟ್, ಎಂಜಿನಿಯರಿಂಗ್, ಫೌಂಡ್ರಿ ಸೇರಿದಂತೆ ವಿವಿಧ ಬಗೆಯ ಕೈಗಾರಿಕೆಗಳು ತಲೆ ಎತ್ತಿವೆ. 2010ರಲ್ಲಿ ಬೆಂಗಳೂರು, 2012ರಲ್ಲಿ ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ನಡೆದ ಹೂಡಿಕೆದಾರರ ಸಮ್ಮೇಳನದಲ್ಲಿ ಉದ್ಯಮಿಗಳೊಂದಿಗೆ ಒಪ್ಪಂದಗಳಾದ ನಂತರ ಈ ಭಾಗದಲ್ಲಿಯೂ ಕೈಗಾರಿಕೆ ಶಕೆ ಆರಂಭವಾಗುವ ಆಶಾಕಿರಣ ಮೂಡಿದೆ.
ಜಿಲ್ಲೆಯಿಂದ ಜಿಲ್ಲೆಗೆ ವೈವಿಧ್ಯತೆ ಹೊಂದಿರುವ ಉತ್ತರ ಕರ್ನಾಟಕದಲ್ಲಿ ನೈಸರ್ಗಿಕ ಸಂಪನ್ಮೂಲಕ್ಕೇನೂ ಕೊರತೆ ಇಲ್ಲ. ಇಲ್ಲಿರುವ ಸಂಪನ್ಮೂಲ ಬಳಸಿಕೊಂಡು ಸಿಮೆಂಟ್, ಸಕ್ಕರೆ, ಆಹಾರ ಸಂಸ್ಕರಣೆ, ವಿದ್ಯುತ್, ಉಕ್ಕು ಸೇರಿದಂತೆ ಹಲವಾರು ಕಾರ್ಖಾನೆಗಳ ಸ್ಥಾಪನೆಗೆ ವಿಪುಲ ಅವಕಾಶಗಳಿವೆ. ಆದರೆ ಮೂಲ ಸೌಕರ್ಯ ಕೊರತೆಯಿಂದಾಗಿ ಬಂಡವಾಳದಾರರು ಇತ್ತ ತಿರುಗಿಯೂ ನೋಡಿರಲಿಲ್ಲ.
ಮೂಲ ಸೌಕರ್ಯ, ನೀರು, ವಿದ್ಯುತ್ ಹಾಗೂ ಕೈಗಾರಿಕೆಗೆ ಅವಶ್ಯವಿರುವ ಭೂಮಿಯನ್ನು ಒದಗಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ ನಂತರ ಉದ್ದಿಮೆದಾರರು ಈ ಭಾಗದಲ್ಲಿ ಬೃಹತ್ ಕೈಗಾರಿಕೆಗಳನ್ನು ಆರಂಭಿಸಲು ಒಡಂಬಡಿಕೆಗೆ ಸಹಿ ಹಾಕಿದ್ದಾರೆ.
ಉತ್ತರ ಕರ್ನಾಟಕವು ಗುಲ್ಬರ್ಗ ಮತ್ತು ಬೆಳಗಾವಿ ವಲಯ ಹೊಂದಿದ್ದು, ರಾಜ್ಯದ ಒಟ್ಟು ಆದಾಯದಲ್ಲಿ ಶೇ. 28.2ರಷ್ಟನ್ನು ಈ ವಲಯಗಳು ನೀಡುತ್ತಿವೆ. (ಗುಲ್ಬರ್ಗ ವಲಯ ಶೇ. 14.7 ಹಾಗೂ ಬೆಳಗಾವಿ ವಲಯ ಶೇ. 13.5). ಬೆಂಗಳೂರು ವಲಯದ ಶೇ. 52 ಹಾಗೂ ಮೈಸೂರು ವಲಯದ ಶೇ. 19.8 ಕೊಡುಗೆಗೆ ಹೋಲಿಸಿದಲ್ಲಿ ಉತ್ತರ ಕರ್ನಾಟಕ ಹಿಂದುಳಿದಿರುವುದು ಎದ್ದು ಕಾಣುತ್ತದೆ. ಇಲ್ಲಿಯ ಸಂಪನ್ಮೂಲಗಳನ್ನು ಬಳಸಿಕೊಂಡು ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎಂಬ ಸರ್ಕಾರದ ಪ್ರಯತ್ನಕ್ಕೆ ಉದ್ಯಮಿಗಳು ಕೈಜೋಡಿಸಿರುವುದು ಗಮನಾರ್ಹ.
ಬೆಂಗಳೂರಿನಲ್ಲಿ 2010ರಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ 3,40,575 ಕೋಟಿ ರೂಪಾಯಿ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯೂ ಇದೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ 2012ನೇ ಸಾಲಿನ `ವಿಶ್ವ ಬಂಡವಾಳ ಹೂಡಿಕೆದಾರರ ಪೂರ್ವಭಾವಿ ಸಭೆ~ಯಲ್ಲಿ ಬೆಳಗಾವಿ ವಲಯದ ಜಿಲ್ಲೆಗಳಲ್ಲಿ 4,943 ಕೋಟಿ ರೂಪಾಯಿ ಹೂಡಿಕೆಗೆ 229 ಉದ್ದಿಮೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ 23,256 ಮಂದಿಗೆ ಉದ್ಯೋಗ ದೊರೆಯಲಿವೆ ಎಂದು ಅಂದಾಜು ಮಾಡಲಾಗಿದೆ.
ಬೆಳಗಾವಿಯಲ್ಲಿ ನಡೆದ `ಕರ್ನಾಟಕ ಅಭಿವೃದ್ಧಿ ಕಾರ್ಯಸೂಚಿ; ಕೇಂದ್ರೀಕೃತ ಉತ್ತರ ಕರ್ನಾಟಕ ಪ್ರದೇಶ~ ಎಂಬ ಸಮ್ಮೇಳನದಲ್ಲಿ ಜಿಲ್ಲೆಯ ಉದ್ದಿಮೆದಾರರು 10 ಒಡಂಬಡಿಕೆ ಮಾಡಿಕೊಂಡಿದ್ದು, 103 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ.
ಪ್ರಾದೇಶಿಕ ಅಸಮತೋಲನ: ಬೆಂಗಳೂರಿನಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಟ್ಟು 3,40,575 ಕೋಟಿ ರೂಪಾಯಿ ಹೂಡಿಕೆಗೆ ಒಪ್ಪಂದಗಳಾಗಿದ್ದರೆ, ಅದರಲ್ಲಿ ಅರ್ಧಕ್ಕೂ ಹೆಚ್ಚು ಅಂದರೆ 1,76,413 ಕೋಟಿ ರೂಪಾಯಿ ಬಳ್ಳಾರಿ ಜಿಲ್ಲೆಯಲ್ಲಿಯೇ ಹೂಡಿಕೆಯಾಗಲಿದೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಪೂರ್ವಭಾವಿ ಸಭೆಯಲ್ಲಿ ಬೆಳಗಾವಿ ವಲಯದ ಜಿಲ್ಲೆಗಳಲ್ಲಿ 4,943 ಕೋಟಿ ರೂಪಾಯಿ ಹೂಡಿಕೆಗೆ ಒಪ್ಪಂದಗಳಾಗಿವೆ.
ಧಾರವಾಡ ಜಿಲ್ಲೆಯಲ್ಲಿ 2084 ಕೋಟಿ ರೂಪಾಯಿ, ಬೆಳಗಾವಿಯಲ್ಲಿ 1,817 ಕೋಟಿ ರೂಪಾಯಿ ಹೂಡಿಕೆ ಆಗುವ ನಿರೀಕ್ಷೆ ಇದೆ. ಉಳಿದಂತೆ ಉತ್ತರ ಕನ್ನಡ, ಗದಗ ಮತ್ತಿತರ ಜಿಲ್ಲೆಗಳಲ್ಲಿನ ಹೂಡಿಕೆ ಶತಕೋಟಿಯನ್ನೂ ದಾಟಿಲ್ಲ ಎಂಬುದು ಎದ್ದು ಕಾಣುತ್ತದೆ.
ಸಕ್ಕರೆ ಉದ್ಯಮದಲ್ಲಿ 1,854 ಕೋಟಿ ರೂಪಾಯಿ, ಆಹಾರ ಸಂಸ್ಕರಣದಲ್ಲಿ 940, ರಸಗೊಬ್ಬರ ಉದ್ಯಮದಲ್ಲಿ 4,565, ಅನಿಲ ಮತ್ತು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ವಲಯದಲ್ಲಿ 16,880, ಉಕ್ಕು ವಲಯದಲ್ಲಿ 60,500 ಕೋಟಿ ರೂಪಾಯಿ ಸೇರಿದಂತೆ ವಿವಿಧ ಉದ್ಯಮದಲ್ಲಿ ಭಾರಿ ಪ್ರಮಾಣದ ಹೂಡಿಕೆ ಆಗುವ ಒಪ್ಪಂದಗಳಾಗಿವೆ.
ಪೋಸ್ಕೊ, ಜುವಾರಿ, ಟಾಟಾ ಮೆಟಾಲಿಕ್, ರೇಣುಕಾ ಶುಗರ್ಸ್, ಲಕ್ಸರ್ ಪವರ್ ಪ್ರೈ.ಲಿ. ಸೇರಿದಂತೆ ಹಲವು ದೊಡ್ಡ ಕಂಪನಿಗಳೂ ಇತ್ತ ಆಗಮಿಸುತ್ತಿವೆ. ಆದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳೇಕೋ ಈ ಭಾಗದತ್ತ ಗಮನವನ್ನೇ ಹರಿಸಿಲ್ಲ.
ರೈತರಿಗೆ ಅನುಕೂಲವಾಗುವಂತಹ ಸಕ್ಕರೆ ಕಾರ್ಖಾನೆ, ಶೀತಲೀಕರಣ ಘಟಕ, ಕ್ಷೀರೋದ್ಯಮ, ಹತ್ತಿ ಜಿನ್ನಿಂಗ್ ಕಾರ್ಖಾನೆ, ಗೋಡಂಬಿ ಸೇರಿದಂತೆ ಹಲವು ಕೈಗಾರಿಕೆಗಳು ಈ ಭಾಗಕ್ಕೆ ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುವ ನಿರೀಕ್ಷೆ ಇದೆ.
ಉತ್ತರ ಕರ್ನಾಟಕದಲ್ಲಿ ಮೂಲ ಸೌಕರ್ಯ ಹೆಚ್ಚಳಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸೌಕರ್ಯಗಳು ಇರದಿದ್ದರೆ ಉದ್ಯಮಗಳು ಬರುವುದಿಲ್ಲ. ಜೊತೆಗೆ ಸಂಪರ್ಕದ ಕೊರತೆಯನ್ನು ಸರಿಪಡಿಸಬೇಕು. ವಿಮಾನ ಸಂಚಾರ ಕೆಲವೆಡೆ ಸ್ಥಗಿತಗೊಂಡಿದೆ. ಅದನ್ನು ಮತ್ತೆ ಆರಂಭಿಸಬೇಕು. ಹಾಗಾದಲ್ಲಿ ಮಾತ್ರವೇ ಈ ಭಾಗದಲ್ಲಿ ಕೈಗಾರಿಕೆಗಳು ತಲೆ ಎತ್ತಲು, ಉದ್ದಿಮೆ ಕ್ಷೇತ್ರದಲ್ಲಿ ಪ್ರಗತಿಯಾಗಲು ಎನ್ನುತ್ತಾರೆ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಜೆ.ಆರ್.ಬಂಗೇರಾ.
`ಬೃಹತ್ ಕೈಗಾರಿಕೆಗಳ ಜೊತೆಗೆ ಸಣ್ಣ ಕೈಗಾರಿಕೆಗಳಿಗೂ ಉತ್ತೇಜನ ನೀಡಬೇಕಿದೆ. ವಿದ್ಯುತ್ ಹಾಗೂ ಸಂಪರ್ಕ ವ್ಯವಸ್ಥೆಯನ್ನು ಉತ್ತಮಗೊಳಿಸಬೇಕಿದೆ~ ಎನ್ನುತ್ತಾರೆ ಬೆಳಗಾವಿ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಬಸವರಾಜ ಜವಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.