ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ದೇಶದ ಅರ್ಥ ವ್ಯವಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಿರುವ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು 2011-12ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ರಿಯಾಯ್ತಿ ನೀಡುವುದರಲ್ಲಿ ಮತ್ತು ಹೊಸ ತೆರಿಗೆ ಹೊರೆ ಹೇರುವುದರಲ್ಲಿ ಸಮತೋಲನ ಸಾಧಿಸುವ ಜಾಣ್ಮೆ ಪ್ರದರ್ಶಿಸಿದ್ದರೂ, ಮುಂಬರುವ ದಿನಗಳಲ್ಲಿ ಬಜೆಟ್ ಪ್ರಸ್ತಾವಗಳಿಂದ ತೆರಿಗೆ ಭಾರ ಹೆಚ್ಚುವ ಸಾಧ್ಯತೆಗಳು ಇವೆ.
ಕೆಲ ತೆರಿಗೆ ಪ್ರಸ್ತಾವಗಳಿಗೆ ರೇಷ್ಮೆ ಬೆಳೆಗಾರರು, ಖಾಸಗಿ ಆಸ್ಪತ್ರೆಗಳು ಮತ್ತು ಬ್ರಾಂಡೆಡ್ ಸಿದ್ಧ ಉಡುಪು ತಯಾರಿಕಾ ಸಂಸ್ಥೆಗಳು ಅಪಸ್ವರ ಎತ್ತಿ, ಪ್ರತಿಭಟನೆಗೂ ಮುಂದಾಗಿರುವುದರಿಂದ ತೆರಿಗೆ ಹೊರೆಗಳು ಜನಸಾಮಾನ್ಯರ ಪಾಲಿಗೂ ಸಾಕಷ್ಟು ಬಿಸಿ ಮುಟ್ಟಿಸುವ ಸಾಧ್ಯತೆಗಳು ಇರುವುದು ವೇದ್ಯವಾಗುತ್ತದೆ.
ದೇಶದ ರೂ 12.58 ಲಕ್ಷ ಕೋಟಿಗಳಷ್ಟು ಮೊತ್ತದ ಕೇಂದ್ರೀಯ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿರುವ 130 ಹೊಸ ಸರಕುಗಳ ಮೇಲೆ ಅಬಕಾರಿ ಸುಂಕ ಹೇರಿಕೆ, ಚೀನಾದಿಂದ ಆಮದು ಮಾಡಿಕೊಳ್ಳುವ ರೇಷ್ಮೆ ಮೇಲಿನ ಸುಂಕವನ್ನು ಶೇ 26ರಷ್ಟು ಕಡಿಮೆ ಮಾಡಿರುವುದು, ಖಾಸಗಿ ಆಸ್ಪತ್ರೆಗಳಲ್ಲಿನ ಚಿಕಿತ್ಸೆ, ಮತ್ತು ಕಾಯಿಲೆ ಪತ್ತೆ ಹಚ್ಚುವ ಕೇಂದ್ರಗಳನ್ನು ಸೇವಾ ತೆರಿಗೆ ವ್ಯಾಪ್ತಿಗೆ ತಂದಿರುವುದು ಮತ್ತು ಬ್ರಾಂಡೆಡ್ ಸಿದ್ಧ ಉಡುಪುಗಳ ಮೇಲಿನ ಅಬಕಾರಿ ಸುಂಕ ಹೇರಿಕೆಯು ತೀವ್ರ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಪ್ರತಿಭಟನೆಗೂ ಕಾರಣವಾಗಿವೆ.
ನಾರಾಯಣ ಹೃದಯಾಲಯವಂತೂ ಸೇವಾ ತೆರಿಗೆ ವಿರೋಧಿಸಿ ‘ಪತ್ರ ಚಳವಳಿ’ ನಡೆಸಲೂ ಜನರಿಗೆ ಕರೆಕೊಟ್ಟಿದೆ. ಇನ್ನೊಂದೆಡೆ ಬ್ರಾಂಡೆಡ್ ಸಿದ್ಧ ಉಡುಪು ತಯಾರಿಕಾ ಸಂಸ್ಥೆಗಳು ಸಿದ್ಧ ಉಡುಪುಗಳ ಮೇಲೆ ಕಡ್ಡಾಯವಾಗಿ ಶೇ 10ರಷ್ಟು ಅಬಕಾರಿ ಸುಂಕ ವಿಧಿಸುವ ಪ್ರಸ್ತಾವ ಕೈಬಿಡಲು ಒತ್ತಾಯಿಸಿ ಪ್ರತಿಭಟನೆ, ವಹಿವಾಟು ಬಂದ್ ಆಚರಿಸಿವೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಒಟ್ಟಾರೆ ತೆರಿಗೆ ಪ್ರಸ್ತಾವನೆಗಳನ್ನು ವಿಶ್ಲೇಷಿಸಿದರೆ, ತಕ್ಷಣಕ್ಕೆ ಭಾರಿ ಪ್ರಮಾಣದ ತೆರಿಗೆ ಹೊರೆ ಇಲ್ಲ ಎಂದು ಭಾವಿಸುವ ಗ್ರಾಹಕರು ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಕಿರಾಣಿ ಸಾಮಾನುಗಳು ಶೇ 4ರಿಂದ 5ರಷ್ಟು ತುಟ್ಟಿಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಕಾಫಿ, ಚಹ, ಕೆಚ್‌ಅಪ್, ಸೂಪ್, ಇನ್‌ಸ್ಟಂಟ್ ಮಿಕ್ಸಸ್, ಸಿದ್ಧ ಆಹಾರ, ಪೊಟ್ಟಣಗಳಲ್ಲಿ ಪೂರೈಸುವ ಸಿದ್ಧ ಆಹಾರ (ರೆಡಿ ಟು ಈಟ್), ಔಷಧಗಳು, ವ್ಯಾಕ್ಸಿನ್, ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಕೈಗವಸುಗಳ ಮೇಲೆ ಶೇ 5ರಷ್ಟು ಅಬಕಾರಿ ಸುಂಕ ವಿಧಿಸಲಾಗಿದೆ.
ಹಲವಾರು ಕೃಷಿ ಉತ್ಪನ್ನಗಳ ಮೇಲೆ ರಫ್ತು ತೆರಿಗೆ ವಿಧಿಸಲು ಮುಂದಾಗಿರುವುದು ಅಭಿವೃದ್ಧಿಗೆ ಪೂರಕವಾಗಿರಲಾರದು. ಕಾಫಿ, ಚಹ, ಮೆಣಸು, ಏಲಕ್ಕಿ, ಸಣಬು, ಉಣ್ಣೆ, ತೆಂಗಿನ ನಾರು, ಹತ್ತಿ, ಸೇಂಗಾ, ಕಬ್ಬಿಣ, ಉಕ್ಕು ಮತ್ತು ಉಕ್ಕಿನ ಉತ್ಪನ್ನಗಳ ಮೇಲಿನ ರಫ್ತು ತೆರಿಗೆಗಳು ದೇಶಿ ತಯಾರಕರ ಮೇಲೆ ಹೆಚ್ಚಿನ ಹೊರೆ ಹೇರಲಿವೆ.
ಪ್ರಾಥಮಿಕ ಸರಕುಗಳನ್ನೇ ಕಚ್ಚಾ ವಸ್ತು ರೂಪದಲ್ಲಿ ಬಳಸಿ ಸರಕಿನ ಮೌಲ್ಯವರ್ಧನೆ ಮಾಡಿದವರಿಗೆ ಉತ್ತೇಜನ ನೀಡಿದರೆ, ಪ್ರಾಥಮಿಕ ಸರಕು ತಯಾರಿಕೆ ಮೇಲೆ ತೆರಿಗೆ ವಿಧಿಸುವ ಪ್ರಸ್ತಾವಗಳು ಬಜೆಟ್‌ನಲ್ಲಿ ಇವೆ. ಚಹ, ಸಣಬುಗಳ ಮೇಲಿನ ತೆರಿಗೆಗಳು ಮತ್ತು ರೇಷ್ಮೆ ಆಮದು ಮೇಲಿನ ತೆರಿಗೆ ರಿಯಾಯ್ತಿಗಳು ಲಕ್ಷಾಂತರ ಜನರ ಜೀವನಾಧಾರದ ಮೇಲೆ ಬರೆ ಎಳೆಯಲಿವೆ.
ಅಬಕಾರಿ ಸುಂಕವು ಶೇ 4ರಿಂದ 5ಕ್ಕೆ ಹೆಚ್ಚಳಗೊಳ್ಳಲಿರುವುದರಿಂದ ಬ್ರಿಟಾನಿಯಾ ತನ್ನ ಉತ್ಪನ್ನಗಳ ಬೆಲೆ ಹೆಚ್ಚಿಸಲು ನಿರ್ಧರಿಸಿದ್ದರೆ, ಕ್ಯಾನನ್ ಮತ್ತು ಫಿಲಿಪ್ಸ್ - ಅಬಕಾರಿ ಸುಂಕ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ತೀರ್ಮಾನಿಸಿವೆ.
ಸಕ್ಕರೆ ತಿನಿಸುಗಳ ಮೇಲೆ ವಿಧಿಸಿರುವ ಶೇ 1ರಷ್ಟು ಅಬಕಾರಿ ಸುಂಕ ಹೆಚ್ಚಳದಿಂದಾಗಿ, ಮಿಠಾಯಿ (ಸಿಹಿ ತಿನಿಸು) ತಯಾರಿಸುವ ಪಾರ್ಲೆ ಅಗ್ರೊ ಸಂಸ್ಥೆಯು ್ಙ 1 ಬೆಲೆಯ ಉತ್ಪನ್ನಗಳ ಬೆಲೆ ಹೆಚ್ಚಿಸಲಿದೆ. 50 ಪೈಸೆ ಬೆಲೆಯ ತಿನಿಸುಗಳು ಕ್ರಮೇಣ ಮಾರುಕಟ್ಟೆಯಿಂದಲೇ ಮಾಯವಾಗುವ ಸಾಧ್ಯತೆಳನ್ನೂ ಸದ್ಯಕ್ಕೆ ತಳ್ಳಿಹಾಕುವಂತಿಲ್ಲ. ಈ ಹಿಂದೆ 25 ಪೈಸೆ ಬಳಕೆಯಿಂದ ದೂರ ಸರಿದಂತೆ ಇನ್ನು ಮುಂದೆ 50 ಪೈಸೆ ಬೆಲೆಯ ಚಿಣ್ಣರ ಸಿಹಿ ತಿನಿಸುಗಳು ಮತ್ತು ಕ್ರಮೇಣ 50 ಪೈಸೆಯೂ ಮಾರುಕಟ್ಟೆಯಿಂದ ಮಾಯವಾಗಬಹುದು.
ಇನ್ನೊಂದೆಡೆ ಲೇಸರ್ ಪ್ರಿಂಟರ್ಸ್ ಮತ್ತು ಸರ್ವಿಸಿಂಗ್ ಇಂಕ್‌ಜೆಟ್‌ಗಳು ಅಗ್ಗವಾಗಲಿವೆ. ಎಲ್‌ಇಡಿ ಬಲ್ಬ್‌ಗಳ ಮೇಲಿನ ಅಬಕಾರಿ ಸುಂಕ ಶೇ 10ರಿಂದ ಶೇ 5ಕ್ಕೆ ಇಳಿದು ಈ ಬಲ್ಬ್‌ಗಳು ಅಗ್ಗವಾಗಲಿವೆ.
25ಕ್ಕಿಂತ ಹೆಚ್ಚಿನ ಹಾಸಿಗೆಗಳ ಖಾಸಗಿ ಆಸ್ಪತ್ರೆಗಳಲ್ಲಿನ ಚಿಕಿತ್ಸೆ ಸೇವಾ ತೆರಿಗೆ ವ್ಯಾಪ್ತಿಗೆ ಬರಲಿವೆ. ರೋಗ ಪತ್ತೆ ಹಚ್ಚುವ ಕೇಂದ್ರಗಳ ಸೇವೆಯೂ ದುಬಾರಿಗೊಳ್ಳಲಿದೆ.
ಮೈಕ್ರೊ ಪ್ರೊಸೆಸ್ಸರ್‌ಗಳ ಮೇಲೆ ಶೇ 5ರಷ್ಟು ಅಬಕಾರಿ ಸುಂಕ ವಿಧಿಸುವುದರಿಂದ ಕಂಪ್ಯೂಟರ್‌ಗಳು ದುಬಾರಿಯಾಗುವ ಸಾಧ್ಯತೆಗಳಿದ್ದರೂ, ಹೊರೆ ತುಂಬ ಕಡಿಮೆ ಇರಲಿದೆ. ಜತೆಗೆ ಪ್ಲಾಪಿ ಡಿಸ್ಕ್, ಹಾರ್ಡ್ ಡ್ರೈವ್, ಸಿ.ಡಿ ರಾಮ್‌ಗಳು ತುಟ್ಟಿಯಾಗಲಿವೆ. ಪಿಸಿ (ಕಂಪ್ಯೂಟರ್‌ಗಳು) ಬೆಲೆಗಳು ಶೇ 1ರಿಂದ 2ರಷ್ಟು ತುಟ್ಟಿಯಾಗುವ ನಿರೀಕ್ಷೆ ಇದೆ. ಸ್ಥಳೀಯವಾಗಿ ಸಿದ್ಧಪಡಿಸುವ ಕಂಪ್ಯೂಟರ್‌ಗಳ ಮೇಲೆ ಇದು ತಕ್ಷಣಕ್ಕೆ ಪ್ರಭಾವ ಬೀರುವ ಸಾಧ್ಯತೆಗಳಿದ್ದರೆ, ಬ್ರಾಂಡೆಡ್ ಪಿಸಿಗಳೂ ಕ್ರಮೇಣ ತುಟ್ಟಿಯಾಗಲಿವೆ.
ವೇತನವರ್ಗ ಮತ್ತು ಮಧ್ಯಮ ವರ್ಗದ ಜನತೆ, ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳದಿಂದ ಕೆಲಮಟ್ಟಿಗೆ ಸಂತುಷ್ಟರಾಗಿದ್ದರೂ ಅಬಕಾರಿ ಸುಂಕ ಹೆಚ್ಚಳದ ಬಿಸಿ ಎದುರಿಸಲು ಸಿದ್ಧರಾಗಬೇಕಾಗಿದೆ.
ಖಾದ್ಯತೈಲ, ಏರ್‌ಕಂಡೀಷನರ್ ಮತ್ತಿತರ ಸರಕುಗಳು ತುಟ್ಟಿಯಾಗುವ ಸಾಧ್ಯತೆಗಳೇನೂ ಇಲ್ಲ. ಆದರೆ, ಮದ್ಯ ಸರಬರಾಜು ಮಾಡುವ ಉತ್ತಮ ಗುಣಮಟ್ಟದ ರೆಸ್ಟೊರೆಂಟ್‌ಗಳಲ್ಲಿ ಸವಿಯುವ ಭೋಜನ ಕೊಂಚ ಮಟ್ಟಿಗೆ ಕಹಿಯಾಗಲಿದೆ. ದಿನ ಬಳಕೆಯ ಅವಶ್ಯಕ ಸರಕುಗಳಾದ ಬೇಳೆಕಾಳು, ಅಕ್ಕಿ, ಮೊಟ್ಟೆ ಮುಂತಾದವುಗಳ ಬೆಲೆ ತುಟ್ಟಿಯಾಗಲಿಕ್ಕಿಲ್ಲ. ಆದರೆ, ಬ್ರಾಂಡೆಡ್ ಚಿನ್ನಾಭರಣ, ಸಿದ್ಧ ಉಡುಪುಗಳು ತುಟ್ಟಿಯಾಗಲಿವೆ.
ವರಮಾನ ವೃದ್ಧಿಯೇ ಬಜೆಟ್‌ನ ಮೂಲ ಮಂತ್ರವೂ ಆಗಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರದ ವರಮಾನ ವೃದ್ಧಿಯು ಗಮನಾರ್ಹವಾಗಿ ಹೆಚ್ಚುತ್ತಿದೆ. ಮುಂದಿನ ವರ್ಷದಿಂದ ಬಹುತೇಕ ಜಾರಿಗೆ ಬರಲಿರುವ ನೇರ ತೆರಿಗೆ ನೀತಿ ಸಂಹಿತೆ (ಡಿಟಿಸಿ) ಮತ್ತು ಸರಕು - ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಗಳು ಕೇಂದ್ರ ಸರ್ಕಾರದ ವರಮಾನ ಹೆಚ್ಚಿಸಲು ನೆರವಾಗಲಿವೆ.
ಆದರೆ, ಪ್ರಣವ್ ಅವರು ಕೆಲ ನಿರ್ದಿಷ್ಟ ತೆರಿಗೆ ಪ್ರೃಸ್ತಾವಗಳನ್ನು ವಾಪಸ್ ಪಡೆಯಬೇಕೆಂಬ ರೇಷ್ಮೆ ಬೆಳೆಗಾರರು, ಬ್ರಾಂಡೆಡ್ ಸಿದ್ಧ ಉಡುಪು ತಯಾರಕರು ಮತ್ತು ಖಾಸಗಿ ಆಸ್ಪತ್ರೆಗಳ ಹಕ್ಕೊತ್ತಾಯಗಳಿಗೆ ಹೇಗೆ ಸ್ಪಂದಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.