ADVERTISEMENT

ಕಿಂಗ್‌ಫಿಷರ್ ಷೇರು ಮಾರಾಟಕ್ಕಿಲ್ಲ ತಡೆ

ಹೈಕೋರ್ಟ್ ಆದೇಶ; ಮಲ್ಯಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 19:59 IST
Last Updated 2 ಏಪ್ರಿಲ್ 2013, 19:59 IST

ಮುಂಬೈ(ಪಿಟಿಐ): ಕಿಂಗ್‌ಫಿಷರ್ ಏರ್‌ಲೈನ್ಸ್ ಸಾಲಕ್ಕೆ ಭದ್ರತೆಯಾಗಿ ನೀಡಿದ್ದ `ಯುನೈಟೆಡ್ ಸ್ಪಿರಿಟ್' ಷೇರುಗಳನ್ನು ಮಾರಾಟ ಮಾಡದಂತೆ ಬ್ಯಾಂಕ್‌ಗಳಿಗೆ ತಡೆಯೊಡ್ಡಬೇಕೆಂಬ ವಿಜಯ್ ಮಲ್ಯ ಒಡೆತನದ ಕಂಪೆನಿಯ ಮನವಿಯನ್ನು ಮುಂಬೈ ಹೈಕೋರ್ಟ್ ತಳ್ಳಿಹಾಕಿದೆ.

ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಸಾಲ ನೀಡಿದ್ದ ಬ್ಯಾಂಕ್‌ಗಳು, ಯುನೈಟೆಡ್ ಸ್ಪಿರಿಟ್ ಷೇರುಗಳನ್ನು ಮಾರದಂತೆ ಮಧ್ಯಂತರ ತಡೆಯಾಜ್ಞೆ ನೀಡಲು ನ್ಯಾಯಮೂರ್ತಿ ಎಸ್.ಜೆ.ಕಠವಾಲಾ ಅವರ ಪೀಠ ಮಂಗಳವಾರ ನಿರಾಕರಿಸಿತು.

ಯುನೈಟೆಡ್ ಸ್ಪಿರಿಟ್‌ನ ಎಲ್ಲ ಷೇರುಗಳನ್ನೂ ಲಂಡನ್ ಮೂಲದ `ಡಿಯಾಜಿಯೊ' ಕಂಪೆನಿಗೆ ಮಾರಲು ಮುಂದಾಗಿದ್ದ ಹಾಗೂ ಕಿಂಗ್‌ಫಿಷರ್ ಏರ್‌ಲೈನ್ಸ್ ಪುನಶ್ಚೇತನಗೊಳಿಸಬೇಕೆಂದಿದ್ದ ವಿಜಯ್ ಮಲ್ಯ ಅವರಿಗೆ ಇದರಿಂದ ದೊಡ್ಡ ಹಿನ್ನಡೆಯಾದಂತಾಗಿದೆ.

`ಮಲ್ಯ ಒಡೆತನದಲ್ಲಿದ್ದ ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿ     ಲೈಸರ್ ಷೇರುಗಳನ್ನು ಮೊದಲೇ ಮಾರಲಾಗಿತ್ತು. ಹೈಕೋರ್ಟ್ ತಡೆಯಾಜ್ಞೆ ನೀಡದಿರುವುದರಿಂದ ಈ ಮಾರಾಟ ವಹಿವಾಟು ಅಧಿಕೃತವಾಗಿ ಪೂರ್ಣಗೊಂಡಂತಾಗಿದೆ' ಎಂದು  `ಯುಬಿ' ಸಮೂಹದ ವಕೀಲ ಬೀರೇಂದ್ರ ಸರಾಫ್ ಸುದ್ದಿಗಾರರಿಗೆ ತಿಳಿಸಿದರು. ಎಂಸಿಎಫ್, ಯುನೈಟೆಡ್ ಸ್ಪಿರಿಟ್ ಮತ್ತು ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಒಟ್ಟು 23 ಲಕ್ಷ ಷೇರುಗಳನ್ನು 17 ಬ್ಯಾಂಕ್‌ಗಳ ಸಾಲಕ್ಕೆ ಭದ್ರತೆಯಾಗಿ ಒದಗಿಸಲಾಗಿದ್ದಿತು ಎಂದು ವಿವರಿಸಿದರು.

`ಗೋವಾ ವಿಲ್ಲ' ಮತ್ತು ಮುಂಬೈನಲ್ಲಿನ ಕಿಂಗ್‌ಫಿಷರ್ ಭವನವನ್ನೂ ಸಾಲಕ್ಕೆ ಭದ್ರತೆಯಾಗಿ ನೀಡಲಾಗಿದೆ. ಭದ್ರತೆಗಾಗಿ ಬ್ಯಾಂಕ್‌ಗಳಿಗೆ ನೀಡಿರುವ ಷೇರು ಮತ್ತು ಸ್ಥಿರಾಸ್ತಿಗಳ ಒಟ್ಟು ಮೌಲ್ಯ ರೂ. 4000 ಕೋಟಿ ಎಂದು ಸಾಲ ನೀಡುವ ಸಂದರ್ಭದಲ್ಲಿ ಅಂದಾಜು ಮಾಡಲಾಗಿದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT