ADVERTISEMENT

ಚಿನ್ನದ ಇಟಿಎಫ್‌: ಹೆಚ್ಚಿದ ಬಂಡವಾಳ ಹೊರಹರಿವು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 19:30 IST
Last Updated 20 ಅಕ್ಟೋಬರ್ 2017, 19:30 IST

ನವದೆಹಲಿ (ಪಿಟಿಐ): ಕಳೆದ ನಾಲ್ಕು ಹಣಕಾಸು ವರ್ಷಗಳಿಂದಲೂ ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ಹೂಡಿಕೆ ಪ್ರಮಾಣ ತಗ್ಗುತ್ತಲೇ ಇದೆ.

ಹೂಡಿಕೆದಾರರು ಚಿನ್ನದ ಇಟಿಎಫ್‌ಗಿಂತಲೂ ಷೇರುಗಳ ಖರೀದಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಬಂಡವಾಳ ಹೊರಹರಿವು ಹೆಚ್ಚಾಗುತ್ತಲೇ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಹೂಡಿಕೆದಾರರು ಆರ್ಥಿಕ ವರ್ಷದ ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ₹388 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

ADVERTISEMENT

ಇನ್ನೊಂದೆಡೆ, ಇದೇ ಅವಧಿಯಲ್ಲಿ ಷೇರು ಮತ್ತು ಷೇರು ಸಂಬಂಧಿತ ಉಳಿತಾಯ ಯೋಜನೆಗಳಲ್ಲಿ ₹80 ಸಾವಿರ ಕೋಟಿಗೂ ಅಧಿಕ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯಾಗಿದೆ.

ಈ ವರ್ಷ ದೇಶದ ಷೇರುಪೇಟೆಗಳಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ. ಸಾರ್ವಕಾಲಿಕ ದಾಖಲೆ ಮಟ್ಟವನ್ನೂ ತಲುಪುತ್ತಿವೆ. ಷೇರುಗಳ ಮೇಲಿನ ಹೂಡಿಕೆಯಿಂದ ಉತ್ತಮ ಗಳಿಕೆ ಬರುತ್ತಿದೆ ಎನ್ನುವ ಕಾರಣಕ್ಕೆ ಹೂಡಿಕೆದಾರರು ಚಿನ್ನದ ಇಟಿಎಫ್‌ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ ಎಂದು ಕೋಟಕ್‌ ಮ್ಯೂಚುವಲ್ ಫಂಡ್‌ನ ವ್ಯವಸ್ಥಾಪಕ ಅನ್ಶುಲ್‌ ಸೈಗಲ್ ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವರ್ಧನೆಯಿಂದ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಆಮದು ಪ್ರಮಾಣವೂ ಹೆಚ್ಚಿದೆ. ಇದರ ಜತೆಗೆ ನೋಟು ರದ್ದತಿ ಪರಿಣಾಮದಿಂದ ಚಿನ್ನದ ಮೇಲಿನ ಹೂಡಿಕೆ ತಗ್ಗುತ್ತಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.