ADVERTISEMENT

ಜಿಎಸ್‌ಟಿಆರ್‌–2, 3 ಸಲ್ಲಿಕೆ ಅವಧಿ ವಿಸ್ತರಣೆ

‘ಎಂಆರ್‌ಪಿ’ಯಲ್ಲಿ ಜಿಎಸ್‌ಟಿ ಕಡ್ಡಾಯಕ್ಕೆ ಸಲಹೆ

ಪಿಟಿಐ
Published 30 ಅಕ್ಟೋಬರ್ 2017, 19:30 IST
Last Updated 30 ಅಕ್ಟೋಬರ್ 2017, 19:30 IST
ಜಿಎಸ್‌ಟಿಆರ್‌–2, 3 ಸಲ್ಲಿಕೆ ಅವಧಿ ವಿಸ್ತರಣೆ
ಜಿಎಸ್‌ಟಿಆರ್‌–2, 3 ಸಲ್ಲಿಕೆ ಅವಧಿ ವಿಸ್ತರಣೆ   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್‌ಟಿ) ಸಂಬಂಧಿಸಿದಂತೆ ಜುಲೈ ತಿಂಗಳ ‘ಜಿಎಸ್‌ಟಿಆರ್‌–2‘ ಮತ್ತು ‘ಜಿಎಸ್‌ಟಿಆರ್‌–3’ರ ಸಲ್ಲಿಕೆ ಅವಧಿಯನ್ನು ಒಂದು ತಿಂಗಳವರೆಗೆ ವಿಸ್ತರಿಸಲಾಗಿದೆ.

ಖರೀದಿ ಲೆಕ್ಕಪತ್ರ ವಿವರ ಒಳಗೊಂಡಿರುವ ‘ಜಿಎಸ್‌ಟಿಆರ್‌–2’, ಮಾರಾಟ ರಿಟರ್ನ್ಸ್‌ ಆಗಿರುವ ‘ಜಿಎಸ್‌ಟಿಆರ್‌–1’ಗೆ ಹೋಲಿಕೆಯಾಗಬೇಕು.

‘ಜಿಎಸ್‌ಟಿಆರ್‌–2’ ಸಲ್ಲಿಕೆಗೆ ಅಕ್ಟೋಬರ್‌ 31 ಮತ್ತು ‘ಜಿಎಸ್‌ಟಿಆರ್‌–3’ ಸಲ್ಲಿಕೆಗೆ ನವೆಂಬರ್‌ 11 ಕೊನೆಯ ದಿನವಾಗಿತ್ತು. ಈಗ ಈ ಎರಡೂ ರಿಟರ್ನ್ಸ್‌ ಸಲ್ಲಿಕೆಯ ಗಡುವನ್ನು ಕ್ರಮವಾಗಿ ನವೆಂಬರ್‌ 30 ಮತ್ತು ಡಿಸೆಂಬರ್‌ 11ಕ್ಕೆ ವಿಸ್ತರಿಸಲಾಗಿದೆ.

ADVERTISEMENT

ಜುಲೈ ತಿಂಗಳ ‘ಜಿಎಸ್‌ಟಿಆರ್‌–1’ ಸಲ್ಲಿಸಲು ಅಕ್ಟೋಬರ್‌ 1 ಕೊನೆಯ ದಿನವಾಗಿತ್ತು. ಇದುವರೆಗೆ 46.54 ಲಕ್ಷಕ್ಕೂ ಹೆಚ್ಚು ವಹಿವಾಟುದಾರರು ‘ಜಿಎಸ್‌ಟಿಆರ್‌–1’ ಸಲ್ಲಿಸಿದ್ದಾರೆ.

ಅವಧಿ ವಿಸ್ತರಣೆಯಿಂದ ಜುಲೈ ತಿಂಗಳ ‘ಜಿಎಸ್‌ಟಿಆರ್‌–2’ ಸಲ್ಲಿಸಲು 30.81 ಲಕ್ಷ ತೆರಿಗೆದಾರರಿಗೆ ಪ್ರಯೋಜನ ಆಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಜಿಎಸ್‌ಟಿಎನ್‌ನಲ್ಲಿ ಸರಕುಗಳ ದರಪಟ್ಟಿ (ಇನ್‌ವೈಸ್‌) ಹೋಲಿಕೆ ಮಾಡುವಲ್ಲಿ ಸಮಸ್ಯೆಗಳು ಎದುರಾಗಿವೆ ಎಂದು ವಹಿವಾಟುದಾರರು ದೂರು ದಾಖಲಿಸಿದ್ದರು.ಇದು ‘ಜಿಎಸ್‌ಟಿಆರ್‌–2’ ಸಲ್ಲಿಕೆಯ ಮೊದಲ ತಿಂಗಳಾಗಿದೆ.

ಈಗ ಅವಧಿ ವಿಸ್ತರಣೆ ಆಗಿರುವುದರಿಂದ ವಹಿವಾಟುದಾರರಿಗೆ ಅನುಕೂಲವಾಗಲಿದೆ. ಜಿಎಸ್‌ಟಿಎನ್‌ ಜಾಲ ತಾಣದಲ್ಲಿನ ಲೋಪದೋಷಗಳನ್ನು ಸರಿಪಡಿಸಲೂ ಈಗ ಸಾಕಷ್ಟು ಕಾಲಾವಕಾಶವೂ ಸಿಗಲಿದೆ. ಶನಿವಾರದವರೆಗೆ 12 ಲಕ್ಷ ವಹಿವಾಟುದಾರರು ಜುಲೈ ತಿಂಗಳ ‘ಜಿಎಸ್‌ಟಿಆರ್‌–2’ ರಿಟರ್ನ್ಸ್‌ ಸಲ್ಲಿಸಿದ್ದಾರೆ.

‘ಎಂಆರ್‌ಪಿ’ಯಲ್ಲಿ ಜಿಎಸ್‌ಟಿ: ಸರಕುಗಳ ಗರಿಷ್ಠ ಚಿಲ್ಲರೆ ಮಾರಾಟ ದರದಲ್ಲಿ (ಎಂಆರ್‌ಪಿ) ಜಿಎಸ್‌ಟಿಯನ್ನೂ ಸೇರಿಸುವುದು ಕಡ್ಡಾಯಗೊಳಿಸುವಂತೆ ರಾಜ್ಯಗಳ ಹಣಕಾಸು ಸಚಿವರ ಉನ್ನತ ಮಟ್ಟದ ಸಮಿತಿಯು ಜಿಎಸ್‌ಟಿ ಮಂಡಳಿಗೆ ಶಿಫಾರಸು ಮಾಡಿದೆ.

ಕೆಲವು ಚಿಲ್ಲರೆ ಮಾರಾಟಗಾರರು ಸರಕಿನ ಎಂಆರ್‌ಪಿ ಮೇಲೆ ಹೆಚ್ಚುವರಿಯಾಗಿ ಜಿಎಸ್‌ಟಿ ತೆರಿಗೆ ಸೇರಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಗ್ರಾಹಕರು ದೂರು ನೀಡುತ್ತಿದ್ದಾರೆ. ಹೀಗಾಗಿ ಜಿಎಸ್‌ಟಿ ದರವನ್ನೂ ಒಳಗೊಂಡು ಎಂಆರ್‌ಪಿ ನಿಗದಿಮಾಡುವಂತೆ ಸಮಿತಿ ಸಲಹೆ ನೀಡಿದೆ.

ಜಿಎಸ್‌ಟಿ ಒಳಗೊಂಡ ಎಂಆರ್‌ಪಿ ದರ ನಿಗದಿ ಮಾಡಿದ ಬಳಿಕ ಅದಕ್ಕೂ ಹೆಚ್ಚಿನ ಬೆಲೆಗೆ ಸರಕನ್ನು ಮಾರಾಟ ಮಾಡಿದರೆ ಅದನ್ನು ಅಪರಾಧ ಎಂದು ಪರಿಗಣಿಸುವಂತೆ ಕಾನೂನಿನಲ್ಲಿ ಬದಲಾವಣೆ ತರಲು ಅಸ್ಸಾಂ ಹಣಕಾಸು ಸಚಿವ ಹಿಮಂತ್‌ ಬಿಸ್ವಾ ಶರ್ಮಾ ಅವರ ನೇತೃತ್ವದ ಸಚಿವರ ಸಮಿತಿ ಶಿಫಾರಸಿನಲ್ಲಿ ತಿಳಿಸಿದೆ.

ಎಂಆರ್‌ಪಿ ಇರುವ ಪ್ಯಾಕ್‌ ಮಾಡಿದ ಸರಕುಗಳನ್ನು ಮಾರಾಟ ಮಾಡುವ ಎಲ್ಲಾ ಸ್ಥಳಗಳಲ್ಲಿ (ರೆಸ್ಟೋರೆಂಟ್‌, ಮಾಲ್‌ ಇತ್ಯಾದಿ) ಈ ನಿಯಮ ಅನ್ವಯಿಸಲಿದೆ ಎಂದು ಮೂಲಗಳು ತಿಳಿಸಿವೆ.

ಗ್ರಾಹಕರಿಗೆ ಜಿಎಸ್‌ಟಿ ದರ ಒಳಗೊಂಡ ಎಂಆರ್‌ಪಿ ಇರುವ ಇನ್‌ವೈಸ್‌ ನೀಡಬೇಕು. ಆದರೆ, ವರ್ತಕರು ಸರ್ಕಾರಕ್ಕೆ ತೆರಿಗೆ ಪಾವತಿಸುವಾಗ ಜಿಎಸ್‌ಟಿ ಮತ್ತು ಸರಕಿನ ಮಾರಾಟ ದರವನ್ನು ಪ್ರತ್ಯೇಕವಾಗಿ ತೋರಿಸಬೇಕು.

ಶುಲ್ಕ ಇಳಿಕೆ?
ಸದ್ಯ, ರಿಟರ್ನ್‌ ಸಲ್ಲಿಕೆ ವಿಳಂಬವಾದರೆ ಒಂದು ದಿನಕ್ಕೆ ₹100 ಶುಲ್ಕ ವಿಧಿಸಲಾಗುತ್ತಿದೆ. ಅದನ್ನು ₹50ಕ್ಕೆ ತಗ್ಗಿಸುವಂತೆಯೂ ಸಚಿವರ ತಂಡ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.