ADVERTISEMENT

ಜಿಎಸ್‌ಟಿ: ತಿದ್ದುಪಡಿ ಮಸೂದೆ ಮಂಡನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 19:30 IST
Last Updated 22 ಮಾರ್ಚ್ 2011, 19:30 IST

ನವದೆಹಲಿ (ಪಿಟಿಐ): ಸದ್ಯಕ್ಕೆ ಅಸ್ತಿತ್ವದಲ್ಲಿ ಇರುವ ಪರೋಕ್ಷ ತೆರಿಗೆ  ಬದಲಿಗೆ ದೇಶದಾದ್ಯಂತ ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ತರುವುದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರವು ಮಂಗಳವಾರ ಲೋಕಸಭೆಯಲ್ಲಿ  ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಿತು.

ಸರಕು ಮತ್ತು ಸೇವೆಗಳ ಮೇಲೆ ಏಕಕಾಲಕ್ಕೆ ತೆರಿಗೆ ವಿಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡುವ ‘ಜಿಎಸ್‌ಟಿ’ ವ್ಯವಸ್ಥೆಗೆ ಬಿಜೆಪಿ ಆಡಳಿತಾರೂಢ ರಾಜ್ಯಗಳ ವಿರೋಧದ ಮಧ್ಯೆ ಮಸೂದೆ ಮಂಡಿಸಲಾಗಿದೆ. ಈಗ ಈ ಮಸೂದೆಯನ್ನು ಸಂಸತ್ತಿನ ಸ್ಥಾಯಿ ಸಮಿತಿಯು ಪರಿಶೀಲಿಸಲಿದೆ.ಕೇಂದ್ರ ಸರ್ಕಾರಿ ಮಟ್ಟದಲ್ಲಿನ ಬಹುತೇಕ ಪರೋಕ್ಷ ತೆರಿಗೆಗಳಾದ ಅಬಕಾರಿ ಸುಂಕ, ಸೇವಾ ತೆರಿಗೆ ಮತ್ತು ರಾಜ್ಯಗಳಲ್ಲಿನ  ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಹಾಗೂ ಸ್ಥಳೀಯ ತೆರಿಗೆಗಳ ಬದಲಿಗೆ ಏಕರೂಪದ ‘ಜಿಎಸ್‌ಟಿ’ ಜಾರಿಗೆ ಬರಲಿದೆ.

‘ಜಿಎಸ್‌ಟಿ’ಯು ತೆರಿಗೆಗಳ ಹೊರೆ ತಗ್ಗಿಸಲಿದ್ದು, ಸರಕು ಮತ್ತು ಸೇವೆಗಳಿಗೆ ಏಕರೂಪದ ಸಾಮಾನ್ಯ ಮಾರುಕಟ್ಟೆಯನ್ನೂ ಒದಗಿಸಲಿದೆ’ ಎಂದು ಮಸೂದೆ ಮಂಡಿಸುವ ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.ಕಚ್ಚಾ ಪೆಟ್ರೋಲಿಯಂ, ಡೀಸೆಲ್, ಪೆಟ್ರೋಲ್, ವಿಮಾನಗಳ ಇಂಧನ, ನೈಸರ್ಗಿಕ ಅನಿಲ ಮತ್ತು ಮದ್ಯವನ್ನು ‘ಜಿಎಸ್‌ಟಿ’ ವ್ಯಾಪ್ತಿಯಿಂದ ಹೊರಗೆ ಇಡಲಾಗಿದೆ.ಇದೊಂದು ತೆರಿಗೆ ಸುಧಾರಣೆಗಳ ದಿಕ್ಕಿನಲ್ಲಿ ಸಕಾರಾತ್ಮಕ ಬೆಳವಣಿಗೆಯಾಗಿದೆ.

ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲಿಯೇ ಈ ಮಸೂದೆ ಮಂಡಿಸುವ ಭರವಸೆಗೆ  ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಬದ್ಧವಾಗಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ ಎಂದು ತೆರಿಗೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಜಿಎಸ್‌ಟಿ ಮಂಡಳಿ: ಕೇಂದ್ರ ಹಣಕಾಸು ಸಚಿವರ ನೇತೃತ್ವದಲ್ಲಿ ‘ಜಿಎಸ್‌ಟಿ’ ಮಂಡಳಿ ರಚಿಸಲು ಮಸೂದೆಯು ಅವಕಾಶ ಕಲ್ಪಿಸಲಿದೆ.

ತೆರಿಗೆ ದರ ಶಿಫಾರಸು ಮಾಡುವ, ವಿನಾಯ್ತಿ ನೀಡುವ, ಸರಕು ಮತ್ತು ಸೇವೆಗಳ ಗರಿಷ್ಠ ಮಿತಿ ನಿರ್ಧರಿಸುವ ಅಧಿಕಾರವು ಈ ಮಂಡಳಿಗೆ ಇರಲಿದೆ. ರಾಷ್ಟ್ರಪತಿಗಳು ಈ ಮಂಡಳಿ ರಚಿಸಲಿದ್ದು,  ಕಂದಾಯ ಹೊಣೆಗಾರಿಕೆಯ ಹಣಕಾಸು ರಾಜ್ಯ ಸಚಿವ ಮತ್ತು ರಾಜ್ಯಗಳ ಹಣಕಾಸು ಸಚಿವರು ಇಲ್ಲವೇ ರಾಜ್ಯಗಳು ಸೂಚಿಸುವ ಯಾವುದೇ ಸಚಿವ ಮಂಡಳಿಯ ಸದಸ್ಯರಾಗಲಿದ್ದಾರೆ.

‘ಜಿಎಸ್‌ಟಿ’ ಮಂಡಳಿಯು ಸಭೆಯಲ್ಲಿ ಉಪಸ್ಥಿತರಿರುವ ಎಲ್ಲ ಸದಸ್ಯರ ಒಮ್ಮತಾಭಿಪ್ರಾಯದಿಂದಲೇ ಎಲ್ಲ ನಿರ್ಣಯಗಳನ್ನು ಅಂಗೀಕರಿಸಬೇಕಾಗುತ್ತದೆ.ಹೊಸ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯಗಳ ಅಹವಾಲು ಆಲಿಸಲು ‘ಜಿಎಸ್‌ಟಿ’ ವಿವಾದ ಇತ್ಯರ್ಥ ಪ್ರಾಧಿಕಾರ ರಚಿಸಲೂ ಅವಕಾಶ ಇದೆ.  ಈ ಪ್ರಾಧಿಕಾರವು ಒಬ್ಬ ಅಧ್ಯಕ್ಷ ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡಿರುತ್ತದೆ.ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಇಲ್ಲವೇ  ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಅಧ್ಯಕ್ಷರಾಗಬಹುದಾಗಿದ್ದು, ಹಲವು ಕ್ಷೇತ್ರಗಳ ಪರಿಣತರು ಸದಸ್ಯರಾಗಲು ಅವಕಾಶ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.