ADVERTISEMENT

ಟೊಯೊಟಾ: ವಾಹನ ತಯಾರಿಕೆ ಕಡಿತ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2011, 19:30 IST
Last Updated 24 ಏಪ್ರಿಲ್ 2011, 19:30 IST

ನವದೆಹಲಿ (ಪಿಟಿಐ): ಜಪಾನ್ ಮೂಲದ ವಾಹನ ತಯಾರಿಕಾ ಕಂಪೆನಿ ಟೊಯೊಟಾ, ಭಾರತದಲ್ಲಿ ತನ್ನ ವಾಹನ ತಯಾರಿಕೆಯನ್ನು ಅಲ್ಪಾವಧಿಗೆ ಶೇ 70ರಷ್ಟು ತಗ್ಗಿಸುವುದಾಗಿ ಹೇಳಿದೆ. 

ಇತ್ತೀಚೆಗೆ ಜಪಾನ್‌ನಲ್ಲಿ ಸಂಭವಿಸಿದ ಭೀಕರ ಸುನಾಮಿ ಮತ್ತು ಭೂಕಂಪದಿಂದ, ಭಾರತಕ್ಕೆ ವಾಹನಗಳ ಬಿಡಿಭಾಗಗಗಳ ಪೂರೈಕೆಗೆ ಅಡಚಣೆ ಉಂಟಾಗಿದೆ. ಇದು ತಯಾರಿಕೆಯ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ  ಇದೇ ಏಪ್ರಿಲ್ 25ರಿಂದ ಜೂನ್ 4ರ ವರೆಗೆ ವಾಹನಗಳ ತಯಾರಿಕೆಯನ್ನು ಗಣನೀಯವಾಗಿ ತಗ್ಗಿಸಲಾಗುವುದು ಎಂದು ಕಂಪೆನಿಯ ಅಧಿಕೃತ ಪ್ರಕಟಣೆ ತಿಳಿಸಿದೆ.

ಇದರಿಂದ ಟೊಯೊಟಾ ತಿಂಗಳಿಗೆ 7 ಸಾವಿರ ವಾಹನಗಳ ತಯಾರಿಕೆ ನಷ್ಟ ಹಾಗೂ ` 490 ಕೋಟಿ ವರಮಾನ ಕೊರತೆ ಎದುರಿಸಲಿದೆ.

‘ಈ ತಯಾರಿಕಾ ಹೊಂದಾಣಿಕೆ ಅಲ್ಪಾವಧಿಗೆ ಮಾತ್ರ ಸೀಮಿತವಾಗಿದೆ. ಜಪಾನ್‌ನಲ್ಲಿ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಮೊದಲಿನಂತೆ ತಯಾರಿಕಾ ಘಟಕಗಳು ಕಾರ್ಯನಿರ್ವಹಿಸಲಿವೆ’ ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ (ಟಿಕೆಎಂ) ಮಾರುಕಟ್ಟೆ ವಿಭಾಗದ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ತಿಳಿಸಿದ್ದಾರೆ.

‘ಈ ಹೊಂದಾಣಿಕೆಯಡಿ ಬೆಂಗಳೂರಿನಲ್ಲಿರುವ ಟೊಯೊಟಾ ತಯಾರಿಕಾ ಘಟಕಗಳಲ್ಲಿ ಮುಂದಿನ ಒಂದೂವರೆ ತಿಂಗಳ ಅವಧಿಗೆ  ಸೋಮವಾರ ಮತ್ತು ಶುಕ್ರವಾರ ತಯಾರಿಕೆ ಕೆಲಸಗಳು ನಡೆಯುವುದಿಲ್ಲ.
ಕಂಪೆನಿಯು ಈ ಅವಧಿಯಲ್ಲಿ ತಿಂಗಳಿಗೆ 11 ಸಾವಿರ ವಾಹನಗಳ ತಯಾರಿಕೆ ಗುರಿಯನ್ನು ಮಾತ್ರ ಹೊಂದಿದೆ. ವಾಹನಗಳ ಎಂಜಿನ್ ಮತ್ತಿತರೆ ಬಿಡಿಭಾಗಗಳನ್ನು ಕಂಪೆನಿಯು ಜಪಾನಿನಿಂದ ಆಮದು ಮಾಡಿಕೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.