ಬೆಂಗಳೂರು: `ಮೂಲದಲ್ಲಿಯೇ ತೆರಿಗೆ ಕಡಿತ'(ಟಿಡಿಎಸ್) ವ್ಯವಸ್ಥೆಯಿಂದ ಆದಾಯ ತೆರಿಗೆ ಇಲಾಖೆಗೆ ದೊಡ್ಡ ಮೊತ್ತದ ಆದಾಯ ಬರುತ್ತಿದೆ. 2012-13ರಲ್ಲಿ ದೇಶದಲ್ಲಿ ಸಂಗ್ರಹವಾದ ರೂ.5.58 ಲಕ್ಷ ಕೋಟಿ ಆದಾಯ ತೆರಿಗೆಯಲ್ಲಿ ಟಿಡಿಎಸ್‌ನಿಂದಲೇ ರೂ.2.2 ಲಕ್ಷ ಕೋಟಿ ತೆರಿಗೆ ಬಂದಿದೆ' ಎಂದು ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ(ಬೆಂಗಳೂರು-1) ಕೆ.ಸತ್ಯನಾರಾಯಣ ತಿಳಿಸಿದರು.
ಆದಾಯ ತೆರಿಗೆ ಇಲಾಖೆ ಆಶ್ರಯದಲ್ಲಿ ಇಲಾಖೆಯ ಸಭಾಂಗಣದಲ್ಲಿ ಉಪನೋಂದಣಾಧಿಕಾರಿಗಳಿಗಾಗಿ ಮಂಗಳವಾರ ಆಯೋಜಿಸಿದ್ದ `ಸ್ಥಿರಾಸ್ತಿ ಮಾರಾಟದ ವೇಳೆ ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್) ಅವಕಾಶ' ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
`ಕರ್ನಾಟಕ ಹಾಗೂ ಗೋವಾ ವಲಯದಲ್ಲಿ ಸಂಗ್ರಹವಾದ ರೂ.50,000 ಕೋಟಿ ಆದಾಯ ತೆರಿಗೆಯಲ್ಲಿ `ಟಿಡಿಎಸ್'ನಿಂದಲೇ ರೂ.24,000 ಕೋಟಿ ಸಂಗ್ರಹವಾಗಿದೆ. ದೇಶದಲ್ಲಿ 2013-14ನೇ ಹಣಕಾಸು ವರ್ಷದಲ್ಲಿ ರೂ.6.6 ಲಕ್ಷ ಕೋಟಿ ಆದಾಯ ತೆರಿಗೆ ಸಂಗ್ರಹ ಗುರಿ ಇರಿಸಿಕೊಳ್ಳಲಾಗಿದೆ' ಎಂದು ಅವರು ತಿಳಿಸಿದರು.
`ಕಳೆದ ಎರಡು ಮೂರು ದಶಕಗಳಲ್ಲಿ ಆಸ್ತಿ ಬೇಡಿಕೆ ಗಣನೀಯವಾಗಿ ಹೆಚ್ಚಿದೆ. ರಿಯಲ್ ಎಸ್ಟೇಟ್ ಉದ್ಯಮ ಹಿಗ್ಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಜನರ ಹಿತಾಸಕ್ತಿಯನ್ನು ಕಾಪಾಡುವ ಕೆಲಸ ಆಗಬೇಕಿದೆ. ಆಸ್ತಿ ಮಾರಾಟ ಚಟುವಟಿಕೆಯಿಂದ ಸರ್ಕಾರಕ್ಕೆ ಒಂದು ಬಾರಿ ಆದಾಯ ಬರುತ್ತಿದೆ. ಸರ್ಕಾರ ರಿಯಲ್ ಎಸ್ಟೇಟ್ ನಿಯಂತ್ರಕರನ್ನು ನೇಮಕ ಮಾಡಿದೆ' ಎಂದು ಅವರು ಮಾಹಿತಿ ನೀಡಿದರು.
ಆದಾಯ ತೆರಿಗೆಯ ಮಹಾನಿರ್ದೇಶಕ ಎಸ್.ರವಿ ಮಾತನಾಡಿ, `ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಲೆಕ್ಕಕ್ಕೆ ಸಿಗದ ಭಾರಿ ಮೊತ್ತ ಹೂಡಿಕೆಯಾಗುತ್ತಿದೆ. ಈ ಮೂಲಕ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲಾಗುತ್ತಿದೆ. ಇದಕ್ಕೆಲ್ಲ `ಟಿಡಿಎಸ್' ಮೂಲಕ ನಿಯಂತ್ರಣ ಹಾಕಲಾಗುತ್ತಿದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.