ADVERTISEMENT

ದೂಳು ನಿಯಂತ್ರಣಕ್ಕೆ ಹೊಸ ವಿಧಾನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST

ಬಳ್ಳಾರಿ: ಗಣಿ ಪ್ರದೇಶಗಳಲ್ಲಿ ಹೊರಹೊಮ್ಮುವ ದೂಳು ನಿಯಂತ್ರಿಸಲು ರಸ್ತೆಗಳಿಗೆ ಟ್ಯಾಂಕರ್ ಬಳಸಿ ನೀರು ಸಿಂಪಡಿಸುವ ವಿಧಾನ ಅನುಸರಿಸುತ್ತಿದ್ದ ಗಣಿ ಮಾಲೀಕರು, ಇದೀಗ ವಿಭಿನ್ನ ರೀತಿಯಲ್ಲಿ ದೂಳಿನಿಂದ ಮುಕ್ತಿ ದೊರಕಿಸಲು ಮುಂದಾಗಿದ್ದಾರೆ.

ಜಿಲ್ಲೆಯ ಗಣಿಗಳಲ್ಲಿ ಹಾಗೂ ಅದಿರು ಸಾಗಣೆ ಲಾರಿಗಳು ಸಂಚರಿಸುವ ರಸ್ತೆಗಳಲ್ಲಿ ನಿತ್ಯವೂ ಬೆಳಿಗ್ಗೆಯಿಂದ ಸಂಜೆಯವರೆಗೆ ಆರು ಚಕ್ರದ ಲಾರಿಗಳಲ್ಲಿ ನೀರಿನ ಟ್ಯಾಂಕ್, ಅದರ ಕೆಳಗೊಂದು ಪೈಪ್ ಅಳವಡಿಸಿ, ಅದಕ್ಕೆ ರಂಧ್ರ ಮಾಡಿ ರಸ್ತೆಗೆಲ್ಲಾ ನೀರು ಚಿಮುಕಿಸುತ್ತಿದ್ದ  ವಿಧಾನ ಜಾರಿಯಲ್ಲಿದೆ. ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗುತ್ತದೆ. ಆದರೂ ಗಾಳಿ ಮೂಲಕ ಹರಡುವ ದೂಳನ್ನು ನಿಯಂತ್ರಿಸಲು ಇದರಿಂದ ಸಾಧ್ಯವಾಗುವುದಿಲ್ಲ ಎಂಬುದನ್ನು ಮನಗಂಡಿರುವ ಸಂಡೂರಿನ ಬಿ.ಕುಮಾರಗೌಡ ಮೈನ್ಸ್ ಕಂಪೆನಿ ಹೈಟೆಕ್ ವಾಹನ ಖರೀದಿಸಿದೆ.

ಲಾರಿಗೆ `ಏರ್‌ಬೋರ್ನ್ ಡಸ್ಟ್ ಸಪ್ರೆಷನ್ ಸಿಸ್ಟಮ್' ಹೆಸರಿನ ನೀರು ಸಿಂಪಡಿಸುವ ಸಲಕರಣೆ ಹಾಗೂ ಜನರೇಟರ್  ಅಳವಡಿಸಲಾಗಿದ್ದು, ನೆಲದಿಂದ 4 ಮೀಟರ್ ಎತ್ತರದವರೆಗೆ ಪಸರಿಸುವ ದೂಳನ್ನು ಈ ಯಂತ್ರ ನಿಯಂತ್ರಿಸುತ್ತದೆ.

ADVERTISEMENT

ರಿಮೋಟ್ ಕಂಟ್ರೋಲ್ ಸೌಲಭ್ಯದೊಂದಿಗೆ ಪ್ರತಿ ನಿಮಿಷಕ್ಕೆ ಐದು ಲೀಟರ್ ನೀರು ಚಿಮುಕಿಸುತ್ತ ಮುಂದಕ್ಕೆ ಸಾಗುವ ಈ ಲಾರಿ, ರಸ್ತೆ ಮತ್ತು ಗಾಳಿಯಲ್ಲಿನ ದೂಳನ್ನು ಕಡಿಮೆ ಮಾಡುತ್ತದೆ. 

ಯಂತ್ರ, ಜನರೇಟರ್ ಮತ್ತು ವಾಹನಕ್ಕೆ ಒಟ್ಟು 40 ಲಕ್ಷ ರೂಪಾಯಿ ವೆಚ್ಚವಾಗಿದ್ದು, ಗೋವಾದ ಗಣಿಗಳಲ್ಲಿ ಮತ್ತು ಅದಿರು ಸಾಗಣೆ ಮಾರ್ಗದಲ್ಲಿ ಬಳಕೆಯಾಗುತ್ತಿರುವ ಈ ಮಾದರಿಯ ವಾಹನ ಇದೇ ಮೊದಲ ಬಾರಿಗೆ ಜಿಲ್ಲೆಗೆ ಕಾಲಿರಿಸಿದೆ ಎಂದು  ಕಂಪೆನಿಯ ವ್ಯವಸ್ಥಾಪಕ ಶ್ರೀನಿವಾಸರಾವ್  `ಪ್ರಜಾವಾಣಿ' ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.