ರಾಮೋಹಳ್ಳಿಯ ಮುಕ್ತಿ ನಾಗ ದೇವಾಲಯದಲ್ಲಿ ‘ಶ್ರೀ ನಾಗಶಕ್ತಿ’ ಚಿತ್ರದ ಆಡಿಯೋ ಸೀಡಿ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿತ್ತು.
ಕೋಡಿಮಠದ ಯೋಗೀಶ್ವರ ಋಷಿಕುಮಾರ ಸ್ವಾಮೀಜಿ, ನರೇಂದ್ರ ಬಾಬು ಶರ್ಮ ಮತ್ತು ಮುಕ್ತಿ ನಾಗ ದೇವಾಲಯದ ಧರ್ಮಾಧಿಕಾರಿ ಸುಬ್ರಹ್ಮಣ್ಯ ಶಾಸ್ತ್ರಿ ಸೀಡಿ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ‘2011ರ ವೇಳೆಗೆ ವಿದೇಶದಿಂದ ಕನ್ನಡ ಚಿತ್ರರಂಗಕ್ಕೆ ಹೆಚ್ಚು ಹಣ ಹರಿದು ಬರಲಿದೆ’ ಎಂದು ಭವಿಷ್ಯ ನುಡಿದವರು ಯೋಗೀಶ್ವರ ಸಾಮೀಜಿ. ‘ಭಕ್ತಿ ಪ್ರಧಾನ ಸಿನಿಮಾಗಳ ನಿರ್ಮಾಣ ಇತ್ತೀಚೆಗೆ ಕಡಿಮೆಯಾಗಿದೆ. ಕನ್ನಡ ಚಿತ್ರರಂಗ ಒಳ್ಳೆಯ ಚಿತ್ರ ನಿರ್ಮಿಸುವುದರತ್ತ ಗಮನ ಹರಿಸಬೇಕು’ ಎಂದರು ನರೇದ್ರ ಶರ್ಮ.
‘ಈ ದೇವಾಲಯಕ್ಕೆ ಬಂದವರು ಯಾರೂ ಬರಿಗೈಲಿ ಹಿಂತಿರುಗಿಲ್ಲ’ ಎಂದು ನಕ್ಕರು ಸುಬ್ರಹ್ಮಣ್ಯ ಶಾಸ್ತ್ರಿ. ತಾವು ಆಂಧ್ರ ಪ್ರದೇಶದವರಾದರೂ ಕರ್ನಾಟಕದ ಮಣ್ಣಿನ ಋಣ ತಮ್ಮ ಮೇಲಿದೆ ಎಂದು ಮಾತು ಆರಂಭಿಸಿದ ನಿರ್ದೇಶಕ ಸಾಯಿ ಪ್ರಕಾಶ್- ‘ಚಿತ್ರವನ್ನು 70 ದಿನಗಳಲ್ಲಿ ಮುಗಿಸಿರುವೆ. ಸೋತರೂ ಗೆದ್ದರೂ ನಾನು ಯಾರನ್ನೂ ನಿಂದಿಸುವುದಿಲ್ಲ’ ಎಂದು ಮಾತು ಮುಗಿಸಿದರು.
ಚಿತ್ರದ ಆಡಿಯೋ ಯಶಸ್ಸಾಗುವ ಭರವಸೆ ವ್ಯಕ್ತಪಡಿಸಿದರು ನಟಿ-ನಿರ್ಮಾಪಕಿ ಚಂದ್ರಿಕಾ. ಸಮಾರಂಭದಲ್ಲಿ ಶ್ರುತಿ, ರಾಮ್‌ಕುಮಾರ್, ಸಂಗೀತ ನಿರ್ದೇಶಕ ಶ್ರೀ ಗಣೇಶ್, ನಿರ್ಮಾಪಕರಾದ ವಿಶ್ವನಾಥ್, ಎನ್.ಎಂ.ಸುರೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.