ADVERTISEMENT

ನೇರ ತೆರಿಗೆ: ಗುರಿ ಅಸಾಧ್ಯ?

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ನವದೆಹಲಿ(ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ನೇರ ತೆರಿಗೆ ಮೂಲಕ ಸರ್ಕಾರ ಒಟ್ಟು ರೂ 5.32 ಲಕ್ಷ ಕೋಟಿ ವರಮಾನ ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, ಆರ್ಥಿಕ ವೃದ್ಧಿ ದರ (ಜಿಡಿಪಿ) ಮತ್ತು ಕೈಗಾರಿಕೆ ಉತ್ಪಾದನೆ ಗಣನೀಯ ಕುಸಿತ ಕಂಡ  ಹಿನ್ನೆಲೆಯಲ್ಲಿ ಈ ಉದ್ದೇಶಿತ ಗುರಿ ತಲುಪುದು ಅಸಾಧ್ಯ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಕಳೆದ 10 ತಿಂಗಳಲ್ಲಿ ನೇರ ತೆರಿಗೆ ಸಂಗ್ರಹ ರೂ 3.17 ಲಕ್ಷ ಕೋಟಿಗಳಷ್ಟಾಗಿದ್ದು,  ವಾರ್ಷಿಕವಾಗಿ ಶೇ 9ರಷ್ಟು ಪ್ರಗತಿ ಕಂಡಿದೆ. ಆದಾಯ ತರಿಗೆ ಮತ್ತು ಕಾರ್ಪೊರೇಟ್ ತೆರಿಗೆ ಸಂಗ್ರಹ ಹೆಚ್ಚಿದರೂ, ಇತರೆ ತೆರಿಗೆ ಮೂಲಗಳಿಂದ ಬರುವ ವರಮಾನ ಕುಂಠಿತಗೊಂಡಿದೆ.

ಏಪ್ರಿಲ್-ಜನವರಿ ಅವಧಿಯಲ್ಲಿ ಕಾರ್ಪೊರೇಟ್ ತೆರಿಗೆ ಶೇ 12ರಷ್ಟು ಹೆಚ್ಚಿದ್ದು ರೂ2.85 ಲಕ್ಷ ಕೋಟಿಗಳಷ್ಟಾಗಿದೆ. ಆದಾಯ ತೆರಿಗೆ ಸಂಗ್ರಹ ರೂ1.38 ಲಕ್ಷ ಕೋಟಿಗಳಷ್ಟಾಗಿದೆ.  ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು  ಬಡ್ಡಿ ದರ ಹೆಚ್ಚಳದಿಂದ ಕೈಗಾರಿಕೆ ಪ್ರಗತಿ ತೀವ್ರವಾಗಿ ಕುಸಿದಿರುವುದು  ನೇರ ತೆರಿಗೆ ಸಂಗ್ರಹ ಕುಸಿಯಲು ಮುಖ್ಯ ಕಾರಣ ಎಂದು ಸಚಿವಾಲಯ ಹೇಳಿದೆ.

ಮೂಲಸೌರ್ಕ ಪ್ರಗತಿ ಕುಂಠಿತ:  ಕಚ್ಚಾ ತೈಲ, ಉಕ್ಕು ಮತ್ತು ನೈಸರ್ಗಿಕ ಅನಿಲದ ಕೊರತೆಯಿಂದ ದೇಶದ ಎಂಟು ಮೂಲಸೌಕರ್ಯ ರಂಗಗಳ ಪ್ರಗತಿ  ಕಳೆದ ಡಿಸೆಂಬರ್ ತಿಂಗಳಲ್ಲಿ  ಶೇ 3.1ಕ್ಕೆ ಇಳಿಕೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದಾಖಲಾಗಿರುವ  ಎರಡನೆಯ ಕನಿಷ್ಠ ಪ್ರಗತಿ ಇದಾಗಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.