ADVERTISEMENT

ನ್ಯಾಯಾಂಗ ನಿಂದನೆ: ವಿತ್ತ ಇಲಾಖೆಗೆ ನೋಟಿಸ್

ಅಡಿಕೆ ಬೆಳೆಗಾರರ ಸಾಲ ಮನ್ನಾ; ಅನುಷ್ಠಾನ ವಿಳಂಬ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST
ನ್ಯಾಯಾಂಗ ನಿಂದನೆ: ವಿತ್ತ ಇಲಾಖೆಗೆ ನೋಟಿಸ್
ನ್ಯಾಯಾಂಗ ನಿಂದನೆ: ವಿತ್ತ ಇಲಾಖೆಗೆ ನೋಟಿಸ್   

ಬೆಂಗಳೂರು:ಅಡಿಕೆ ಬೆಳೆಗಾರರ ಸಾಲ ಮನ್ನಾ ಕುರಿತು ಹೈಕೋರ್ಟ್ ನೀಡಿದ ನಿರ್ದೇಶನ ಪಾಲಿಸಲು ವಿಫಲವಾಗಿದೆ ಎಂದು ಆರೋಪಿಸಿ, ಕೇಂದ್ರ ಹಣಕಾಸು ಸಚಿವಾಲಯದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿದೆ. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಕೆ. ಪಾಟೀಲ ನೇತೃತ್ವದ ವಿಭಾಗೀಯ ಪೀಠ, ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಆರ್.ಎಸ್. ಗುಜ್ರಾಲ್ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೆ ಶುಕ್ರವಾರ ಆದೇಶಿಸಿದೆ.

ಅಡಿಕೆ ಬೆಳೆಗಾರರ ಸಮಸ್ಯೆ ಕುರಿತು ಅಧ್ಯಯನ ನಡೆಸಿದ ಕೃಷಿ ತಜ್ಞ ಡಾ. ಗೋರಖ್ ಸಿಂಗ್ ನೇತೃತ್ವದ ಸಮಿತಿ 2009ರಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ಬೆಲೆ ಕುಸಿತ, ಹಳದಿ ಎಲೆ ರೋಗ ಮುಂತಾದ ಸಮಸ್ಯೆಗಳಿಂದ ಕಂಗೆಟ್ಟಿರುವ ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡಿ, ಹೊಸ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಸಮಿತಿಯ ವರದಿಯನ್ನು ಅನುಷ್ಠಾನಕ್ಕೆ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ನಿವಾಸಿ ಸಚಿನ್ ಮೀಗಾ ಮತ್ತು ಇತರರು ಅರ್ಜಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠ, ಸಮಿತಿ ನೀಡಿರುವ ವರದಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮೂರು ತಿಂಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ 2012ರ ಸೆಪ್ಟೆಂಬರ್ 25ರಂದು ಆದೇಶಿಸಿ, ಅರ್ಜಿ ಇತ್ಯರ್ಥಪಡಿಸಿತ್ತು. ಆದೇಶದ ಅನುಸಾರ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಸಚಿನ್ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆಯನ್ನು ಮುಂದೂಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.