ADVERTISEMENT

ಪುಸ್ತಕ ಮಾರಾಟದಿಂದ ವಾಲ್‌ಮಾರ್ಟ್‌ವರೆಗೆ...

​ಕೇಶವ ಜಿ.ಝಿಂಗಾಡೆ
Published 15 ಮೇ 2018, 19:30 IST
Last Updated 15 ಮೇ 2018, 19:30 IST
ಫ್ಲಿಪ್‌ಕಾರ್ಟ್‌ನ ಸಹ ಸ್ಥಾಪಕರಾದ ಬಿನ್ನಿ ಬನ್ಸಲ್‌ ಮತ್ತು ಸಚಿನ್ ಬನ್ಸಲ್‌
ಫ್ಲಿಪ್‌ಕಾರ್ಟ್‌ನ ಸಹ ಸ್ಥಾಪಕರಾದ ಬಿನ್ನಿ ಬನ್ಸಲ್‌ ಮತ್ತು ಸಚಿನ್ ಬನ್ಸಲ್‌   

ಐಐಟಿ ದೆಹಲಿಯಲ್ಲಿ ಸಹಪಾಠಿಗಳಾಗಿದ್ದ ಸಚಿನ್‌ ಮತ್ತು ಬಿನ್ನಿ ಬನ್ಸಲ್‌ ಜತೆಯಾಗಿ ಬೆಂಗಳೂರಿನಲ್ಲಿ ಆರಂಭಿಸಿದ್ದ ಪುಸ್ತಕಗಳ ಆನ್‌ಲೈನ್‌ ವಹಿವಾಟು ಕಳೆದ ಒಂದು ದಶಕದಲ್ಲಿ ಹೆಮ್ಮರವಾಗಿ ಬೆಳೆದಿದೆ. 2005ರಲ್ಲಿ ಐಐಟಿಯಿಂದ ಹೊರ ಬೀಳುತ್ತಿದ್ದಂತೆ ಬೆಂಗಳೂರಿಗೆ ಬಂದಿದ್ದ ಇವರಿಬ್ಬರು 2007ರಲ್ಲಿ ಇ–ಕಾಮರ್ಸ್‌ ವಹಿವಾಟಿಗೆ ಚಾಲನೆ ನೀಡಿದ್ದರು.

ಬೆಂಗಳೂರಿನಲ್ಲಿ ಇಬ್ಬರೂ ಪ್ರತಿ ದಿನ ಬೈಕ್‌ನಲ್ಲಿ 40 ರಿಂದ 50 ಕಿ.ಮೀ ದೂರ ಸಂಚರಿಸಿ ವಿವಿಧ ವಿತರಕರಿಂದ ಪುಸ್ತಕಗಳನ್ನು ಸಂಗ್ರಹಿಸಿ ತರುತ್ತಿದ್ದರು. ಆನಂತರ ಅವುಗಳನ್ನು ಅಚ್ಚುಕಟ್ಟಾಗಿ ಪ್ಯಾಕ್‌ ಮಾಡಿ  ಆನ್‌ಲೈನ್‌ನಲ್ಲಿ ಬೇಡಿಕೆ ಇಟ್ಟಿದ್ದ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದ್ದರು. ಕ್ರಮೇಣ ಒಂದೊಂದೇ ಸರಕನ್ನು ಸೇರ್ಪಡೆ ಮಾಡುತ್ತ ಹೋದರು. ಹೂಡಿಕೆದಾರರೂ ಈ ವಹಿವಾಟಿನಲ್ಲಿ ಹಣ ತೊಡಗಿಸಲು ಮುಂದೆ ಬಂದರು. 2016ರ ವೇಳೆಗೆ ಸಂಸ್ಥೆಯ ನೋಂದಾಯಿತ ಗ್ರಾಹಕರ ಸಂಖ್ಯೆ 10 ಕೋಟಿ ದಾಟಿತ್ತು.

ದೇಶದ ಅತಿದೊಡ್ಡ ಇಂಟರ್‌ನೆಟ್‌ ಸ್ಟಾರ್ಟ್‌ಅಪ್‌ ಆಗಿರುವ ಫ್ಲಿಪ್‌ಕಾರ್ಟ್, ಈಗ ಅಮೆರಿಕದ ರಿಟೇಲ್‌ ದೈತ್ಯ ಸಂಸ್ಥೆ ವಾಲ್‌ಮಾರ್ಟ್‌ನ ಒಡೆತನಕ್ಕೆ ಹೋಗಲಿದೆ. ಕೇವಲ ₹ 4 ಲಕ್ಷ  ಬಂಡವಾಳ ಹೂಡಿಕೆ ಮಾಡಿ ಆರಂಭಿಸಿದ್ದ ಸಂಸ್ಥೆಯ ಮಾರುಕಟ್ಟೆ ಮೌಲ್ಯ ಈಗ ₹ 1.47 ಲಕ್ಷ ಕೋಟಿಗಳಷ್ಟಾಗಿದೆ.

ADVERTISEMENT

ಸ್ವಾಧೀನ ಒಪ್ಪಂದದ ಮಹತ್ವ
ದೇಶಿ ಸ್ಟಾರ್ಟ್‌ಅಪ್‌ ಮತ್ತು ಹೊಸ ಬಂಡವಾಳ ಹೂಡಿಕೆದಾರರ ಪಾಲಿಗೆ ಈ ಒಪ್ಪಂದವು ಗೆಲುವಿನ ಕ್ಷಣವಾಗಿದೆ. ಫ್ಲಿಪ್‌ಕಾರ್ಟ್‌ನ ಪಾಲುದಾರರ ಪಾಲಿಗೂ ಭಾರಿ ಲಾಭದಾಯಕವಾಗಿದ್ದು ಹೊಸ ದಿಕ್ಕು ತೋರಲಿದೆ. ಭಾರತದಲ್ಲಿನ ಇ–ಕಾಮರ್ಸ್‌ ವಹಿವಾಟಿಗೆ ಹೊಸ ವ್ಯಾಖ್ಯಾನ ನೀಡಲಿದೆ.

ಇ–ಕಾಮರ್ಸ್‌ ವಹಿವಾಟು ಭಾರತೀಯರ ಸರಕುಗಳ ಖರೀದಿ ಪ್ರವೃತ್ತಿಯಲ್ಲಿ ಆಮೂಲಾಗ್ರ ಬದಲಾವಣೆ ತಂದಿರುವುದು ನಿಜ. ಗ್ರಾಹಕರನ್ನು ಸೆಳೆಯಲು ಈ ವಹಿವಾಟು ರಿಯಾಯ್ತಿ ಕೊಡುಗೆಗಳನ್ನೇ ಹೆಚ್ಚಾಗಿ ಅವಲಂಬಿಸಿದೆ. ಇದೇ ಕಾರಣಕ್ಕೆ ಫ್ಲಿಪ್‌ಕಾರ್ಟ್‌ ₹ 24 ಸಾವಿರ ಕೋಟಿಗಳಷ್ಟು ನಷ್ಟದಲ್ಲಿ ಇದೆ ಎಂದು ಅಂದಾಜಿಸಲಾಗಿದೆ.

ದೇಶಿ ಮಾರುಕಟ್ಟೆ ಪ್ರವೇಶಕ್ಕೆ ವಾಲ್‌ಮಾರ್ಟ್‌ ಬಹಳ ಹಿಂದಿನಿಂದಲೂ ಪ್ರಯತ್ನಿಸುತ್ತಲೇ ಬಂದಿದೆ. ಇದಕ್ಕೂ ಮೊದಲು ಭಾರ್ತಿ ಸಮೂಹದ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಆನಂತರ ಅದರಿಂದ ಹೊರ ಬಂದಿತ್ತು. ಬಹು ಬ್ರ್ಯಾಂಡ್‌ನ ರಿಟೇಲ್‌ ಕ್ಷೇತ್ರದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮೇಲಿನ ನಿರ್ಬಂಧದ ಕಾರಣಕ್ಕೆ ಕ್ಯಾಷ್‌ ಆ್ಯಂಡ್‌ ಕ್ಯಾರಿ ವಹಿವಾಟಿಗೆ ಮಾತ್ರ ಸೀಮಿತಗೊಂಡಿದೆ. ಸ್ವದೇಶದಲ್ಲಿ ಅಮೆಜಾನ್‌ ಸಂಸ್ಥೆಯ ತೀವ್ರ ಪೈಪೋಟಿ ಎದುರಿಸುತ್ತಿದ್ದ ವಾಲ್‌ಮಾರ್ಟ್‌, ಫ್ಲಿಪ್‌ಕಾರ್ಟ್‌ ಮೂಲಕ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕೆಲ ವ್ಯಾಪಾರಿ ಸಂಘಟನೆಗಳು ಮತ್ತು ಸ್ವದೇಶಿ ಜಾಗರಣ್‌ ಮಂಚ್‌, ಈ ಹಿಂಬಾಗಿಲ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿವೆ.

ವಾಲ್‌ಮಾರ್ಟ್‌ಗೆ ಏನು ಲಾಭ?
ವಾಲ್‌ಮಾರ್ಟ್‌ನ ಇತಿಹಾಸದಲ್ಲಿಯೇ ಇದೊಂದು ಅತಿದೊಡ್ಡ ಸ್ವಾಧೀನ ಪ್ರಕ್ರಿಯೆಯಾಗಿದೆ. ಭಾರತದ ರಿಟೇಲ್‌ ವಹಿವಾಟಿನಲ್ಲಿ ಭಾರಿ ಮುನ್ನಡೆ ಸಾಧಿಸಲು ನೆರವಾಗಲಿದೆ. ತನ್ನ ಪ್ರತಿಸ್ಪರ್ಧಿ ಅಮೆಜಾನ್‌ಗೆ ವಿಶ್ವದಾದ್ಯಂತ ತೀವ್ರ ಸ್ಪರ್ಧೆ ಒಡ್ಡಲಿದೆ. ದೇಶಿ ಇ–ಕಾಮರ್ಸ್‌ ವಹಿವಾಟು ಇನ್ನು ಮುಂದೆ ಅಮೆರಿಕದ ಎರಡು ದೈತ್ಯ ಸಂಸ್ಥೆಗಳ ಪಾಲಾಗಲಿದೆ. ವಾಲ್‌ಮಾರ್ಟ್‌ನ ಜಾಗತಿಕ ಇ–ಕಾಮರ್ಸ್‌ ಮಹತ್ವಾಕಾಂಕ್ಷೆಗೆ ಫ್ಲಿಪ್‌ಕಾರ್ಟ್‌ ಸ್ವಾಧೀನವು ನೀರೆರೆಯಲಿದೆ.

ಅಮೆಜಾನ್‌ಗೆ ಏನು ಲಾಭ?
ವಿಶ್ವದ ಅತಿದೊಡ್ಡ ಆನ್‌ಲೈನ್‌ ರಿಟೇಲ್‌ ಸಂಸ್ಥೆಯಾಗಿರುವ ಅಮೆಜಾನ್‌ ಕೂಡ ಫ್ಲಿಪ್‌ಕಾರ್ಟ್‌ ಖರೀದಿಗೆ ಪೈಪೋಟಿ ನಡೆಸಿತ್ತು.  ಭಾರತದಲ್ಲಿ ವಾಲ್‌ಮಾರ್ಟ್‌ನ ಸ್ಪರ್ಧೆ ಎದುರಿಸಬೇಕಾಗಿ ಬರಬಹುದು ಎನ್ನುವ  ಈ ಮೊದಲಿನ ಅದರ ನಿರೀಕ್ಷೆ ಈಗ ನಿಜವಾಗಿದೆ. ಒಪ್ಪಂದದಿಂದಾಗಿ ವಾಲ್‌ಮಾರ್ಟ್‌ನ ಮಾರುಕಟ್ಟೆ ಮೌಲ್ಯ ಕುಸಿತಗೊಂಡಿದ್ದರೆ, ಅಮೆಜಾನ್‌ ಷೇರುಗಳು ಲಾಭ ಬಾಚಿಕೊಂಡಿವೆ.

ಲಾಭ ಬಾಚಿಕೊಂಡವರು
ಫ್ಲಿಪ್‌ಕಾರ್ಟ್‌ನ ಸ್ಥಾಪಕರು, ಬಂಡವಾಳ ಹೂಡಿಕೆದಾರರು ಮತ್ತು ನೌಕರರ ಸಂಪತ್ತು ಹೆಚ್ಚಿದೆ. ಅನೇಕ ನೌಕರರು ರಾತ್ರಿ ಬೆಳಗಾಗುವುದರ ಒಳಗೆ ಲಕ್ಷಾಧಿಪತಿಗಳಾಗಲಿದ್ದಾರೆ.

ಅಸೆಲ್ ಪಾರ್ಟನರ್ಸ್‌, ಟೈಗರ್‌ ಗ್ಲೋಬಲ್‌ ಮ್ಯಾನೇಜ್‌ಮೆಂಟ್‌, ಜಪಾನಿನ ಸಾಫ್ಟ್‌ಬ್ಯಾಂಕ್‌ ಗ್ರೂಪ್‌ ಲಾಭ ಬಾಚಿಕೊಳ್ಳಲಿವೆ. ತಮ್ಮ ಪಾಲು ಮಾರಾಟ ಮಾಡಿ ಸಂಸ್ಥೆಯಿಂದ ಹೊರ ನಡೆಯುವುದರಿಂದ ಈ ಸಂಸ್ಥೆಗಳು ಒಟ್ಟಾರೆ ₹ 53,600 ಕೋಟಿಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲಿವೆ.

ಸ್ಟಾರ್ಟ್‌ಅ‍ಪ್‌ ಕ್ಷೇತ್ರಕ್ಕೆ
ಸ್ಥಳೀಯ ನವೋದ್ಯಮಗಳಲ್ಲಿ ಬಂಡವಾಳ ಹೂಡಲು ವಿದೇಶಿ ಹೂಡಿಕೆದಾರರಿಗೆ ಸ್ಪೂರ್ತಿ ನೀಡಲಿದೆ. ಎರಡು ವರ್ಷಗಳಿಂದ ಕುಂಠಿತಗೊಂಡಿರುವ ಸ್ಟಾರ್ಟ್‌ಅಪ್‌ಗಳ ಸ್ಥಾಪನೆಗೆ ಮತ್ತೆ ಉತ್ತೇಜನ ಸಿಗಲಿದೆ.

ಇ–ಕಾಮರ್ಸ್‌ ಕ್ಷೇತ್ರಕ್ಕೆ
ದೇಶಿ ಇ–ಕಾಮರ್ಸ್‌ ಕ್ಷೇತ್ರವು ಲಾಭ – ನಷ್ಟ ಎರಡನ್ನೂ ಕಾಣಲಿದೆ. ಇಲ್ಲಿನ ಇ–ಕಾಮರ್ಸ್‌ನ ಒಟ್ಟಾರೆ ವಹಿವಾಟು ಇನ್ನು ಮುಂದೆ ಅಮೆರಿಕದ ಎರಡು ಬೃಹತ್‌ ಸಂಸ್ಥೆಗಳ ನಿಯಂತ್ರಣದಲ್ಲಿ ಇರಲಿದೆ. ಎರಡೂ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಪೈಪೋಟಿ ನಡೆಸುವುದರಿಂದ ಬಳಕೆದಾರರು ರಿಯಾಯ್ತಿ ಕೊಡುಗೆಗಳ ಪ್ರಯೋಜನ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.