ADVERTISEMENT

ಪೇಟೆಯಲ್ಲಿ ಮಾರಾಟ ಒತ್ತಡ ಸೂಚ್ಯಂಕ 130 ಅಂಶ ಇಳಿಕೆ

ಪಿಟಿಐ
Published 22 ಮಾರ್ಚ್ 2018, 20:13 IST
Last Updated 22 ಮಾರ್ಚ್ 2018, 20:13 IST

ಮುಂಬೈ: ಕೆಲವು ಷೇರುಗಳು ಲಾಭ ಗಳಿಕೆ ಉದ್ದೇಶದ ವಹಿವಾಟಿಗೆ ಒಳಗಾಗಿದ್ದರಿಂದ ಗುರುವಾರದ ವಹಿವಾಟಿನಲ್ಲಿ ಷೇರುಪೇಟೆ ಸೂಚ್ಯಂಕ ಇಳಿಕೆ ಕಂಡಿತು.

ಜಾಗತಿಕ ‘ವಾಣಿಜ್ಯ ಸಮರ’ದ ಭೀತಿ ಮತ್ತು ಯುರೋಪಿನ ಷೇರುಪೇಟೆಯಲ್ಲಿ ಆದ ನಷ್ಟದ ಪ್ರಭಾವದಿಂದ ದೇಶದ ಷೇರುಪೇಟೆಯಲ್ಲಿ ರಿಯಲ್‌ ಎಸ್ಟೇಟ್‌, ತಂತ್ರಜ್ಞಾನ, ವಾಹನ ಮತ್ತು ಬ್ಯಾಂಕಿಂಗ್‌ ಷೇರುಗಳಲ್ಲಿ ಲಾಭ ಗಳಿಕೆಯ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 130 ಅಂಶ ಇಳಿಕೆ ಕಂಡು, 33,006 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ದಿನದ ವಹಿವಾಟಿನಲ್ಲಿ 33,282ಅಂಶಗಳ ಗರಿಷ್ಠ ಮಟ್ಟವನ್ನು ತಲುಪಿತ್ತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 41 ಅಂಶ ಇಳಿಕೆಯಾಗಿ 10,114 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಎನ್‌ಎಸ್‌ಇ ಬ್ಯಾಂಕ್‌ ನಿಫ್ಟಿಯಲ್ಲಿ ವಾರದ ವಾಯಿದಾ ವಹಿವಾಟು ಮುಕ್ತಾಯದ ದಿನವಾಗಿದ್ದರಿಂದ ಬ್ಯಾಂಕಿಂಗ್ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾದವು. ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಪಿಎನ್‌ಬಿ, ಕೆನರಾ ಬ್ಯಾಂಕ್, ಆ್ಯಕ್ಸಿಸ್‌ ಬ್ಯಾಂಕ್‌, ಯೆಸ್‌ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾ ಶೇ 2.62 ರವರೆಗೆ ನಷ್ಟ ಕಂಡಿವೆ.

**

ಷೇರು ಮಾರಾಟಕ್ಕೆ ದೊರಕುತ್ತಿರುವ ಪ್ರತಿಯೊಂದು ಅವಕಾಶವನ್ನೂ ಹೂಡಿಕೆದಾರರು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ವಿನೋದ್‌ ನಾಯರ್‌, ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸ್‌ನ ಸಂಶೋಧನಾ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.