ADVERTISEMENT

ಫೆ.28ರಂದು ಕಾರ್ಮಿಕ ಸಂಘಟನೆಗಳ ಮುಷ್ಕರ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಬೆಂಗಳೂರು: ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಆರ್ಥಿಕ ನೀತಿಗಳನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಫೆಬ್ರುವರಿ 28ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಷ್ಟ್ರೀಯ ಉಪ ಪ್ರಧಾನ ಕಾರ್ಯದರ್ಶಿ ಸುರವರಂ ಸುಧಾಕರ ರೆಡ್ಡಿ ಹಾಗೂ ಕಾರ್ಯದರ್ಶಿ ಡಿ. ರಾಜಾ ಹೇಳಿದರು.

ಪಕ್ಷದ 21ನೇ ರಾಜ್ಯ ಸಮ್ಮೇಳನದ ಅಂಗವಾಗಿ ಇಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, `ಈ ಮುಷ್ಕರದಲ್ಲಿ ಎಡಪಂಥೀಯ ಕಾರ್ಮಿಕ ಸಂಘಟನೆಗಳು ಮಾತ್ರ ಪಾಲ್ಗೊಳ್ಳುತ್ತಿಲ್ಲ. ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಕೂಡ ಇದರಲ್ಲಿ ಪಾಲ್ಗೊಳ್ಳಲಿದೆ~ ಎಂದು ತಿಳಿಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯಸಭಾ ಸದಸ್ಯರೂ ಆಗಿರುವ ರಾಜಾ, `ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಶತಪ್ರಯತ್ನ ನಡೆಸುತ್ತಿದೆ. ಬಹು ಬ್ರಾಂಡ್ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪೆನಿಗಳ ನಿಯಂತ್ರಣಕ್ಕೆ ದೇಶದಲ್ಲಿ ಸೂಕ್ತ ಕಾನೂನು ಇಲ್ಲ~ ಎಂದು ಹೇಳಿದರು.

ಲೋಕಪಾಲ:ಬಲಿಷ್ಠ ಲೋಕಪಾಲ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಮನಸ್ಸಿಲ್ಲ. ಈ ಕಾರಣಕ್ಕೇ ಅದು ಲೋಕಪಾಲ ಮಸೂದೆಯ ಕುರಿತು ಅರ್ಥಪೂರ್ಣ ಚರ್ಚೆಗೆ ಸಿದ್ಧವಿಲ್ಲ ಎಂದು ಟೀಕಿಸಿದರು.

ಪರ್ಯಾಯ ರಾಜಕೀಯ: ಆರ್ಥಿಕ ನೀತಿಗಳ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ದೇಶಕ್ಕೆ ಪರ್ಯಾಯ ರಾಜಕೀಯ ಮತ್ತು ಆರ್ಥಿಕ ನೀತಿ ಬೇಕು, ಇದು ಸಾಮಾಜಿಕ ಸಂಘರ್ಷದ ಮೂಲಕವೇ ವಿಕಾಸಗೊಳ್ಳುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಪಕ್ಷ ಅನುಸರಿಸಬೇಕಾದ ಹಾದಿಯ ಕುರಿತು ಪಟ್ನಾದಲ್ಲಿ ಮಾರ್ಚ್ 27ರಿಂದ 31ರವರೆಗೆ ನಡೆಯಲಿರುವ ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಂಡಿತ್ ಜವಾಹರಲಾಲ್ ನೆಹರೂ ಕಾಲದಿಂದ ಭಾರತ ಅನುಸರಿಸಿಕೊಂಡು ಬಂದಿರುವ ಅಲಿಪ್ತ ವಿದೇಶಾಂಗ ನೀತಿಯನ್ನು ಯುಪಿಎ ಸರ್ಕಾರ ಕೂಡ ಪಾಲಿಸಬೇಕಿತ್ತು. ಆದರೆ ಡಾ. ಮನಮೋಹನ್ ಸಿಂಗ್ ಸರ್ಕಾರ ಅಮೆರಿಕದತ್ತ ಹೆಚ್ಚೆಚ್ಚು ವಾಲುತ್ತಿದೆ ಎಂದು ಸುಧಾಕರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ರಾಜ್ಯ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ ಮತ್ತಿತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.