ADVERTISEMENT

ಫೌಂಡ್ರಿ ತರಬೇತಿ ಕೇಂದ್ರ ಸ್ಥಾಪನೆ ಯೋಜನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2011, 19:30 IST
Last Updated 2 ಅಕ್ಟೋಬರ್ 2011, 19:30 IST

ಬೆಂಗಳೂರು: ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ (ಐಐಎಫ್) ಅಧ್ಯಕ್ಷರಾಗಿ ಬೆಂಗಳೂರಿನ ಡಾ. ಎಚ್ ಸುಂದರ ಮೂರ್ತಿ ಆಯ್ಕೆಯಾಗಿದ್ದಾರೆ.

ಐಐಎಫ್‌ನ 60 ವರ್ಷಗಳ ಇತಿಹಾಸದಲ್ಲಿ  ಕರ್ನಾಟಕದವರೊಬ್ಬರು ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಇದೇ ಮೊದಲು.

`ಎರಕದ (ಫೌಂಡ್ರಿ) ಉದ್ಯಮ ಕುಶಲ ಮತ್ತು ಕೌಶಲ್ಯರಹಿತ ಉದ್ಯೋಗಿಗಳ ಕೊರತೆಯಿಂದ ತತ್ತರಿಸುತ್ತಿದೆ. ಈ ಕೊರತೆ ನೀಗಿಸುವ ಪ್ರಯತ್ನ ನಡೆಯಬೇಕಿದೆ. ಇದಕ್ಕಾಗಿ ಐಐಎಫ್ ರುಡ್‌ಸೆಟ್ ಮಾದರಿಯಲ್ಲಿ ಫೌಂಡ್ರಿ ತರಬೇತಿ ಕೇಂದ್ರ ಸ್ಥಾಪಿಸುವ ಉದ್ದೇಶ ಹೊಂದಿದೆ ಎಂದರು. 2009-10ರಲ್ಲಿ 70.4 ಲಕ್ಷ ಟನ್ ಎರಕ (ಕಾಸ್ಟಿಂಗ್) ಉತ್ಪಾದಿಸಿದ ಭಾರತ, ವಿಶ್ವದಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಇದು ಹಿಂದಿನ ವರ್ಷಕ್ಕಿಂತ ಶೇ 20 ರಷ್ಟು ಅಧಿಕ. ವಾಹನ, ಸೇನೆ (ಭದ್ರತೆ), ರೈಲ್ವೆ ಮತ್ತು ಎಂಜಿನಿಯರಿಂಗ್ ಉದ್ಯಮಗಳಿಗೆ ಅಗತ್ಯವಿರುವ ಸಾಧನ, ಸಲಕರಣೆಗಳನ್ನು ಫೌಂಡ್ರಿ ಉದ್ಯಮವು ಒದಗಿಸುತ್ತಿದೆ ಎಂದು ಹೇಳಿದರು.

ದೇಶದ ಒಟ್ಟಾರೆ ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ಕರ್ನಾಟಕದ  ಪಾಲು ಶೇ 30ರಷ್ಟು ಪಾಲಿದೆ. ಬೀಡು ಕಬ್ಬಿಣ (ಪಿಗ್ ಐರನ್) ಉತ್ಪಾದಿಸಲು ಫೌಂಡ್ರಿ ಉದ್ಯಮಕ್ಕೆ 35- 40 ಲಕ್ಷ ಟನ್‌ನಷ್ಟು ಉತ್ತಮ ದರ್ಜೆಯ ಕಬ್ಬಿಣದ ಅಗತ್ಯವಿದೆ.

ಆದರೆ, ಕರ್ನಾಟಕದಲ್ಲಿ ಗಣಿಗಾರಿಕೆಯ ಮೇಲೆ ನಿರ್ಬಂಧ ಹೇರಿರುವ ಕಾರಣ ಬೀಡು ಕಬ್ಬಿಣ ಮತ್ತು ಸ್ಕ್ರಾಪ್ ಮತ್ತಿತರ ಕಚ್ಚಾ ವಸ್ತುಗಳ ಕೊರತೆ, ಬೆಲೆ ಏರಿಕೆ ಸಮಸ್ಯೆ ಎದುರಾಗಿದೆ. ಇದನ್ನು ಪರಿಹರಿಸುವ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಇಲ್ಲದಿದ್ದರೆ ಈ ಉದ್ಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.

ಮುಂದಿನ ವರ್ಷದ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ 60ನೇ ಇಂಡಿಯನ್ ಫೌಂಡ್ರಿ ಕಾಂಗ್ರೆಸ್ ಮತ್ತು 2ನೇ ಏಷ್ಯಾ ಫೌಂಡ್ರಿ ಫೋರಮ್ ಸಮಾವೇಶ ನಡೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.