ADVERTISEMENT

ಬಜೆಟ್: ನಿದ್ದೆಗೆಡಿಸುವ ವಿದ್ಯಮಾನ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST
ಬಜೆಟ್: ನಿದ್ದೆಗೆಡಿಸುವ ವಿದ್ಯಮಾನ
ಬಜೆಟ್: ನಿದ್ದೆಗೆಡಿಸುವ ವಿದ್ಯಮಾನ   

`ಸಬ್ಸಿಡಿ (ರಿಯಾಯ್ತಿ) ಮೊತ್ತವು ಭಾರಿ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ನನ್ನ ಚಿಂತೆಗೆ ಕಾರಣವಾಗಿದ್ದು, ಅದರಿಂದ ನನಗೆ ಸರಿಯಾಗಿ ನಿದ್ದೆಯೂ ಬರುತ್ತಿಲ್ಲ~ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಇತ್ತೀಚೆಗೆ ಅಲವತ್ತುಕೊಂಡಿದ್ದರು.

ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷದ ಕಾರಣ ತೈಲ ಬೆಲೆಯು ರಾಕೆಟ್‌ನಂತೆ ನೆಗೆಯುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಮುಂದಿನ ನವೆಂಬರ್‌ನಲ್ಲಿ ನಡೆಯುವ ಅಮೆರಿಕ ಅಧ್ಯಕ್ಷರ ಚುನಾವಣೆಯ ನಂತರ ಇರಾನ್‌ನ ಪರಮಾಣು ನೆಲೆಗಳ ಮೇಲೆ ವೈಮಾನಿಕ ದಾಳಿಯೂ ನಡೆಯಬಹುದು ಎಂದು ಕೆಲವರು ಭಯಪಡುತ್ತಿದ್ದಾರೆ.

ಹಾಗಿದ್ದರೆ ಪೆಟ್ರೋಲ್ ಬೆಲೆ ಊಹೆಗೂ ಸಿಗದ ಮಟ್ಟಕ್ಕೆ ಏರುವುದು ನಿಶ್ಚಿತ. ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ಒಂದು ಡಾಲರ್ ಹೆಚ್ಚಿದರೂ ಕೂಡಾ ಸಬ್ಸಿಡಿ ನೀಡುವ ಸರ್ಕಾರ ಮತ್ತು ತೈಲ ಕಂಪೆನಿಗಳ ಮೇಲೆ ವಾರ್ಷಿಕ ರೂ. 7 ಸಾವಿರ ಕೋಟಿಗೂ ಅಧಿಕ ಹೊರೆ ಬೀಳುತ್ತದೆ.

ಒಂದು ವೇಳೆ ತೈಲದ ಬೆಲೆ ಅಂದಾಜು 15 ಡಾಲರ್‌ನಷ್ಟು ಹೆಚ್ಚಿದರೆ ರೂ.1 ಲಕ್ಷ ಕೋಟಿಗಳಷ್ಟು ಹೆಚ್ಚುವರಿ ಸಬ್ಸಿಡಿ ವೆಚ್ಚ ಸರ್ಕಾರದ ಮೇಲೆ ಬೀಳುತ್ತದೆ. ಮುಂದಿನ ಹಣಕಾಸು ವರ್ಷದಲ್ಲಿ ತೈಲ ಬೆಲೆ ಎಷ್ಟಿರುತ್ತದೆ ಎಂದು ಯಾರಿಗೂ ಅಂದಾಜಿಸಲು ಸಾಧ್ಯವಾಗದೆ ಇರುವುದರಿಂದ ಬಜೆಟ್ ರೂಪಿಸುವುದು ಇನ್ನಷ್ಟು ಕಷ್ಟ.
 
ಸರ್ಕಾರ ಹೊರಗಿನಿಂದ ಸಾಲ ಪಡೆಯುವ ಪ್ರಮಾಣ ಈಗಾಗಲೇ ರೂ. 5 ಲಕ್ಷ ಕೋಟಿಗಳಿಗೆ ಮೀರಿದೆ. 2011-12ರ ಬಜೆಟ್ ಅಂದಾಜಿನಲ್ಲಿ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಎತ್ತಲಿರುವ ಸಾಲದ ಪ್ರಮಾಣ ರೂ. 4.17 ಲಕ್ಷ ಕೋಟಿಗಳು ಎಂದು ಅಂದಾಜಿಸಲಾಗಿತ್ತು.

ಯೂರಿಯಾ ಪ್ರಮುಖ ರಸಗೊಬ್ಬರವಾಗಿದ್ದು, ಅದಕ್ಕೆ ನೀಡುವ ಸಬ್ಸಿಡಿ ಸರ್ಕಾರದ ಮೇಲೆ ದೊಡ್ಡ ಹೊರೆ ಹೇರುತ್ತಿದೆ. ಆಮದು ಮಾಡಿಕೊಳ್ಳುವ ಯೂರಿಯಾದ ಬೆಲೆ ಹೆಚ್ಚ್ದ್ದಿದಕ್ಕೆ ಪ್ರತಿಯಾಗಿ ದೇಶೀಯವಾಗಿ ಮಾರಾಟ ಮಾಡುವ ಯೂರಿಯಾ ಬೆಲೆಯನ್ನು ಹೆಚ್ಚಿಸುವಂತಿಲ್ಲ. ಇದರಿಂದಾಗಿ ಸಬ್ಸಿಡಿ ರೂಪದಲ್ಲಿ ಅಧಿಕ ಹಣವನ್ನು ಸರ್ಕಾರ ಭರಿಸಬೇಕಾಗುತ್ತದೆ.

ಮುಂದಿನ ಹಣಕಾಸು ವರ್ಷದಲ್ಲಿ ಉದ್ದೇಶಿತ ಆಹಾರ ಭದ್ರತೆ ಮಸೂದೆ ಜಾರಿಗೆ ಬರುವ ಸಾಧ್ಯತೆ ಇದ್ದು, ಬಡವರಿಗೆ ಸಬ್ಸಿಡಿ ದರದಲ್ಲಿ ಹೆಚ್ಚಿನ ಪ್ರಮಾಣದ ಆಹಾರ ಧಾನ್ಯ ಒದಗಿಸಬೇಕಾಗುತ್ತದೆ. ಇದರಿಂದ ಸರ್ಕಾರದ ಮೇಲಿನ ಸಬ್ಸಿಡಿ ಹೊರೆ ಇನ್ನಷ್ಟು ಹೆಚ್ಚಲಿದೆ.

ಹಣಕಾಸು ಸಚಿವರು ನಿದ್ದೆ ಕಳೆದುಕೊಳ್ಳಲು ಇನ್ನೊಂದು ಕಾರಣ ಇದೆ, ಅದುವೇ ನಿರೀಕ್ಷಿಸಿದ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಆಗದಿರುವುದು. ಆರ್ಥಿಕ ಪ್ರಗತಿ ಶೇ 9ರಷ್ಟು ಇರುತ್ತದೆ ಎಂಬ ನಿರೀಕ್ಷೆಗೆ ಬದಲಾಗಿ ಶೇ 6.9ರಷ್ಟು ಮಾತ್ರ ಆಗಿರುವುದು ಇದಕ್ಕೆ ಕಾರಣ.

ಆರ್ಥಿಕ ಹಿಂಜರಿತದಿಂದ ಜರ್ಜರಿತವಾಗಿರುವ ಅಮೆರಿಕ, ಐರೋಪ್ಯ ಸಮುದಾಯ ಮತ್ತು ಜಪಾನ್‌ಗಳು ಸದ್ಯ ಆ ಆಘಾತದಿಂದ ಮೇಲೆ ಬರುವ ಸಾಧ್ಯತೆಗಳು ಇಲ್ಲ. ಹೆಚ್ಚುತ್ತಿರುವ ತೈಲ ಬೆಲೆಯು ಜಾಗತಿಕ ಆರ್ಥಿಕ ಹಿನ್ನಡೆಯನ್ನು ಮತ್ತಷ್ಟು ಬಿಗಡಾಯಿಸಲಿದೆ.
 
ಇದರ ದುಷ್ಪರಿಣಾಮ ಭಾರತದ ಮೇಲೆ ದೊಡ್ಡದಾಗಿಯೇ ಪರಿಣಮಿಸಿದ್ದು, ಇಂಧನಕ್ಕಾಗಿ ಅಧಿಕ ವೆಚ್ಚ ಮಾಡಿ ಹಣದುಬ್ಬರ ಪ್ರಮಾಣ ಇನ್ನಷ್ಟು ಉಲ್ಬಣಗೊಳ್ಳುವಂತಾಗಿ ತೆರಿಗೆ ಸಂಗ್ರಹ ಪ್ರಮಾಣವನ್ನು ಕಡಿತಗೊಳಿಸುತ್ತದೆ.

ಹಣದುಬ್ಬರ ಹೆಚ್ಚಿದಂತೆ ಆರ್‌ಬಿಐ ಕೂಡ ಹೂಡಿಕೆದಾರರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗುವಂತೆ ಬಡ್ಡಿ ದರವನ್ನು ಇಳಿಸುವುದು ಅನಿವಾರ್ಯವಾಗುತ್ತದೆ. 2011-12ರಲ್ಲಿ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಷೇರು ವಿಕ್ರಯದ ಮೂಲಕ ರೂ. 40 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಹಣಕಾಸು ಸಚಿವರು ಇಟ್ಟುಕೊಂಡಿದ್ದರು. ಆದರೆ, ಷೇರು ಮಾರುಕಟ್ಟೆ ಕುಸಿದಿರುವುದರಿಂದ ಅವರು ನಿರೀಕ್ಷಿಸಿದಷ್ಟು ವರಮಾನ ಬರುವುದು ಸಾಧ್ಯವಿಲ್ಲದಂತಾಗಿದೆ.

ಒಎನ್‌ಜಿಸಿಯ ಶೇ 5ರಷ್ಟು ಷೇರುಗಳನ್ನು ಮಾರಾಟ ಮಾಡಲು ಸರ್ಕಾರ ಈಚೆಗೆ ಯತ್ನಿಸಿತ್ತು. ಆದರೆ, ಅದು ಸಮರ್ಪಕವಾಗಿ ಈಡೇರಲಿಲ್ಲ. ಸರ್ಕಾರವು  ಜೀವ ವಿಮಾ ನಿಗಮದ (ಎಲ್‌ಐಸಿ) ಪುಸಲಾಯಿಸಿ ಖಾಸಗಿ ಹೂಡಿಕೆದಾರರು ನೀಡಲು ಮುಂದಾಗಿದ್ದ ದರಕ್ಕಿಂತ ಶೇ 5ರಷ್ಟು ಅಧಿಕ ಷೇರುಗಳನ್ನು ಖರೀದಿಸುವಂತೆ ಮಾಡಿತು.
 
ಒಟ್ಟು ಷೇರುಗಳಲ್ಲಿ ಶೇ 80ರಷ್ಟು ಷೇರುಗಳನ್ನು `ಎಲ್‌ಐಸಿ~ಯೇ ಖರೀದಿಸಿತು. ಸರ್ಕಾರದ ಬಜೆಟ್ ಅನ್ನು `ಸುರಕ್ಷಿತ~ವಾಗಿ ಇಡುವುದಕ್ಕಾಗಿ `ಎಲ್‌ಐಸಿ;ಯು ರೂ. 750 ಕೋಟಿ ರೂಪಾಯಿಗಳಷ್ಟು ಹೂಡಿಕೆದಾರರ ಹಣವನ್ನು ಕಳೆದುಕೊಳ್ಳುವಂತಾಗಿದೆ.

ಈ ಎಲ್ಲಾ ಆರ್ಥಿಕ ಅಡ್ಡಿಗಳಿಂದಾಗಿ 2011-12ನೇ ಸಾಲಿನಲ್ಲಿ ವಿತ್ತೀಯ ಕೊರತೆ ಜಿಡಿಪಿಯ ಶೇ 4.6ರಷ್ಟಾಗಬಹುದು ಎಂಬ ಅಂದಾಜಿನ ಬದಲಾಗಿ ಅದು ಶೇ 6ರಷ್ಟಾಗುವ ಸಾಧ್ಯತೆ ಕಂಡುಬಂದಿದೆ.

ಇದರರ್ಥ ಏನೆಂದರೆ ಹಣದ ಲಭ್ಯತೆ ಇಲ್ಲವಾಗಿರುವುದರಿಂದ ಅಥವಾ ಅಧಿಕ ಸಾಲ ಮಾಡಿ ಹಣ ತರಿಸಿಕೊಳ್ಳುವುದರಿಂದ ಖಾಸಗಿ ಹೂಡಿಕೆದಾರರಿಗೆ ಅಧಿಕ ವೆಚ್ಚ ಬೀಳುತ್ತದೆ, ಇದರಿಂದ ಸಹಜವಾಗಿಯೇ ಖಾಸಗಿ ಹೂಡಿಕೆದಾರಿಕೆಗೆ ಹಿನ್ನಡೆಯಾಗುವಂತಾಗುತ್ತದೆ.

ಅಧಿಕಗೊಳ್ಳುವ ತೈಲ ಆಮದು ವೆಚ್ಚ, ಜಾಗತಿಕ ಆರ್ಥಿಕ ಹಿನ್ನಡೆಯಿಂದ ರಫ್ತಿನಲ್ಲಿ ಇಳಿಮುಖ ಮತ್ತು ಅತಂತ್ರ ಹಣಕಾಸು ನೀತಿಯಿಂದಾಗಿ ಬಂಡವಾಳ ಹರಿದುಬರುವ ಪ್ರಮಾಣ ಕಡಿಮೆಯಾಗುತ್ತದೆ. ಇದು ರೂಪಾಯಿಯ ಮೌಲ್ಯವನ್ನು ದುರ್ಬಲಗೊಳಿಸುವುದು ಮಾತ್ರವಲ್ಲದೆ, ಸಾಲ ಮರುಪಾವತಿಯ ಶಕ್ತಿಯನ್ನೂ ಕುಗ್ಗಿಸುತ್ತದೆ.

ಹಣದುಬ್ಬರ ಇನ್ನಷ್ಟು ಹೆಚ್ಚುವುದು ಮಾತ್ರವಲ್ಲದೆ, ತೈಲ ಸಹಿತ ಎಲ್ಲಾ ವಸ್ತುಗಳ ಬೆಲೆಯೂ ಗಗನಕ್ಕೇರಿ ಬದುಕು ದುಸ್ತರವಾಗುತ್ತದೆ. ಸರ್ಕಾರಕ್ಕೆ ಸಬ್ಸಿಡಿಯ ಹೊರೆ ಹೊರಲಾರದ ಹಂತಕ್ಕೆ ತಲುಪಲಿದೆ.

ನಮ್ಮ ಆರ್ಥಿಕ ರಂಗ ದೀರ್ಘಾವಧಿಯಲ್ಲಿ ಶೇ 9ರಷ್ಟು ಪ್ರಗತಿ ಸಾಧಿಸುತ್ತದೆ ಎಂದು ಲೆಕ್ಕ ಹಾಕುವುದಕ್ಕೆ ಶೇ 36ಕ್ಕಿಂತ ಅಧಿಕ ಪ್ರಮಾಣದಲ್ಲಿದ್ದ ಉಳಿತಾಯ ವ್ಯವಸ್ಥೆ ಕಾರಣವಾಗಿತ್ತು. ಆದರೆ, ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡಾವಾರು ಲೆಕ್ಕದಲ್ಲಿ ಹೇಳುವುದಾದರೆ 2007-08ರಲ್ಲಿದ್ದ ಶೇ 36.8ರಷ್ಟು ಉಳಿತಾಯ 2010-11ರಲ್ಲಿ ಶೇ 32.4ಕ್ಕೆ ಕುಸಿದಿದೆ. ಸರ್ಕಾರಿ ಸ್ವಾಮ್ಯದಲ್ಲಿನ ಉಳಿತಾಯ ಶೇ 3.3ರಷ್ಟು ಕುಸಿತವಾಗಿರುವುದೇ ಇದಕ್ಕೆ ಕಾರಣ.

ಪ್ರಧಾನಿ ಮತ್ತು ಹಣಕಾಸು ಸಚಿವರ ಸಹಿತ ಎಲ್ಲಾ ಸೂಕ್ಷ್ಮಗ್ರಾಹಿ ಅರ್ಥಶಾಸ್ತ್ರಜ್ಞರಿಗೂ ಇಂತಹ ಸ್ಥಿತಿಯಲ್ಲಿ ಏನು ಮಾಡಬೇಕು ಎಂಬುದು ಗೊತ್ತಿದೆ. ಅನುಪಯುಕ್ತ ಮತ್ತು ಸಮರ್ಪಕ ಗೊತ್ತು ಗುರಿ ಇಲ್ಲದ ಸಬ್ಸಿಡಿಗಳನ್ನು ಕಡಿತಗೊಳಿಸುವುದು, ಈ ಮೊದಲು ಪ್ರಕಟಿಸಿದ್ದ ಉತ್ತೇಜನಾ ಕ್ರಮಗಳಿಗಿಂತ ಮೊದಲು ಇದ್ದ ಸ್ಥಿತಿಗೆ ಅಬಕಾರಿ ಮತ್ತು ತೆರಿಗೆ ದರಗಳನ್ನು ತರುವುದು, ಸೇವಾ ತೆರಿಗೆ ಜಾಲವನ್ನು ವಿಸ್ತರಿಸುವುದು, ಬಂಡವಾಳ ವೆಚ್ಚದ ಪ್ರಮಾಣ ಹೆಚ್ಚಿಸುವುದು, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಮತ್ತು ರೈಲ್ವೆಯ ಸಾಧನೆ  ಸುಧಾರಿಸುವುದರ ಜತೆಗೆ ಸಬ್ಸಿಡಿ, ಸಾರ್ವಜನಿಕ ಸೇವೆಗಳಂತಹ ವಿಚಾರಗಳಲ್ಲಿ ಸೋರಿಕೆ ತಡೆಗಟ್ಟುವಂತಹ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಜತೆಗೆ ಹೆಚ್ಚಿನ ತೆರಿಗೆ ರಿಯಾಯ್ತಿಗಳ ಬದಲಿಗೆ ಬೃಹತ್ ಯೋಜನೆಗಳಿಗೆ ಭೂಸ್ವಾಧೀನ, ಅನುಮತಿ ನೀಡಿಕೆಯ್ಲ್ಲಲಿ ಅತಂತ್ರ ಸ್ಥಿತಿ ನಿವಾರಿಸಿ ಹೂಡಿಕೆಯ ವಾತಾವರಣ ನಿರ್ಮಿಸಿಕೊಡಬೇಕು. ಉತ್ತಮ ತೆರಿಗೆ ಸಂಗ್ರಹ, ಹೆಚ್ಚಿನ ಸಮಾನತೆ ಹಾಗೂ ವ್ಯಾಜ್ಯ ವೆಚ್ಚಗಳನ್ನು ಕಡಿತಗೊಳಿಸುವಂತೆ ಮಾಡಿ ರಿಯಾಯ್ತಿ ಮತ್ತು ಭತ್ಯೆಯ ಕೊಡುಗೆಗಳನ್ನು ಬಹುತೇಕ ಕೈಬಿಡಬೇಕಾಗಬಹುದು.

ಉತ್ತರ ಪ್ರದೇಶ, ಪಂಜಾಬ್, ಗೋವಾಗಳಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ನಿರೀಕ್ಷೆಗಳೆನ್ನೆಲ್ಲ ಹುಸಿಗೊಳಿಸಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆ ಉಂಟುಮಾಡಿದೆ.
ಸಹಜವಾಗಿಯೇ ಟಿಎಂಸಿ, ಡಿಎಂಕೆಯಂತಹ ಯುಪಿಎ ಅಂಗಪಕ್ಷಗಳು ತಮ್ಮ ಮುಷ್ಟಿಯನ್ನು ಇನ್ನಷ್ಟು ಬಿಗಿಗೊಳಿಸಲಿವೆ. ಹೀಗಾದರೆ ಮುಂದಿನ 2 ವರ್ಷಗಳ ಕಾಲ ಜನಪ್ರಿಯ ಯೋಜನೆಗಳನ್ನು ಕೈಬಿಡುವುದು ಯುಪಿಎ ಸರ್ಕಾರಕ್ಕೆ ಕಷ್ಟವಾಗಬಹುದು.
ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗುವ ಸಂಭವ ತೀರಾ ಹೆಚ್ಚಾಗಿದೆ. ಹಣಕಾಸು ಸಚಿವರು ತಮ್ಮ ನಿದ್ರಾಹೀನತೆಯಿಂದ ಹೊರಬರಲು ತಮ್ಮ ನಿದ್ದೆ ಗುಳಿಗೆ ಸೇವಿಸುವ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.