ADVERTISEMENT

ಬಣ್ಣದ ಹತ್ತಿಯ ವಿವಾದ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2011, 19:30 IST
Last Updated 29 ಸೆಪ್ಟೆಂಬರ್ 2011, 19:30 IST
ಬಣ್ಣದ ಹತ್ತಿಯ ವಿವಾದ
ಬಣ್ಣದ ಹತ್ತಿಯ ವಿವಾದ   

ಹುಬ್ಬಳ್ಳಿ:  ಖಾದಿ ಬಟ್ಟೆಯನ್ನು ಇನ್ನಷ್ಟು ಗ್ರಾಹಕ ಸ್ನೇಹಿಯಾಗಿಸಲು ನೈಸರ್ಗಿಕವಾಗಿ ಅಭಿವೃದ್ಧಿಪಡಿಸಿರುವ ಬಣ್ಣದ ಹತ್ತಿಯು, ಮುಂಬೈನ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ (ಕೆವಿಐಸಿ) ಹಾಗೂ ಧಾರವಾಡದ ಕೃಷಿ ವಿಶ್ವವಿದ್ಯಾಲಯ ನಡುವಿನ  `ರಾಯಧನ~ (ರಾಯಲ್ಟಿ) ವಿವಾದದಿಂದಾಗಿ ಇನ್ನೂ ಬಳಕೆಗೆ ಬಂದಿಲ್ಲ.

ಒಂಬತ್ತು ವರ್ಷಗಳ ಹಿಂದೆ ಕಂದು ಬಣ್ಣದ ಹತ್ತಿಯನ್ನು ಅಭಿವೃದ್ಧಿಪಡಿಸಿ ಅಂತರರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದ್ದ ಕೃಷಿ ವಿಶ್ವವಿದ್ಯಾಲಯ, ತನ್ನ `ಬಣ್ಣದ ಹತ್ತಿ ತಾಂತ್ರಿಕತೆ~ಯನ್ನು ಕೇಂದ್ರ ಸರ್ಕಾರದ ಜವಳಿ ಇಲಾಖೆ ಅಧೀನ ಸಂಸ್ಥೆಯಾದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ನೀಡಲು ಮುಂದಾಗಿತ್ತು.

ಕೃತಕ ಬಣ್ಣ ಬಳಸಿದರೆ ಖಾದಿ ಬಟ್ಟೆಗೆ ದೀರ್ಘ ಕಾಲ ತನ್ನ ಮೆದು ಗುಣವನ್ನು ಕಾಯ್ದುಕೊಳ್ಳಲು ಸಾಧ್ಯವಾಗದು. ಜತೆಗೆ ಚರ್ಮ ರೋಗಗಳಿಂದ ರಕ್ಷಣೆ ಪಡೆಯಲು ನೈಸರ್ಗಿಕ ಬಣ್ಣದ ಹತ್ತಿ ಬಳಸಬೇಕು.  ವಿಶ್ವವಿದ್ಯಾಲಯದ ತಾಂತ್ರಿಕತೆ ಸರ್ಕಾರದ ಅಂಗ ಸಂಸ್ಥೆಗೇ ಬಳಕೆಯಾಗಲಿ ಎಂಬುದು ಒಪ್ಪಂದದ ಮೂಲ ಆಶಯವಾಗಿದೆ.

ಕಳೆದ ನವೆಂಬರ್‌ನಲ್ಲಿ ಮುಂಬೈನಲ್ಲಿ ನಡೆದ ಸಭೆಯಲ್ಲಿ ಈ ಯೋಜನೆಯ ಆರಂಭಿಕ ಹಂತದಲ್ಲಿ ಕೆವಿಐಸಿ ್ಙ 70 ಲಕ್ಷ  ಹೂಡಿಕೆಗೆ ಮುಂದಾಗಿತ್ತು. ಯೋಜನೆಯ ರೂಪುರೇಷೆಗೆ ಈಗಾಗಲೇ ಕೃಷಿ ವಿಶ್ವವಿದ್ಯಾಲಯ ಮತ್ತು ಕೆವಿಐಸಿ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದು, ನಿಗದಿಯಂತೆ ಇದೇ ಅಕ್ಟೋಬರ್ 2ರ ಒಳಗಾಗಿ ಒಪ್ಪಂದ ಅಂತಿಮ ಸ್ವರೂಪ ಪಡೆಯಬೇಕಿತ್ತು.

ವಿವಾದ: ಈ ಮಧ್ಯೆ, ತನ್ನ ತಾಂತ್ರಿಕತೆ ಬಳಸಿ ರೂಪಿಸಿದ ಖಾದಿ ಉತ್ಪನ್ನಕ್ಕೆ ಕನಿಷ್ಠ `ರಾಯಧನ~ ನಿಗದಿಗೊಳಿಸುವಂತೆ ಕೃಷಿ ವಿವಿ ಆಡಳಿತ ಮನವಿ ಮಾಡಿದೆ. ಆದರೆ ಖಾದಿ ಮಂಡಳಿಯಲ್ಲಿ `ರಾಯಧನ~ಕ್ಕೆ ಅವಕಾಶ ಇಲ್ಲ.

ಬದಲಿಗೆ ಬಣ್ಣದ ಹತ್ತಿ ಸಂಸ್ಕರಿಸಿದಾಗ ಉಳಿಯುವ ಬೀಜ ಮಾರಾಟ ಮಾಡಿ ಬಂದ  ಹಣವನ್ನು ವಿವಿಗೆ ನೀಡುವುದಾಗಿ ಹೇಳುತ್ತಿದೆ. ಇದಕ್ಕೆ ವಿವಿ ಆಡಳಿತ ಒಪ್ಪುತ್ತಿಲ್ಲ. ಇದರಿಂದ ಪ್ರಕ್ರಿಯೆ ಆರಂಭಗೊಂಡು ವರ್ಷ ಕಳೆದರೂ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ. 

ಯೋಜನೆಯ ಸ್ವರೂಪ:  ಧಾರವಾಡ ಸಮೀಪದ ಉಪ್ಪಿನಬೆಟಗೇರಿಯಲ್ಲಿ ಪ್ರಾಯೋಗಿಕವಾಗಿ 2002ರಲ್ಲಿ ಕಂದು ಬಣ್ಣದ ಹತ್ತಿ ಅಭಿವೃದ್ಧಿಪಡಿಸಿ ಗಮನ ಸೆಳೆದಿದ್ದ ಕೃಷಿ ವಿವಿಯ ಹತ್ತಿ ಸಂಶೋಧನಾ ಕೇಂದ್ರದಲ್ಲಿ ಇದೀಗ ಹಸಿರು ಬಣ್ಣದ ಹತ್ತಿಯ ತಾಂತ್ರಿಕತೆಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
 
ಒಪ್ಪಂದದ ನಂತರ ಕೆವಿಐಸಿಯ ಅಂಗ ಸಂಸ್ಥೆಯಾದ ಹುಬ್ಬಳ್ಳಿಯ ಬೆಂಗೇರಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಒಕ್ಕೂಟಕ್ಕೆ ಕೃಷಿ ವಿಶ್ವವಿದ್ಯಾಲಯ ಈ ತಾಂತ್ರಿಕತೆಯನ್ನು ನೀಡಲಿದೆ.

ರೈತರಿಂದ ಬಣ್ಣದ ಹತ್ತಿ ಬೆಳೆಸಲಿರುವ ಖಾದಿ ಒಕ್ಕೂಟ ನಂತರ ತಾನೇ ಖರೀದಿಸಿ ತನ್ನ ಉತ್ಪನ್ನಗಳಿಗೆ ಬಳಸಿಕೊಳ್ಳಲಿದೆ. ಧಾರವಾಡ ಜಿಲ್ಲೆಯ 200 ರೈತರು ಬಣ್ಣದ ಹತ್ತಿ ಬೆಳೆಯಲು ಈಗಾಗಲೇ ಒಪ್ಪಿಗೆ ನೀಡಿದ್ದಾರೆ ಎನ್ನುತ್ತಾರೆ ಬೆಂಗೇರಿಯ ಖಾದಿ ಒಕ್ಕೂಟದ ಪ್ರಧಾನ ವೈಜ್ಞಾನಿಕ ಅಧಿಕಾರಿ ಡಾ.ಎಚ್.ಡಿ.ಸಿನ್ನೂರ.

`ಕೃಷಿ ವಿವಿಯ ಸಂಶೋಧನೆಯನ್ನು ರಾಯಧನ ನೀಡುವ ಮೂಲಕ ಖಾದಿ ಮಂಡಳಿ ಗೌರವಿಸಲಿ~ ಎನ್ನುವ ವಿವಿ ಹತ್ತಿ ಸಂಶೋಧನಾ ವಿಭಾಗದ ಪ್ರಧಾನ ವಿಜ್ಞಾನಿ ಡಾ.ಶ್ರೀಕಾಂತ ಎಸ್.ಪಾಟೀಲ, ಖಾಸಗಿಯವರು ತಾಂತ್ರಿಕತೆ ಕೇಳಿದರೂ ನಾವು ಕೊಟ್ಟಿಲ್ಲ.

ಅದು ಸದುದ್ದೇಶಕ್ಕೆ ಬಳಕೆಯಾಗಲಿ ಎಂಬುದು ನಮ್ಮ ಆಶಯ. ಕುಲಪತಿ ಡಾ.ಹಂಚಿನಾಳ ಅವರು, ಸದ್ಯಕ್ಕೆ ದೆಹಲಿ ಪ್ರವಾಸದಲ್ಲಿದ್ದು, ಅವರು ಮರಳಿದ ನಂತರ ಒಪ್ಪಂದ ಅಂತಿಮ ಸ್ವರೂಪ ಪಡೆಯಲಿದೆ ಎನ್ನುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.