ADVERTISEMENT

ಬೆಲೆ ಸ್ಥಿರತೆ ಅಗತ್ಯ: ಸುಬ್ಬರಾವ್

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST

ಮುಂಬೈ(ಪಿಟಿಐ): ದೀರ್ಘಾವಧಿ ಸುಸ್ಥಿರ ಪ್ರಗತಿಗೆ ಧಾರಣೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಅಗತ್ಯ. ಇದರಿಂದ ಹೂಡಿಕೆದಾರರು ಮತ್ತು ಗ್ರಾಹಕರು ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಳ್ಳಬಹುದು ಎಂದು `ಭಾರತೀಯ ರಿಸರ್ವ್ ಬ್ಯಾಂಕ್'(ಆರ್‌ಬಿಐ) ಗವರ್ನರ್ ಡಿ. ಸುಬ್ಬರಾವ್ ಅಭಿಪ್ರಾಯಪಟ್ಟರು. 

ಅಲ್ಪಾವಧಿಯಲ್ಲಿ ಬೆಲೆ ಏರಿಳಿತ ಇರುವುದು ಸಹಜ. ಆದರೆ, ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಈ ರೀತಿಯ ಏರಿಳಿತ ಇದ್ದರೆ ಅದು ಸುಸ್ಥಿರ ಪ್ರಗತಿಗೆ ಮಾರಕ ಎಂದು ಅವರು ಶುಕ್ರವಾರ ಇಲ್ಲಿ ಮಾರಿಷಸ್ ಮೂಲದ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನಲ್ಲಿ ಹೇಳಿದರು.

ಕಳೆದೊಂದು ದಶಕದಲ್ಲೇ ದೇಶದ ಆರ್ಥಿಕ ಪ್ರಗತಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಹೂಡಿಕೆ ಗಣನೀಯವಾಗಿ ತಗ್ಗಿದೆ. ಚಾಲ್ತಿ ಖಾತೆ ಕೊರತೆ(ಸಿಎಡಿ) ದಾಖಲೆ ಮಟ್ಟಕ್ಕೆ ಏರಿದೆ. ಸಗಟು ಹಣದುಬ್ಬರ ಸಲ್ಪ ಇಳಿಕೆ ಕಂಡಿದೆ. ಆದರೆ, ಇದಿನ್ನೂ `ಆರ್‌ಬಿಐ' ಅಂದಾಜಿಸಿರುವ ಹಿತಕರ ಮಟ್ಟಕ್ಕೆ ಇಳಿದಿಲ್ಲ. ಹೀಗೆ ದೇಶದ ಆರ್ಥಿಕ ಪ್ರಗತಿ ಪಥದಲ್ಲಿ ಹಲವು ಸವಾಲುಗಳಿವೆ ಎಂದು ವಿವರಣೆ ನೀಡಿದರು.

`ಹಣದುಬ್ಬರ ಈ ದೇಶದ ದೊಡ್ಡ ಸಮಸ್ಯೆಯೆ? ಎಂಬ ಪ್ರಶ್ನೆಗೆ, `ಸುಸ್ಥಿರ ಪ್ರಗತಿ ಸಾಧಿಸಬೇಕಾದರೆ ಬೆಲೆಯಲ್ಲಿ ಸ್ಥಿರತೆಯ ವಾತಾವರಣ ಇರಬೇಕು.  ಜತೆಗೆ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಎಲ್ಲ ಭರವಸೆಗಳೂ ನಿಜವಾಗುತ್ತವೆ ಎಂದು ಸುಬ್ಬರಾವ್  ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.