ADVERTISEMENT

ಬ್ಯಾಂಕ್ ದೂರು ಏರಿಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ನವದೆಹಲಿ(ಪಿಟಿಐ): ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಗ್ರಾಹಕರಿಂದ 2011-12ರಲ್ಲಿ ಒಟ್ಟು 48,180 ದೂರುಗಳು ದಾಖಲಾಗಿದ್ದು, ದೂರುಗಳ ಪ್ರಮಾಣದಲ್ಲಿ ಅಲ್ಪ ಹೆಚ್ಚಳವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮಾಹಿತಿ ನೀಡಿದ್ದಾರೆ.

ಲೋಕಸಭೆ ಪ್ರಶ್ನೋತ್ತರ ವೇಳೆ ಶುಕ್ರವಾರ ಸದನಕ್ಕೆ ಉತ್ತರಿಸಿದ ಅವರು, 2010-11ರಲ್ಲಿ 42,724 ದೂರುಗಳು `ಬ್ಯಾಂಕಿಂಗ್ ಓಂಬುಡ್ಸ್‌ಮನ್' ಅವರಲ್ಲಿ ದಾಖಲಾಗಿದ್ದವು. ಅಂದರೆ ವರ್ಷದಿಂದ ವರ್ಷಕ್ಕೆ ದೂರುಗಳ ಸಂಖ್ಯೆಯಲ್ಲಿ 5456ರಷ್ಟು ಹೆಚ್ಚಳವಾಗಿದೆ ಎಂದರು.

ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ದೇಶದ 15 ಕಡೆ ಬ್ಯಾಂಕಿಂಗ್ ಓಂಬುಡ್ಸ್‌ಮನ್ ವ್ಯವಸ್ಥೆ ಮಾಡಿದೆ. ಗ್ರಾಹಕರ ದೂರುಗಳನ್ನು 30 ದಿನಗಳೊಳಗೆ ಇತ್ಯರ್ಥಪಡಿಸಲು ಆರ್‌ಬಿಐ ಮತ್ತು ಸರ್ಕಾರ ಯತ್ನಿಸುತ್ತಿವೆ ಎಂದು ವಿವರಿಸಿದರು.

ಕದ್ದಾಲಿಕೆ-ಸೆಬಿಗೆ ಅವಕಾಶವಿಲ್ಲ: ಷೇರು ಮಾರುಕಟ್ಟೆಯಲ್ಲಿನ ಸಂಭವನೀಯ ಅಕ್ರಮ ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಕೆಲವು ದೂರವಾಣಿಗಳ ಕರೆ ಮಾಹಿತಿಯನ್ನು ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ(ಸೆಬಿ) ಕೋರಿದೆ. ಆದರೆ, ದೇಶದ ಸುರಕ್ಷತೆಗೆ ಸಂಬಂಧಿಸಿದ ಕಾನೂನು ಇಂತಹುದಕ್ಕೆ ಅನುಮತಿ ನೀಡಲು ಅವಕಾಶ ನೀಡುವುದಿಲ್ಲ. ಹಾಗಾಗಿ ಯಾವುದೇ ದೂರವಾಣಿ ಕದ್ದಾಲಿಕೆ ಅಥವಾ ದೂರವಾಣಿ ಕರೆಗಳ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಲು ಅನುಮತಿ ನೀಡಲಾಗುವುದಿಲ್ಲ ಎಂದು `ಸೆಬಿ'ಗೆ ಸ್ಪಷ್ಟಪಡಿಸಿರುವುದಾಗಿ ಹಣಕಾಸು ಖಾತೆ ರಾಜ್ಯ ಸಚಿವ ನಮೋ ನಾರಾಯಣ ಮೀನಾ ಅವರು ಲೋಕಸಭೆಗೆ ಪ್ರಶ್ನೋತ್ತರ ವೇಳೆ ಮಾಹಿತಿ ನೀಡಿದರು.

ಈ ಮೊದಲು, `ಸೆಬಿ' ಅಧ್ಯಕ್ಷ ಯು.ಕೆ.ಸಿನ್ಹಾ ಅವರು, ಷೇರು ಪೇಟೆಯಲ್ಲಿನ ಅಕ್ರಮ ವಹಿವಾಟುಗಳನ್ನು ನಿರ್ಬಂಧಿಸುವ ಸಲುವಾಗಿ ದೂರವಾಣಿ ಮಾಹಿತಿ ಸಂಗ್ರಹಣೆಗಾಗಿ ಕೇಂದ್ರ ಸರ್ಕಾರದ ಅನುಮತಿ ಕೋರಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.