ನವದೆಹಲಿ (ಪಿಟಿಐ): 2011-12 ಆರ್ಥಿಕ ವರ್ಷದಲ್ಲಿ ಭವಿಷ್ಯ ನಿಧಿ ಠೇವಣಿ ಮೇಲಿನ ಬಡ್ಡಿದರವನ್ನು ಶೇ 1.25ರಷ್ಟು ಕಡಿತಗೊಳಿಸಿರುವುದಕ್ಕೆ ತೀವ್ರ ಟೀಕೆ ಎದುರಿಸಿದ್ದ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ), 2012-13ನೇ ಆರ್ಥಿಕ ವರ್ಷದಲ್ಲಿ ಬಡ್ಡಿದರವನ್ನು ಶೇ 8.6ರವರೆಗೆ ಹೆಚ್ಚಿಸುವ ಸಾಧ್ಯತೆ ಇದೆ.
2010-2011ನೇ ಸಾಲಿನ ಭವಿಷ್ಯ ನಿಧಿ ಠೇವಣಿ ಮೇಲೆ ಶೇ 9.5ರಷ್ಟು ಬಡ್ಡಿದರ ನೀಡಿದ್ದ `ಇಪಿಎಫ್‌ಒ~, 2011-12 ಆರ್ಥಿಕ ವರ್ಷಕ್ಕಾಗಿ ಕಳೆದ ತಿಂಗಳು ಬಡ್ಡಿದರವನ್ನು ಶೇ 8.25ಕ್ಕೆ ಇಳಿಸಿತ್ತು. ಸಂಘಟನೆಯ ಈ ನಿರ್ಧಾರವು ಸಂಸತ್ತಿನ ಒಳಗಡೆ ಮತ್ತು ಹೊರಗಡೆ ತೀವ್ರ ಟೀಕೆಗೆ ಗುರಿಯಾಗಿತ್ತು.
`ಈ ಆರ್ಥಿಕ ವರ್ಷದಲ್ಲಿ ಭವಿಷ್ಯ ನಿಧಿ ಠೇವಣಿಗಳ ಮೇಲೆ ಶೇ 8.6ರಷ್ಟು ಬಡ್ಡಿದರ ನೀಡುವ ಸಲುವಾಗಿ ವರಮಾನದ ಅಂದಾಜು ಮಾಡುವ ಕಾರ್ಯದಲ್ಲಿ ಇಪಿಎಫ್‌ಒ ತೊಡಗಿದೆ~ ಈ ಬೆಳವಣಿಗೆಯಲ್ಲಿ ತೊಡಗಿಕೊಂಡಿರುವ ಮೂಲಗಳು ತಿಳಿಸಿವೆ.
ಈ ವಿಚಾರದ ಕುರಿತು ನಿರ್ಧಾರ ಕೈಗೊಳ್ಳಲು ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕೇಂದ್ರ ಟ್ರಸ್ಟಿಗಳ ಮಂಡಳಿ ಮುಂದಿನ ತಿಂಗಳು ಸಭೆ ಸೇರುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಭವಿಷ್ಯನಿಧಿ ಠೇವಣಿ ಮೇಲಿನ ಬಡ್ಡಿದರದಲ್ಲಿ ಏರಿಕೆಯಾದರೆ ಸುಮಾರು 5 ಕೋಟಿ ಚಂದಾದಾರರು ಪ್ರಯೋಜನ ಪಡೆಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.